ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ರಜತ ಮಹೋತ್ಸವ, ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸೆ.6ರಂದು ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ತಿಳಿಸಿದರು.
ತುಮಕೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ಹಿಂದುಳಿದ ಜಾತಿಗಳ ಕಲ್ಯಾಣಕ್ಕಾಗಿ ಸಿದ್ದರಾಮಯ್ಯ ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಅವರನ್ನು ಅಭಿನಂದಿಸಲಾಗುವುದು. ಇದೇ ವೇಳೆ ಮಧುಸೂದನ್ ನಾಯಕ್ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಜೆ.ಡಿ. ಗೋಪಾಲ್ ಮಾತನಾಡಿ, 2001ರಲ್ಲಿ ನೋಂದಣಿಯಾದ ಒಕ್ಕೂಟವು ಕಳೆದ 25 ವರ್ಷಗಳಿಂದ ಹಿಂದುಳಿದ ವರ್ಗಗಳ ಹಕ್ಕುಗಳು ಹಾಗೂ ಸಾಂವಿಧಾನಿಕ ಸವಲತ್ತುಗಳಿಗಾಗಿ ಹೋರಾಟ ನಡೆಸುತ್ತಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಚಿತ್ರದುರ್ಗದ ನಿರ್ದೇಶಕ ಬಿ.ಟಿ. ಜಗದೀಶ್ ಮಾತನಾಡಿ, ಮಧುಸೂದನ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ-2025ರ ವರದಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮಹತ್ವದ್ದಾಗಿದೆ. ವರದಿಯ ಶಿಫಾರಸುಗಳನ್ನು ಶೀಘ್ರ ಜಾರಿಗೊಳಿಸುವಂತೆ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಕೆಂಪರಾಜು ಮಾತನಾಡಿ, ರಜತ ಮಹೋತ್ಸವ ಹಾಗೂ ಸಿದ್ದರಾಮಯ್ಯ ಅವರ ಅಭಿನಂದನಾ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದು, ಹಿಂದುಳಿದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಟಿ.ಇ. ರಘುರಾಮ್, ಸುನಿತ ನಟರಾಜು, ಧರ್ಮರಾಜು, ದೇವರಾಜ್, ರವೀಶ್, ಬಸವರಾಜ್, ಸುಕನ್ಯ, ಹರೀಶ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.




