ತಲ್ವಾರ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಯುವಕನೋರ್ವನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ವಿಡಿಯೋ ವೈರಲಾಗುತ್ತಿದ್ದಂತೆಯೇ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಗುಬ್ಬಿ ಪಟ್ಟಣದಲ್ಲಿ ಯುವಕರಿಬ್ಬರು ಮಾರ್ಕೆಟ್ ರಸ್ತೆಯಲ್ಲಿ ಸ್ನೇಹಿತರೊಂದಿಗೆ ತನ್ನ ಹುಟ್ಟು ಹಬ್ಬವನ್ನು ತಲ್ವಾರ್ ಎಂಬ ಹಿಡಿದು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದು, ಗುಬ್ಬಿ ಪಟ್ಟಣದ ಜನತೆಯಲ್ಲಿ ಭಯ ಹುಟ್ಟಿಸಿದೆ.
ತುಮಕೂರು ಜಿಲ್ಲೆಯಲ್ಲಿ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂಬ ಸುದ್ದಿ ಕೆಲ ದಿನಗಳಿಂದ ಸದ್ದು ಮಾಡುತ್ತಿರುವುದು ಒಂದೆಡೆಯಾದರೆ, ಗುಬ್ಬಿ ಪಟ್ಟಣದಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಯುವಕನೊಬ್ಬ ರೌಡಿಯ ರೀತಿ ತಲ್ವಾರ್ ಹಿಡಿದು ಬಾಸ್ ಎಂಬ ಕೇಕ್ ಕತ್ತರಿಸುವ ದೃಶ್ಯವನ್ನು ವಿಡಿಯೋ ಮಾಡಿ ಆತನ ಸ್ನೇಹಿತರು ತಮ್ಮ ಸ್ಟೇಟಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಭಯದ ವಾತಾವರಣ ಸೃಷ್ಟಿಸಿರುವುದು ಮತ್ತೊಂದೆಡೆಯಾಗಿದೆ.

ಗುಬ್ಬಿಯಲ್ಲಿ ಎಂದೂ ಈ ಮಟ್ಟದ ಹುಟ್ಟುಹಬ್ಬ ಆಚರಣೆ ಮಾಡಿದ್ದು ಕಂಡಿಲ್ಲ ಎನ್ನುವ ಜನ ಈ ಆಚರಣೆ ಬಗ್ಗೆ ಖಂಡಿಸುತ್ತಿದ್ದಾರೆ. ಬಾಸ್ ಎಂಬ ಅಕ್ಷರದ ಕೇಕ್ ಕತ್ತರಿಸಲು ತಲ್ವಾರ್ ಬಳಸಿದ ಬಗ್ಗೆ ಪೊಲೀಸರು ಜಾಣ ಮೌನ ತಾಳಿದ್ದಾರೆ. ವಿಷಯ ತಿಳಿದು ಯುವಕರ ವಿಚಾರಣೆ ಮಾಡಿ ಪ್ರಭಾವಿಗಳ ಶಿಫಾರಸ್ಸಿಗೆ ಹಾಗೆಯೇ ಮರಳಿಸಿರುವ ಆರೋಪ ಕೂಡ ಕೇಳಿ ಬಂದಿದೆ.
ಮಾರ್ಕೆಟ್ ರಸ್ತೆಯಲ್ಲಿ ಹುಟ್ಟು ಹಬ್ಬ ಆಯೋಜನೆ ಮಾಡಿದ ಯುವಕರು ಬಾಸ್ ಎಂಬ ಕೇಕ್ ತಂದು ಸ್ನೇಹಿತರಾದ ಶಾರುಖ್ ಹಾಗೂ ಮುಗಲ್ ಪಾಷ ಎಂಬ ಇಬ್ಬರು ಯುವ ಮುಖಂಡರ ಜನುಮ ದಿನ ಆಚರಣೆಯನ್ನು ಮಾಡಿದ್ದು, ಈ ಪೈಕಿ ಓರ್ವ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಆತಂಕ ಮೂಡಿಸಿದ ಈ ಘಟನೆ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.
