ಹಠಾತ್ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪುವ ಮುನ್ನ ನೀಡುವ ಸಿಪಿಆರ್ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜನರಿಗೆ ಸಿಪಿಆರ್ ಕುರಿತು ಅರಿವು ಹಾಗೂ ಪ್ರಾಯೋಗಿಕ ತರಬೇತಿ ನೀಡುವ ‘ಹಾರ್ಟ್ ಸೇಫ್ ತುಮಕೂರು’ ಮಾಸಿಕ ಆರೋಗ್ಯ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜಿ. ಪರಮೇಶ್ವರ್ ಸೋಮವಾರ ಚಾಲನೆ ನೀಡಿದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಹಾರ್ಟ್ ಸೆಂಟರ್, ಕಾರ್ಡಿಯೋಥೊರಾಸಿಕ್ ವಿಭಾಗ ಹಾಗೂ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿರುವ ಈ ಅಭಿಯಾನ ಸೆ.7ರಿಂದ ಅ.2ರವರೆಗೆ ನಡೆಯಲಿದೆ.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಜಿ. ಪರಮೇಶ್ವರ್, ಹೃದಯಾಘಾತದಿಂದ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾವಿಗೀಡಾಗುತ್ತಿದ್ದು, ಯುವಜನರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಸಿಪಿಆರ್ ನೀಡುವ ವಿಧಾನವನ್ನು ಕಲಿಯುವುದು ಅತ್ಯಂತ ಅಗತ್ಯ ಎಂದರು.
ಜಿಲ್ಲೆಯ 320 ಗ್ರಾಮ ಪಂಚಾಯಿತಿಗಳ ಯುವಜನರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಪಿಆರ್ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಹಠಾತ್ ಹೃದಯಾಘಾತದ ಸಂದರ್ಭದಲ್ಲಿ ತಕ್ಷಣ ಸಿಪಿಆರ್ ನೀಡಲು ತಿಳಿದಿದ್ದರೆ ಕನಿಷ್ಠ ಒಂದು ಜೀವವನ್ನಾದರೂ ಉಳಿಸಬಹುದು ಎಂದು ಹೇಳಿದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕಾರ್ಡಿಯೋಥೊರಾಸಿಕ್ ವಿಭಾಗದ ಮುಖ್ಯಸ್ಥ ಡಾ. ತಮೀಮ್ ಅಹ್ಮದ್ ಹಾಗೂ ಅವರ ತಂಡದ ಸೇವೆಯನ್ನು ಶ್ಲಾಘಿಸಿದ ಅವರು, ಕೇಂದ್ರದಲ್ಲಿ ಇದುವರೆಗೆ 10 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿತ ಪ್ರಕ್ರಿಯೆಗಳು ಹಾಗೂ 500ಕ್ಕೂ ಹೆಚ್ಚು ಯಶಸ್ವಿ ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ‘ಹಾರ್ಟ್ ಸೇಫ್ ತುಮಕೂರು’ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರೂಪಿಸಲಾಗಿದೆ. ಜಿಲ್ಲೆಯ 2,080 ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಹಾಗೂ 421 ಭಾರತ್ ಜೋಡೋ ಯುವ ಸಂಘಗಳ ಸುಮಾರು 50 ಸಾವಿರ ಯುವಕ-ಯುವತಿಯರಿಗೆ ಹಂತ ಹಂತವಾಗಿ ಸಿಪಿಆರ್ ತರಬೇತಿ ನೀಡಿ ‘ಸರ್ಟಿಫೈಡ್ ಸಿಪಿಆರ್ ಟ್ರೈನರ್ಸ್’ ಆಗಿ ರೂಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.
ಗೋಲ್ಡನ್ ಅವರ್‌ನಲ್ಲಿ ತಕ್ಷಣದ ಸ್ಪಂದನೆ ಅತ್ಯಂತ ಮುಖ್ಯವಾಗಿದ್ದು, ಸಿಪಿಆರ್ ತರಬೇತಿ ಪಡೆದಿರುವ ಸ್ಥಳೀಯರು ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ನೆರವಾಗಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯಲಿದ್ದು, ಅ.2ರಂದು ತುಮಕೂರು ಟೌನ್ ಹಾಲ್ ವೃತ್ತದಲ್ಲಿ ತರಬೇತಿ ಪಡೆದವರ ಸಮಾವೇಶದೊಂದಿಗೆ ಅಭಿಯಾನಕ್ಕೆ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ಡಾ. ತಮೀಮ್ ಅಹ್ಮದ್ ಮಾತನಾಡಿ, ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜುಗಳಲ್ಲಿ ಸುಮಾರು 5 ಸಾವಿರ ಜನರಿಗೆ ಉಚಿತ ಸಿಪಿಆರ್ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಹಾಗೂ ಯುವಜನರು ಈ ಜೀವ ರಕ್ಷಣಾ ಕೌಶಲ್ಯವನ್ನು ಕಲಿಯುವುದು ಅತ್ಯಂತ ಅಗತ್ಯ ಎಂದರು.
ಕಾರ್ಯಕ್ರಮದ ಬಳಿಕ ಡಮ್ಮಿ ಮಾದರಿಯ ಮೂಲಕ ಎದೆಯ ಮೇಲೆ ಸರಿಯಾದ ರೀತಿಯಲ್ಲಿ ಒತ್ತಡ ನೀಡುವ ಸಿಪಿಆರ್ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಪಂ ಸಿಇಒ ಬಿ.ವಿ. ಅಶ್ವಿಜಾ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ. ಲಿಂಗೇಗೌಡ, ಡಾ. ವಿವೇಕ್ ವೀರಯ್ಯ, ಡಾ. ಸಾಣಿಕೊಪ್ಪ, ಡಾ. ಪ್ರಭಾಕರ್, ಡಾ. ಪವೀಣ್ ಡಿ. ಕುಡುವ, ಡಾ. ವೆಂಕಟೇಶ್, ತುಮಕೂರು ರೋಟರಿ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





