ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್ ಪಿ ಮುದ್ದಹನುಮೇಗೌಡ ನಮ್ಮ ಸಮುದಾಯದ ವ್ಯಕ್ತಿ, ದಿ.ಲಕ್ಕಪ್ಪ, ಮಲ್ಲಣ್ಣ ಅವರ ಬಳಿಕ ಒಕ್ಕಲಿಗ ಸಮುದಾಯದಿಂದ ಮುದ್ದಹನುಮೇಗೌಡರಿಗೆ ಅವಕಾಶ ದೊರೆತ್ತಿದ್ದು, ಈ ಅವಕಾಶವನ್ನು ನಾವೆಲ್ಲರೂ ಬಳಸಿಕೊಳ್ಳಬೇಕಿದೆ ಎಂದು ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ತಿಳಿಸಿದರು.
ತುಮಕೂರು ನಗರದ ಕುಂಚಶ್ರೀ ಸಭಾಂಗಣದಲ್ಲಿ ಜಿಲ್ಲಾ ಕುಂಚಟಿಗ ಸಮುದಾಯದದಿಂದ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದರು.
“ಒಕ್ಕಲಿಗರಲ್ಲಿ, ಅದರಲ್ಲಿಯೂ ಕುಂಚಿಟಿಗ ಸಮುದಾಯದ ನಾಯಕತ್ವ ಕ್ಷೀಣಿಸುತ್ತಿದೆ. ಹಾಗಾಗಿ ಲೋಕಸಭೆಯಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿ, ಮುದ್ದಹನುಮೇಗೌಡರನ್ನು ಗೆಲ್ಲಿಸಿಕೊಳ್ಳಬೇಕಾಗಿದೆ” ಎಂದರು.
“ರಾಷ್ಟ್ರೀಯ ವಿದ್ಯಮಾನ ಗಮನಿಸಿದರೆ ಹಿಂದೆಂದಿಗಿಂತಲೂ ಪ್ರಸ್ತುತದ ದಿನಗಳಲ್ಲಿ ರಾಷ್ಟ್ರದ ಜನರಿಗೆ ಕಾಂಗ್ರೆಸ್ನ ಅವಶ್ಯಕತೆ ಇದೆ. ಕುಂಚಿಟಿಗರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಇದ್ದ ಅಡ್ಡಿ, ಆತಂಕಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿವಾರಿಸಿದೆ. ಸಚಿವ ಸಂಪುಟದಲ್ಲಿ ಮಂಡಿಸಿಲ್ಲವೆಂಬ ಕಾರಣಕ್ಕೆ ವಾಪಸ್ಸಾಗಿದ್ದ ಒಬಿಸಿ ಜಾತಿ ಪಟ್ಟಿ ಕಡತವನ್ನು ಸಚಿವ ಸಂಪುಟದ ಮುಂದಿಟ್ಟು, ಚರ್ಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು 50-60 ಜಾತಿಗಳು ಸರತಿ ಸಾಲಿನಲ್ಲಿವೆ. ಹಾಗಾಗಿ ಕೊಂಚ ತಡವಾಗುವ ಸಾಧ್ಯತೆ ಇದೆ. ನಮ್ಮದೇ ಸಮುದಾಯದ ಮುದ್ದಹನುಮೇಗೌಡರು ಸಂಸದರಾಗಿ ಹೋದರೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ” ಎಂದು ಟಿ ಬಿ ಜಯಚಂದ್ರ ತಿಳಿಸಿದರು.
ಸಹಕಾರ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, “ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ತನ್ನ ಸ್ಥಾನವನ್ನು ದೇವೇಗೌಡರಿಗಾಗಿ ತ್ಯಾಗ ಮಾಡಿದ ಮುದ್ದಹನುಮೇಗೌಡರ ವಿರುದ್ಧ ದೇವೇಗೌಡರ ಸೋಲಿಗೆ ಇವರೇ ಕಾರಣವೆಂಬಂತೆ ಅಪಪ್ರಚಾರ ಮಾಡಲಾಗುತ್ತಿದೆ. ದೇವೇಗೌಡರು ಮತ್ತು ಅವರ ಮಗ ಎಚ್ ಡಿ ಕುಮಾರಸ್ವಾಮಿಯ ಸ್ವಯಂಕೃತ ತಪ್ಪುಗಳಿಂದ ಅವರಿಗೆ ಸೋಲಾಯಿತೇ ಹೊರತು, ಎಸ್ ಪಿ ಮುದ್ದಹನುಮೇಗೌಡರ ಪಾತ್ರ ಇದರಲ್ಲಿ ಇಲ್ಲ. ಅಲ್ಲದೆ ಎಸ್ ಪಿ ಮುದ್ದಹನುಮೇಗೌಡರು ಅಭ್ಯರ್ಥಿಯಾಗಬೇಕೆಂಬುದು ನನ್ನೊಬ್ಬನ ತೀರ್ಮಾನವಲ್ಲ, ಇಡೀ ಪಕ್ಷದ ತೀರ್ಮಾನ. ಹಾಗಾಗಿ ನನ್ನ ಮೇಲಿನ ಸಿಟ್ಟಿಗೆ ಮುದ್ದಹನುಮೇಗೌಡರಿಗೆ ಮತ ಹಾಕದಿರುವುದು ತರವಲ್ಲ. 2019ರ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ ಎಂಬ ಕಾರಣಕ್ಕೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದೆ” ಎಂದು ಸ್ಪಷ್ಟಪಡಿಸಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, “ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆ, ಓರ್ವ ವೀರಶೈವ-ಲಿಂಗಾಯತರಿಗೆ ಟಿಕೆಟ್ ದೊರೆತರೆ ಇಡೀ ಸಮುದಾಯ ಒಂದಾಗಿ ಅವರ ಗೆಲುವಿಗೆ ಶ್ರಮಿಸುತ್ತದೆ. ಅಂತೆಯೇ ಒಕ್ಕಲಿಗರಲ್ಲಿ ಆ ಒಗ್ಗಟ್ಟು ಬರಬೇಕು. ಆಗ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯ. ಲಕ್ಕಪ್ಪನವರ ಬಳಿಕ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ನಾವೆಲ್ಲರೂ ಮುದ್ದಹನುಮೇಗೌಡರನ್ನು ಸಂಸದರಾಗಿ ಮಾಡಬೇಕಾಗಿದೆ” ಎಂದರು.
“ಅಪ್ಪ, ಮಗ, ಅಳಿಯನಿಗಾಗಿ ಇರುವ ಪಕ್ಷಕ್ಕೆ ಉಳಿದವರೆಲ್ಲಾ ಕಷ್ಟಪಡಬೇಕಾಗಿದೆ. ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ಇಡೀ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಜವಾಗಿಯೂ ದಾರಿ ತಪ್ಪಿರುವುದು ಕುಮಾರಸ್ವಾಮಿಯೇ ಹೊರತು ನಮ್ಮ ಹೆಣ್ಣು ಮಕ್ಕಳಲ್ಲ. ಸರ್ಕಾರದ ಗ್ಯಾರಂಟಿಗಳಿಂದ ನಮ್ಮ ಹೆಣ್ಣು ಮಕ್ಕಳಿಗೆ ಎಷ್ಟು ಅನುಕೂಲವಾಗಿದೆ ಎಂಬುದನ್ನು ಇತ್ತೀಚೆಗಿನ ವರದಿಗಳನ್ನು ತರಿಸಿಕೊಂಡು ನೋಡಲಿ” ಎಂದು ಶ್ರೀನಿವಾಸ್ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿ, “ಕಳೆದ 35 ವರ್ಷಗಳ ಹಿಂದೆ ನಾನು ಮಧುಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದವರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಇದೊಂದು ಒಳ್ಳೆಯ ಅವಕಾಶ. ಸಂವಿಧಾನ ಉಳಿಯಬೇಕು. ನಮ್ಮೆಲ್ಲರ ಬದುಕು ಹಸನಾಗಬೇಕೆಂದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ” ಎಂದು ಕರೆ ನೀಡಿದರು.
“10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಈ ದೇಶದ ರೈತರಿಗಾಗಲಿ, ಬಡವರಿಗಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಉಪಯೋಗವಾಗಿಲ್ಲ. ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಜತೆಗೆ, ಶೇ.50ರ ಮೀಸಲಾತಿ ಮಿತಿ ತೆಗೆದುಹಾಕುವ ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಒಕ್ಕಲಿಗ ಸಮುದಾಯ ನಮ್ಮ ಪಕ್ಷವೆಂದು ಒಪ್ಪಿಕೊಂಡು ಮತ ಚಲಾಯಿಸಬೇಕಾಗಿದೆ” ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಮಾತನಾಡಿ, “ನನ್ನ ಐದು ವರ್ಷಗಳ ಅವಧಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಒಕ್ಕಲಿಗ ಸಮಾಜದ ಜತೆಗೆ, ಮತದಾರರ ಘನತೆ, ಗೌರವ ಕಾಪಾಡುವ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಈ ಬಾರಿಯೂ ನನಗೆ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿದರೆ ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುವೆನು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ: ಸಾಹಿತಿ ದೇವನೂರು ಮಹಾದೇವ ಕರೆ
ಕುಂಚಿಟಿಗ ಮುಖಂಡ ಆರ್ ಕಾಮರಾಜು, ಜಿ ಪಂ ಮಾಜಿ ಸದಸ್ಯ ಚೌಡಪ್ಪ, ತುಮುಲ್ ಮಾಜಿ ನಿರ್ದೇಶಕ ನಾಗೇಶಬಾಬು ಸೇರಿದಂತೆ ಹಲವರು ಮಾತನಾಡಿದರು.
ಜಿ ಪಂ ಮಾಜಿ ಅಧ್ಯಕ್ಷೆ ಸುನಂದಮ್ಮ, ಮುರುಳೀಧರ ಹಾಲಪ್ಪ, ಸುವರ್ಣಮ್ಮ, ನೇತಾಜಿ ಶ್ರೀಧರ್, ಎಸ್ ನಾಗಣ್ಣ ಸೇರಿದಂತೆ ಹಲವರು ಇದ್ದರು.
