ಕೆಂಡವನ್ನು ಮಡಿಲಿನಲ್ಲಿ ಇಟ್ಟುಕೊಂಡ ಅನುಭವ ನಮ್ಮದು, ರೈತರನ್ನು ಭಾರತದ ಬೆನ್ನೆಲುಬು ಎನ್ನುತ್ತಾರೆ. ಅದರಲ್ಲೂ ಮೋದಿಯವರೂ ಕೂಡ ಸಮರ್ಥನೆ ಮಾಡುತ್ತಾರೆ. ಆದರೆ ರೈತರ ಮಣಿಕಟ್ಟು ಕಿತ್ತು ನುಂಗಿ ನೀರು ಕುಡಿದು, ರೈತರ ಬದುಕು ಕಿತ್ತವರು ಇವರೇ ಎಂದು ಸಾಹಿತಿ ದೇವನೂರು ಮಹಾದೇವ ಅವರು ದೂರಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ‘ರೈತ ಸಮುದಾಯವನ್ನು ಉಳಿಸಿ’ ಅಭಿಯಾನದ ಭಾಗವಾಗಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
“ಮನೆಗೊಂದು ಕರಪತ್ರ ಘೋಷಣೆಯೊಂದಿಗೆ ಕಳೆದ ದಿನ ಅಮೃತ ಭೂಮಿಯಲ್ಲಿ ಪ್ರೊ ಎಂಡಿಎನ್ ಸ್ಮಾರಕದಿಂದ ಅಧಿಕೃತ ಚಾಲನೆಯಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಕರಪತ್ರ ಹಿಡಿದು “ಬಿಜೆಪಿ ಸೋಲಿಸಿ” ಅಭಿಯಾನ ಕೈಗೊಳ್ಳಲಿದ್ದಾರೆ” ಎಂದರು.
“ಪ್ರಧಾನಿಯವರು, ಸ್ವಾಮಿನಾಥನ್ ವರದಿ ಅನುಸಾರ ಎಂಎಸ್‌ಪಿ ಜಾರಿ ಮಾಡುತ್ತೇವೆಂದು ಹೇಳಿದರು. ಆದರೆ ಯಾವುದನ್ನೂ ಮಾಡಲೇ ಇಲ್ಲ. ರೈತ ಸಮುದಾಯ ನೊಂದಿದೆ. ಬೆಳೆದ ಬೆಳೆಗೆ ಬೆಲೆ ಇಲ್ಲದೆ ಒಂದು ದಿನ ತನ್ನ ಭೂಮಿ ಮಾರಿ ಪಟ್ಟಣ ಸೇರಬೇಕಾದ ಪರಿಸ್ಥಿತಿ ರೈತನದ್ದು” ಎಂದು ವಿಷಾದಿಸಿದರು.
“ಪ್ರಧಾನಿಯವರು ಈವರೆಗೆ ರೈತರ ಬಗ್ಗೆ ಆಡಿದ ಮಾತುಗಳು ಮಾತಾಗಿಯೇ ಉಳಿದಿವೆಯೇ ಹೊರತು ಕಾರ್ಯರೂಪಕ್ಕೆ ಬರಲೇ ಇಲ್ಲ. ಅನುಷ್ಠಾನ ಮಾಡಲಿಲ್ಲ” ಎಂದು ಆರೋಪಿಸಿದರು.
“ರೈತರು ತಮ್ಮ ತಮ್ಮ ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದಾರೆ. ಹೃದಯ ಇರದ ಪ್ರಧಾನಿಗೆ, ರೈತರು ಹೋರಾಟ ಮಾಡುತ್ತಾರೆ ಹೋಗುತ್ತಾರೆ ಎನ್ನುವ ಜಡ್ಡಿನ ನಿಲುವಿದೆಯೇ ಹೊರತು, ವಾಸ್ತವದ ಅರಿವಿಲ್ಲ. ಮನುಷ್ಯತ್ವ ಮರೆತ ವ್ಯಕ್ತಿಯಿಂದ ರೈತ ಕುಲಕ್ಕೆ ಸಾಮಾಜಿಕ ನ್ಯಾಯ ಖಂಡಿತ ಸಿಗಲಾರದು” ಎಂದರು.
“ಪ್ರಧಾನಿ ಹೇಳಿದಂತೆ ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಪರಮಾಪ್ತರಾದ ಕಾರ್ಪೊರೇಟ್ ಕುಳ ಅದಾನಿ, ಅಂಬಾನಿ ಅವರ ಆದಾಯ ದುಪ್ಪಟ್ಟು ಆಗಿದೆಯೇ ಹೊರತು ಇನ್ನಾರ ಬದುಕೂ ಹಸನಾಗಲಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ, ಎಂಎಸ್‌ಪಿ ನಿಗದಿ ಮಾಡುವುದಾಗಿಯೂ ಕಾಂಗ್ರೆಸ್ ಹೇಳಿದೆ. ಆದರೆ ನುಡಿದಂತೆ ನಡೆಯದೇ ಇದ್ದರೆ ಕಾಂಗ್ರೆಸ್‌ಗೂ ಬುದ್ಧಿ ಕಲಿಸದೆ ಬಿಡೆವು” ಎಂದರು.
“ಬಣ್ಣ ಬಣ್ಣದ ಪೋಷಕಿನ, ಬಣ್ಣ ಬಣ್ಣದ ಮಾತಿನ ವ್ಯಕ್ತಿ ವಿಕಸಿತ ಭಾರತದ ಬಗ್ಗೆ ಮಾತಾಡುತ್ತಾ, ಅಚ್ಛೇ ದಿನ್ ಅಚ್ಛೇ ದಿನ್ ಎಂದು ಹತ್ತು ವರ್ಷಗಳಲ್ಲಿ ಏನನ್ನೂ ಮಾಡಲೇ ಇಲ್ಲ” ಎಂದು ಕಿಡಿಕಾರಿದರು.
“ನಿರುದ್ಯೋಗ ಯುವಜನರ ಬದುಕು ಹಿಂಡಿದೆ. ಜೀವನ ಜರ್ಜರಿತವಾಗಿದೆ. ಆದರೆ ಯುವ ಪೀಳಿಗೆಯ ಬದುಕಿನ ಚಿಂತೆ ಪ್ರಧಾನಿ ಅವರಿಗೆ ಅರಿವಿಲ್ಲ. ರಥ ಚಕ್ರಕ್ಕೆ ಸಿಲುಕಿದ ನಿಂಬೆಯಂತೆ ಬದುಕು ದುತ್ತರವಾಗಿದೆ. ಬಿಜೆಪಿಗೆ ಮಣಿಪುರ ಬೆಂದರೂ ಕಾಣಲೇ ಇಲ್ಲ, ಮಣಿಪುರದ ಹಿನ ಕೃತ್ಯ ಗಮನ ಸೆಳೆಯಲೇ ಇಲ್ಲ, ಒಮ್ಮೆಯೂ ಕೂಡ ಮಣಿಪುರಕ್ಕೆ ಕಾಲಿಡಲಿಲ್ಲ. ಇದು ನಮ್ಮ ದೇಶದ ದುರ್ದೈವ” ಎಂದರು.
“ಪ್ರಜ್ಞಾವಂತ ನಾಗರಿಕರು ಬ್ರಾಹ್ಮಣ್ಯ ಮನಸ್ಥಿತಿಯನ್ನು ಒಪ್ಪಲು ಸಾಧ್ಯವೇ ಇಲ್ಲ.
ಯದುವೀರ್, ಡಾ ಮಂಜುನಾಥ್ ಅವರ ಮೇಲೆ ಗೌರವ ಇದೆ. ಇವರಿಬ್ಬರೂ ಅಮಾಯಕರು.
ಹಿಂದುತ್ವದ ಖೆಡ್ಡಕ್ಕೆ ಬಿದ್ದಿದ್ದಾರೆ. ಇವರನ್ನು ಭಗವಂತ ಕಾಪಾಡಬೇಕಿದೆ. ಇವರ ಸೋಲಿನ ಮೂಲಕ ಇವರ ಉಳಿವು ಸಾಧ್ಯ” ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವನೂರು ಮಹಾದೇವ, “ಬಿಜೆಪಿ ಸೋಲಿಸಬೇಕು,
ಅನಿವಾರ್ಯವಾಗಿ ಕಾಂಗ್ರೆಸ್ ಗೆಲ್ಲಿಸಬೇಕು” ಎಂದು ಹೇಳಿದರಲ್ಲದೆ, ಪರ್ಯಾಯ ರಾಜಕಾರಣದ ಸುಳಿವು ಕೊಟ್ಟು ಸರ್ವೋದಯ ಪಕ್ಷದ ನಿಲುವು ಸ್ಪಷ್ಟ ಪಡಿಸಿದರು.
ಚಾಮರಸ ಮಾಲಿ ಪಾಟೀಲ್ ಮಾತನಾಡಿ, “ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ ಬರೀ ಸುಳ್ಳಾಗಿದೆ. ಬಿಜೆಪಿ ಸರ್ಕಾರ ಬಂದ ಕೂಡಲೇ ರೈತರ ಕಷ್ಟ ನಿವಾರಣೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಉತ್ತರ ಪ್ರದೇಶದ ರ್‍ಯಾಲಿಯಲ್ಲಿ ಹೇಳುತ್ತಾರೆ. ಆಗ ಅಲ್ಲಿ ನೆರೆದಿದ್ದ ಜನ ಕಡತಾನನ ಗೈದು ಸಂತಸ ಪಟ್ಟರು ಮತ ಹಾಕಿದರು, ಗೆಲ್ಲಿಸಿದರು. ಗೆದ್ದ ಮೇಲೆ ಮೋದಿ ಹೇಳಿದಂತೆ ನಡೆಯಲೇ ಇಲ್ಲ, ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬಿಜೆಪಿ-ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ
“ರೈತ ಸಮುದಾಯದ ಸಾಲ, ಎಂಎಸ್‌ಪಿ ನಿಗದಿ ಮಾಡಲು ಶಕ್ತಿಯಿರದ ಮೋದಿ ಸರ್ಕಾರಕ್ಕೆ ಕಾರ್ಪೊರೇಟ್ ಕುಳಗಳು ಲಕ್ಷಾಂತರ ರೂಪಾಯಿ ಸಾಲ ಮಾಡಿ ದೇಶ ಬಿಟ್ಟವರಿಗೆ ರೈಟ್ ಆಫ್ ಮೂಲಕ ಸಾಲ ಮನ್ನಾ ಮಾಡಿದೆ. ಇಂತಹ ದುಷ್ಟಕೂಟಕ್ಕೆ ಜನತೆ ಮತದಾನದ ಮೂಲಕ ಬುದ್ಧಿ ಕಲಿಸಬೇಕಿದೆ” ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹಾಗೂ ಮೈಸೂರು ತಾಲೂಕು ಗೌರವಾಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ ಇದ್ದರು.