ಪಿಎಚ್‌ಡಿ ಸಂಶೋಧನಾರ್ಥಿಗಳು ಪದವಿ ಕಾಲೇಜುಗಳಲ್ಲಿ ವಾರಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಬೋಧನೆ ಮಾಡಬೇಕೆಂದು ತುಮಕೂರು ವಿಶ್ವವಿದ್ಯಾಲಯವು ಆದೇಶ ಹೊರಡಿಸಿದೆ. ಸಂಶೋಧನಾರ್ಥಿಗಳು ಬೋಧನೆ ಮಾಡಲೇಬೇಂಕೆಂಬ ನಿಯಮವಿಲ್ಲ. ಬೋಧನೆ ಮಾಡುವ ಬಗ್ಗೆ ಸಂಶೋಧನಾರ್ಥಿಗಳು ಮತ್ತು ಅವರ ಮಾರ್ಗದರ್ಶಕರು ನಿರ್ಧರಿಸಬೇಕೇ ಹೊರತು, ವಿಶ್ವವಿದ್ಯಾಲಯವಲ್ಲ ಎಂದು ಪಿಎಚ್‌ಡಿ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಒಪ್ಪಿಗೆ ಮೇರೆಗೆ ಕುಲ ಸಚಿವರು ಅ.6ರಂದು ಆದೇಶ ಹೊರಡಿಸಿದ್ದು, “ಯುಜಿಸಿ ರೆಗ್ಯುಲೇಷನ್ಸ್-2022ರ ಅನ್ವಯ ಪಿಎಚ್‌ಡಿ ಸಂಶೋಧನಾರ್ಥಿಗಳಿಗೆ ಸಂಬಂಧಿಸಿದ ಪಿಎಚ್‌ಡಿ ವಿಷಯದಲ್ಲಿ ಬೋಧನಾ ತರಬೇತಿ ಪಡೆಯಲು ಅನುಕೂಲವಾಗುವಂತೆ 4-6 ಗಂಟೆಗಳ ಕಾರ್ಯಭಾರ ನೀಡುವಂತೆ ತಿಳಿಸಲಾಗಿದೆ. ಸಂಶೋಧನಾರ್ಥಿಗಳು ಪದವಿ ಕಾಲೇಜುಗಳಲ್ಲಿ ಬೋಧನಾ ಕಾರ್ಯಭಾರ ನಿರ್ವಹಿಸಬೇಕು” ಎಂದು ಆದೇಶಿಸಿದ್ದಾರೆ.
ಆದೇಶ ಪತ್ರದಲ್ಲಿ 59 ಸಂಶೋಧನಾರ್ಥಿಗಳ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಅವರೆಲ್ಲರನ್ನೂ ವಿವಿಧ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆ ಸೂಚನೆ ನೀಡಲಾಗಿದೆ.
ವಿಶ್ವವಿದ್ಯಾಲಯದ ಆದೇಶದಿಂದ ಸಂಶೋಧನಾರ್ಥಿಗಳು ಅಸಮಾಧಾನಗೊಂಡಿದ್ದಾರೆ. “ಯುಜಿಸಿ ನಿಯಮಾವಳಿಗಳ ಪ್ರಕಾರ, ‘ಪಿಎಚ್‌ಡಿ ಸಂಶೋಧನಾರ್ಥಿಗಳು ಅಗತ್ಯಬಿದ್ದರೆ ಮಾತ್ರವೇ ಬೋಧನೆ ಮಾಡಬಹುದು’. ಆದರೆ, ವಿಶ್ವವಿದ್ಯಾಲಯವು ಕಡ್ಡಾಯವಾಗಿ ಬೋಧನೆ ಮಾಡಬೇಕೆಂದು ಹೇಳುತ್ತಿದೆ. ಇದು ಯುಜಿಸಿ ನಿಮಯಗಳಿಗೆ ವಿರುದ್ಧವಾಗಿದೆ ಮತ್ತು ಅತಿಥಿ ಉಪನ್ಯಾಸಕರಾಗಲು ಅರ್ಜಿ ಸಲ್ಲಿಸಿರುವವರಿಗೆ ಅನ್ಯಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
ಆದೇಶ ಪ್ರತಿ ನೋಡಲು ಇಲ್ಲಿ ಕ್ಲಿಕ್ಕಿಸಿ
ವಿಶ್ವವಿದ್ಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಈದಿನ.ಕಾಮ್ ಜೊತೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ಪಿಎಚ್‌ಡಿ ಸಂಶೋಧನಾರ್ಥಿಯೊಬ್ಬರು, “ಯುಜಿಸಿ ಗೈಡ್‌ಲೈನ್ಸ್ ಪ್ರಕಾರ, ಯಾರು ಪುಲ್‌ಟೈಮ್ ಸಂಶೋಧನಾರ್ಥಿ ಆಗಿರುತ್ತಾರೆಯೋ, ಅವರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಪೂರಕವಾಗಿ 4-6 ಗಂಟೆಗಳ ಕಾಲ ಬೋಧನೆ, ಬರವಣಿಗೆ, ಸೆಮಿನಾರ್‌ಗಳನ್ನು ನೀಡಬೇಕು. ಅದು ಅಗತ್ಯವಿದ್ದರೆ ಮಾತ್ರ – ಕಡ್ಡಾಯವಲ್ಲ ಎಂದು ಹೇಳಲಾಗಿದೆ. ಬೋಧನೆ ಮಾಡುವ ಬಗ್ಗೆ ವಿಷಯ ವಿಭಾಗಗಳು, ಮಾರ್ಗದರ್ಶಕರು ಅಥವಾ ಸಂಶೋಧನಾ ಕಮಿಟಿಗಳು ಬಗ್ಗೆ ನಿರ್ಮಾನ ತೆಗೆದುಕೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲ” ಎಂದು ಹೇಳಿದ್ದಾರೆ.
“ನಾವು ನಮ್ಮ ಮಾರ್ಗದರ್ಶಕರ ಅಡಿಯಲ್ಲಿ ಅವರು ಬೋಧಿಸುತ್ತಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆವು. ಅದೂ, ನಮ್ಮ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ತರಗತಿಗಳನ್ನು ಮಾತ್ರವೇ ತೆಗೆದುಕೊಳ್ಳುತ್ತಿದ್ದೆವು. ಅದಕ್ಕೆ ನಮ್ಮ ಮಾರ್ಗದರ್ಶಕರು ಸಲಹೆಗಳನ್ನು ನೀಡುತ್ತಿದ್ದರು. ಆದರೆ, ಈಗ ವಿಶ್ವವಿದ್ಯಾಲಯವು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೇಳುತ್ತಿದೆ. ಅಲ್ಲಿ ನಮ್ಮ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಷಯಗಳಿರುವುದಿಲ್ಲ. ನಾನು ಅದಕ್ಕಾಗಿ ತಯಾರಿ ನಡೆಸಬೇಕಾಗುತ್ತದೆ. ಇದರಿಂದ ನಮ್ಮ ಸಂಶೋಧನೆಗೆ ತೊಡಕಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರಧಾನಿ ಮೋದಿ ಹೇಳಿದರೂ ಈ ಸಿನಿಮಾವನ್ನು ನೋಡುವವರೇ ಇಲ್ಲ!
“ನಮ್ಮ ಮಾರ್ಗದರ್ಶಕರು ಹಾಗೂ ಎಚ್‌ಒಡಿಗಳು ಆದೇಶವು ವಿಶ್ವವಿದ್ಯಾಲಯದಿಂದ ಬಂದಿರುವ ಕಾರಣ, ಅದರಂತೆ ಕಾರ್ಯನಿರ್ವಹಿಸಿ ಎನ್ನುತ್ತಿದ್ದಾರೆ. ಆದರೆ, ನಮಗೆ ಅದು ಕಷ್ಟದ ಕೆಲಸವಾಗಿದೆ. ಪಿಎಚ್‌ಡಿ ಸಂಶೋಧನಾರ್ಥಿಗಳೆಲ್ಲರೂ ಸೇರಿ ಸೋಮವಾರ ಕುಲಪತಿಗಳನ್ನು ಭೇಟಿ ಮಾಡಿದ್ದೇವೆ. ಆದರೆ, ಅವರು ಸರಿಯಾಗಿ ಸ್ಪಂದಿಸಲಿಲ್ಲ. ಉದಾಸೀನವಾಗಿ ಮಾತನಾಡಿದ್ದಾರೆ. ಬೋಧನೆ ಮಾಡಲೇಬೇಕೆಂದು ಹೇಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪದವಿ ತರಗತಿಗಳಿಗೆ ಸಂಶೋಧನಾರ್ಥಿಗಳು ಬೋಧನೆ ಮಾಡುವುದರಿಂದ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಅನ್ಯಾಯವಾಗುತ್ತದೆ. ಈಗಾಗಲೇ, ಸುಮಾರು 50 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಆ ಹುದ್ದೆಗಳ ಬದಲಾಗಿ, ಸಂಶೋಧನಾರ್ಥಿಗಳಿಂದ ಪಾಠ ಮಾಡಿಸಲು ವಿಶ್ವವಿದ್ಯಾಲಯ ಮುಂದಾಗಿದೆ. ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳೂ ಕುಲಪತಿಗಳನ್ನು ಭೇಟಿ ಮಾಡಿದ್ದಾರೆ. ಅವರಿಗೂ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ತಿಳಿದುಬಂದಿದೆ” ಎಂದು ಹೇಳಿದ್ದಾರೆ.