ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನ, ಗಡಿ ಗುರುತಿಸುವಿಕೆ ಹಾಗೂ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಲು 6 ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿದ್ದ ಉನ್ನತ ಮಟ್ಟದ ಸಮಿತಿಯ (HPC) ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ದೇಶದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿ ವಿಚಾರಣೆ ನಡೆಸಿದೆ. ಸಮಿತಿಯು ಕೋರಿದ್ದ 2027ರ ಫೆಬ್ರವರಿ 28ರವರೆಗಿನ ಕಾಲಾವಕಾಶವನ್ನು ನಿರಾಕರಿಸಿದ ಪೀಠವು, 2026ರ ನವೆಂಬರ್ 30ರ ಒಳಗಾಗಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಇದನ್ನೂ ಓದಿ: ಅರಾವಳಿ | ಸಫಾರಿ ಯೋಜನೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಅರ್ಜಿ ವಿಚಾರಣೆ ವೇಳೆ ಕಾಲಾವಕಾಶ ಕೋರಿದ ಸಮಿತಿಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ ಸೂರ್ಯ ಕಾಂತ್, “ಸಮಿತಿಯು ನನ್ನ ನಿವೃತ್ತಿಯ ನಂತರದ ದಿನಾಂಕವನ್ನು ಕೇಳುತ್ತಿರುವಂತೆ ತೋರುತ್ತಿದೆ” ಎಂದು ಮೌಖಿಕವಾಗಿ ಮಾರ್ಮಿಕವಾಗಿ ನುಡಿದರು. (ಸಿಜೆಐ ಸೂರ್ಯ ಕಾಂತ್ ಅವರು 2027ರ ಫೆಬ್ರವರಿಯಲ್ಲಿ ನಿವೃತ್ತರಾಗಲಿದ್ದಾರೆ).
ಸಮಿತಿಗೆ ಇನ್ನು ಮುಂದೆ ಯಾವುದೇ ರೀತಿಯ ಹೆಚ್ಚುವರಿ ಸಮಯ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು, “ನಿಗದಿತ ಅವಧಿಯೊಳಗೆ ಕೆಲಸ ಮುಗಿಸಲು ಸಮಿತಿಯು ಹಗಲಿರುಳು ಶ್ರಮಿಸಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ನಾವು ಇಡೀ ಸಮಿತಿಯನ್ನೇ ಪುನಾರಚಿಸುತ್ತೇವೆ” ಎಂದು ಎಚ್ಚರಿಕೆ ನೀಡಿದೆ.
ವರದಿಯನ್ನು ಅಂತಿಮಗೊಳಿಸುವ ಮೊದಲು ರಾಜಸ್ಥಾನ ಮತ್ತು ಗುಜರಾತ್ ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯಗಳು ಸೇರಿದಂತೆ ಎಲ್ಲಾ ಭಾಗಿದಾರರ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಜತೆಗೆ, ಅಗತ್ಯವೆನಿಸಿದರೆ ತಕ್ಷಣದ ನಿರ್ಧಾರಗಳಿಗಾಗಿ ಮಧ್ಯಂತರ ವರದಿಗಳನ್ನು ಸಲ್ಲಿಸಲು ಸಮಿತಿಗೆ ಅವಕಾಶ ನೀಡಿದೆ.
ಅರಾವಳಿ ಬೆಟ್ಟಗಳ ವ್ಯಾಖ್ಯಾನದ ಗೊಂದಲ ಮತ್ತು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು, ನಿಯಮಾವಳಿ ರೂಪಿಸಲು 2026ರ ಮೇ 25ರಂದು ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆಂಡ್ ಎಜುಕೇಶನ್ (ICFRE) ಮಹಾನಿರ್ದೇಶಕರ ನೇತೃತ್ವದಲ್ಲಿ 5 ಸದಸ್ಯರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಗೆ ಆಗಸ್ಟ್ 31ರೊಳಗೆ ವರದಿ ನೀಡಲು ಸೂಚಿಸಲಾಗಿತ್ತು, ಆದರೆ ಸಮಿತಿಯು ಹೆಚ್ಚಿನ ಸಮಯ ಕೋರಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯು 2026ರ ಡಿಸೆಂಬರ್ 2ರಂದು ನಡೆಯಲಿದೆ.





