ತುಮಕೂರು: ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರನ್ನು ಸನ್ಮಾನಿಸುವುದಾಗಿ ಕರೆದು, ಬಳಿಕ ದಸರಾ ಕಾರ್ಯಕ್ರಮದ ಸ್ಥಳದಿಂದ ಹೊರಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಜಿಲ್ಲಾಡಳಿತದ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೌರಕಾರ್ಮಿಕರನ್ನು ಬ್ಯಾರಿಕೇಡ್ ಮೂಲಕ ಭೇಟಿಯಾದ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.
ನಗರವನ್ನು ಸ್ವಚ್ಛವಾಗಿಡುವ ಕಾರ್ಮಿಕರನ್ನು ಸನ್ಮಾನಿಸುವುದಾಗಿ ಕರೆದು, ಅವರಿಗೇ ಅಗೌರವ ತೋರಿದರೆ ಅದಕ್ಕೇನು ಅರ್ಥ? ಪೌರಕಾರ್ಮಿಕರ ಶ್ರಮವನ್ನು ಗುರುತಿಸುವುದು ಕೇವಲ ಸನ್ಮಾನಕ್ಕೆ ಸೀಮಿತವಾಗಬಾರದು. ಅವರ ಘನತೆ ಮತ್ತು ಸ್ವಾಭಿಮಾನಕ್ಕೂ ಗೌರವ ನೀಡಬೇಕು. ಪೌರಕಾರ್ಮಿಕರನ್ನು ಹೊರಕಳುಹಿಸಲು ಸೂಚನೆ ನೀಡಿದವರು ಯಾರು, ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಯಿತು ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು.

ಗೃಹ ಸಚಿವ ಜಿ. ಪರಮೇಶ್ವರ್ ಅವರು ಪೌರಕಾರ್ಮಿಕರನ್ನು ಬ್ಯಾರಿಕೇಡ್ ಮೂಲಕ ಭೇಟಿಯಾದ ವಿಚಾರವೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೌರಕಾರ್ಮಿಕರ ಬಗ್ಗೆ ಆತ್ಮೀಯತೆ ತೋರಿಸುವುದೆಂದರೆ ಬ್ಯಾರಿಕೇಡ್‌ನ ಆಚೆಯಿಂದ ಮಾತನಾಡಿಸುವುದಷ್ಟೇನಾ? ಅವರೊಂದಿಗೆ ನೇರವಾಗಿ ಬೆರೆತು, ಸಮಸ್ಯೆಗಳನ್ನು ಆಲಿಸಿ, ಗೌರವದಿಂದ ನಡೆಸಿಕೊಳ್ಳುವುದೇ ನಿಜವಾದ ಆತ್ಮೀಯತೆಯಲ್ಲವೇ?

ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ದಸರಾ ಎಲ್ಲ ವರ್ಗದ ಜನರಿಗೂ ಸೇರಿದ್ದು. ನಗರದ ಸ್ವಚ್ಛತೆಗಾಗಿ ದುಡಿಯುವವರಿಗೇ ಸಾರ್ವಜನಿಕ ಉತ್ಸವದಲ್ಲಿ ಅವಮಾನವಾದರೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ಅರ್ಥವೇನು? ಗಣ್ಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವ ಆಡಳಿತವು ಪೌರಕಾರ್ಮಿಕರಿಗೂ ಸಮಾನ ಗೌರವ ನೀಡುವ ಜವಾಬ್ದಾರಿ ಹೊಂದಿದೆ.
ಪೌರಕಾರ್ಮಿಕರನ್ನು ಹೊರಕಳುಹಿಸಿದ ಆರೋಪದ ಕುರಿತು ಜಿಲ್ಲಾಡಳಿತ ತನಿಖೆ ನಡೆಸಿ, ಘಟನೆಯ ಹಿಂದಿನ ಕಾರಣ ಹಾಗೂ ಹೊಣೆಗಾರರನ್ನು ಸ್ಪಷ್ಟಪಡಿಸಬೇಕು. ಪೊಲೀಸ್ ಸಿಬ್ಬಂದಿಯ ವರ್ತನೆಯಲ್ಲಿ ಲೋಪವಾಗಿರುವುದು ದೃಢಪಟ್ಟರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಸ್ಪಷ್ಟನೆ ನೀಡಬೇಕು.





