ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರ ಹಾಗೂ ಗಂಗಾಜಲದಿಂದ ಸ್ವಚ್ಛಗೊಳಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, “ನ್ಯಾಯ ಕೇಳಿದ ನಮ್ಮ ನಾಯಕ ರಾಹುಲ್ಗಾಂಧಿ ಅವರ ಮೇಲೆಯೇ ಎಫ್ಐಆರ್ ದಾಖಲಿಸಿರುವುದು ಹಾಸ್ಯಾಸ್ಪದ. ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಜನರ ಮನಸ್ಥಿತಿ ಬದಲಾಗದಿರುವುದು ವಿಷಾದನೀಯ” ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿದವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು. ಅದೇ ರೀತಿ ರಾಹುಲ್ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಎಂಟಿಸಿ ಉಪಾಧ್ಯಕ್ಷ ನಿಖೇತ್ರಾಜ್ ಮೌರ್ಯ ಮಾತನಾಡಿ, ಅಸ್ಪೃಶ್ಯತೆ ಕಾನೂನುಬಾಹಿರವಾಗಿದ್ದರೂ ದೇಶದಲ್ಲಿ ಇಂತಹ ಆಚರಣೆಗಳು ಮುಂದುವರಿದಿರುವುದು ದುರದೃಷ್ಟಕರ ಎಂದರು. ಬಾಬು ಜಗಜೀವನ್ರಾಂ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಪುರಿ ಜಗನ್ನಾಥ ದೇವಾಲಯದಲ್ಲಿ ನಡೆದ ಘಟನೆ ಹಾಗೂ ರಾಮಮಂದಿರ ಮತ್ತು ಹೊಸ ಸಂಸತ್ ಭವನದ ಉದ್ಘಾಟನೆಗೆ ಸಂಬಂಧಿಸಿದಂತೆ ದಲಿತ ಸಮುದಾಯದ ನಾಯಕರಿಗೆ ಆಗಿರುವ ಅವಮಾನಗಳನ್ನು ಪ್ರಸ್ತಾಪಿಸಿದರು.
“ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿರುವ ಘಟನೆ ಅಸ್ಪೃಶ್ಯತೆಯ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ಮನುವಾದಿ ಆಚರಣೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ರೂಪಿಸಲಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಚಂದ್ರಶೇಖರಗೌಡ ಮಾತನಾಡಿ, ನ್ಯಾಯ ಕೇಳಿದ ರಾಹುಲ್ಗಾಂಧಿ ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿರುವುದು ಪ್ರಜಾಪ್ರಭುತ್ವದ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದರು.
“ಅಸ್ಪೃಶ್ಯತೆ ಆಚರಿಸುವುದು ಕಾನೂನುಬಾಹಿರ. ಆದರೆ ಅಂತಹ ಕೃತ್ಯ ಎಸಗಿದವರ ವಿರುದ್ಧ ದೂರು ದಾಖಲಿಸುವ ಬದಲು, ಅದರ ವಿರುದ್ಧ ನ್ಯಾಯ ಕೇಳಿದ ರಾಹುಲ್ಗಾಂಧಿ ಅವರ ಮೇಲೆಯೇ ಎಫ್ಐಆರ್ ದಾಖಲಿಸಿರುವುದು ಪ್ರತಿಭಟನೆಯ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ಈ ಎಫ್ಐಆರ್ಗೆ ಕಾಂಗ್ರೆಸ್ ಹೆದರುವುದಿಲ್ಲ. ಖರ್ಗೆ ಅವರ ಭಾಷಣದ ಸ್ಥಳವನ್ನು ಸ್ವಚ್ಛಗೊಳಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ರಾಹುಲ್ಗಾಂಧಿ ಅವರ ಮೇಲಿನ ಎಫ್ಐಆರ್ ರದ್ದುಗೊಳಿಸುವವರೆಗೆ ಹೋರಾಟ ಮುಂದುವರಿಸಲಾಗುವುದು” ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಆರ್. ರಾಮಕೃಷ್ಣ ಹಾಗೂ ಕೆಂಚಮಾರಯ್ಯ ಅವರು ಪ್ರಕರಣವನ್ನು ಖಂಡಿಸಿ, ರಾಹುಲ್ಗಾಂಧಿ ಅವರ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಷಣ್ಮುಗಪ್ಪ, ಸಿಮೆಂಟ್ ಮಂಜುನಾಥ್, ಹೆಚ್.ಸಿ. ಹನುಮಂತಯ್ಯ, ಸಿದ್ದಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಮಹೇಶ್, ಕೆಂಪಣ್ಣ, ಸಂಜೀವಕುಮಾರ್, ಒಬಿಸಿ ಘಟಕದ ಅನಿಲ್, ಯುವ ಕಾಂಗ್ರೆಸ್ನ ಇಲಾಹಿ ಸಿಕಂದರ್, ಕಾರ್ಮಿಕ ಘಟಕದ ದಾದಾಪೀರ್, ಆದಿಲ್, ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ನ್ಯಾತೇಗೌಡ, ಮುಬೀನಾ, ಸುಜಾತ, ಪಾರ್ವತಮ್ಮ, ವಿಜಯಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.





