ಬಿಜೆಪಿಯನ್ನು ‘ವಾಷಿಂಗ್ ಮಷೀನ್’ ಎಂದು ಟೀಕಿಸುವುದಕ್ಕೆ ಯೂಸುಫ್ ಪಠಾಣ್ ಅವರ ಭೂಮಿ ಹಂಚಿಕೆ ಪ್ರಕರಣ ಮತ್ತೊಂದು ಪ್ರಬಲ ಉದಾಹರಣೆಯಾಗಿ ಕಾಣಿಸುತ್ತದೆ. ಬಿಜೆಪಿಯ ರಾಜಕೀಯ ವಿರೋಧಿಯಾಗಿದ್ದಾಗ ಅತಿಕ್ರಮಣದ ಆರೋಪ ಎದುರಿಸಿದ್ದ ವ್ಯಕ್ತಿಗೆ, ರಾಜಕೀಯ ಸಮೀಕರಣ ಬದಲಾದ ಬಳಿಕ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ರಿಯಾಯಿತಿಯಲ್ಲಿ ದೊರೆಯುವುದು ಬಿಜೆಪಿಯ ಪಕ್ಷಪಾತ ಮತ್ತು ಪಕ್ಷಾಂತರ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಜಮೀನಿಗಾಗಿ ಯೂಸುಫ್ ಪಠಾಣ್ 2012ರಲ್ಲೇ ಮಹಾನಗರ ಪಾಲಿಕೆಗೆ ಪ್ರಸ್ತಾವ ಸಲ್ಲಿಸಿದ್ದರು. ಸಾರ್ವಜನಿಕ ಹರಾಜು ನಡೆಸದೆ 99 ವರ್ಷಗಳ ಗುತ್ತಿಗೆಗೆ ಜಮೀನು ನೀಡುವಂತೆ ಕೋರಿದ್ದರು. ತಾವು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದು, ಭದ್ರತೆಯ ದೃಷ್ಟಿಯಿಂದ ಬಂಗಲೆಯ ಪಕ್ಕದಲ್ಲಿರುವ ಜಮೀನು ಅಗತ್ಯವಿದೆ ಎಂದು ಹೇಳಿದ್ದರು. ವಸತಿ ಉದ್ದೇಶಕ್ಕಾಗಿ ಈ ಜಮೀನನ್ನು ಹಂಚಿಕೆ ಮಾಡುವಂತೆ ಮನವಿ ಮಾಡಿದ್ದರು.
ಖ್ಯಾತ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾಣ್ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದಿದ್ದರು.
ಗುಜರಾತ್‌ನ ವಡೋದರಾದಲ್ಲಿ ತಮ್ಮ ಬಂಗಲೆಯ ಪಕ್ಕದಲ್ಲಿರುವ ಸರ್ಕಾರಿ ಜಮೀನನ್ನು ಪಡೆಯಲು ಪಠಾಣ್ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನೀಡಲು ಸರ್ಕಾರ ಸಿದ್ಧವಿರಲಿಲ್ಲ.
ಇದೀಗ ತೃಣಮೂಲ ಕಾಂಗ್ರೆಸ್ಸನ್ನು ತೊರೆದ ನಂತರ ಗುಜರಾತ್ ಬಿಜೆಪಿ ಸರ್ಕಾರ ತನ್ನ ನಿಲುವು ಬದಲಿಸಿದೆ. ಸದರಿ ನಿವೇಶನದ ಅರ್ಧದಷ್ಟು ಜಮೀನನ್ನು ಉಚಿತವಾಗಿ ನೀಡಲು ಮುಂದಾಗಿದೆ. ಉಳಿದ ಅರ್ಧವನ್ನು ರಿಯಾಯಿತಿ ದರದಲ್ಲಿ ನೀಡಲು ಒಪ್ಪಿದೆ.
ವಡೋದರಾದ ತಾಂದಲಜಾ ಪ್ರದೇಶದ 978 ಚದರ ಮೀಟರ್ ವಿಸ್ತೀರ್ಣದ ಈ ಜಮೀನಿನ ಮೌಲ್ಯ ಸುಮಾರು 20.53 ಕೋಟಿ ರೂಪಾಯಿ. ಈ ಪೈಕಿ 500 ಚದರ ಮೀಟರ್ ಜಮೀನನ್ನು ವಸತಿ ಉದ್ದೇಶಕ್ಕಾಗಿ ಉಚಿತವಾಗಿ ನೀಡಲಾಗುತ್ತದೆ. ಉಳಿದ 478 ಚದರ ಮೀಟರ್ ಜಮೀನನ್ನು ನಿಗದಿತ ಬೆಲೆಗಿಂತ ಶೇ.45ರಷ್ಟು ಕಡಿಮೆ ದರದಲ್ಲಿ ನೀಡಲಾಗುತ್ತದೆ. ಅಂದರೆ, ಈ ಭಾಗದ ಜಮೀನಿಗೆ ಪಠಾಣ್ ಶೇ.55ರಷ್ಟು ಹಣ ಪಾವತಿಸಿದರೆ ಸಾಕು.
ಇದೇ ಶುಕ್ರವಾರ ನಡೆಯಲಿರುವ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ಸಿಗಬೇಕಿದೆ. ಆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಯೂಸುಫ್ ಪಠಾಣ್ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ ಅದನ್ನು ಹಿಂಪಡೆದಿದ್ದರು.
ಏನಿದು ಜಮೀನು ವಿವಾದ?
ವಡೋದರಾದ ತಾಂದಲಜಾ ಪ್ರದೇಶದಲ್ಲಿ ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಅವರ ಬಂಗಲೆ ಇದೆ. ಹೆಸರು ‘ಬಾಗ್-ಎ-ಮಹಮೂದ್’. ಬಂಗಲೆಯ ಪಕ್ಕದಲ್ಲಿರುವ 978 ಚದರ ಮೀಟರ್ ನಿವೇಶನವನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಯೂಸುಫ್ ಪಠಾಣ್ ಬಯಸಿದ್ದರು. ಆದರೆ, ವಡೋದರಾ ಮಹಾನಗರ ಪಾಲಿಕೆ ಇದಕ್ಕೆ ಒಪ್ಪಿರಲಿಲ್ಲ. ಎರಡು ವರ್ಷಗಳ ಹಿಂದೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಮಹಾನಗರ ಪಾಲಿಕೆ ಪಠಾಣ್‌ಗೆ ನೋಟಿಸ್ ನೀಡಿತ್ತು. ಒತ್ತುವರಿ ತೆರವುಗೊಳಿಸಲು ಸೂಚಿಸಿತು. ಪಠಾಣ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
“ಈ ನಿವೇಶನ ಸಂಪೂರ್ಣವಾಗಿ ಮಹಾನಗರ ಪಾಲಿಕೆಗೆ ಸೇರಿದೆ. ಯೂಸುಫ್ ಪಠಾಣ್ ಕಾಂಪೌಂಡ್ ಗೋಡೆ ನಿರ್ಮಿಸಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವಿಗೆ ನೋಟಿಸ್ ನೀಡಿದ್ದೆವು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಹೋಗಿದ್ದಾರೆ” ಎಂದು ವಡೋದರಾ ಮಹಾನಗರ ಪಾಲಿಕೆಯ ಉಪ ಆಯುಕ್ತ ಸುರೇಶ್ ತುವೀರ್ ತಿಳಿಸಿದ್ದರು.
ಟಿಎಂಸಿ ತೊರೆದ ಬಳಿಕ ಬದಲಾದ ಸರ್ಕಾರದ ನಿಲುವು!
2024ರ ಲೋಕಸಭಾ ಚುನಾವಣೆಯಲ್ಲಿ ಯೂಸುಫ್ ಪಠಾಣ್ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರು ಸೋಲಿಸಿದ್ದು ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು.
ಚುನಾವಣೆಯ ಫಲಿತಾಂಶ ಹೊರಬಿದ್ದ ಹೊಸತರಲ್ಲೇ, ಬಿಜೆಪಿ ಆಡಳಿತದ ವಡೋದರಾ ಮಹಾನಗರ ಪಾಲಿಕೆ ಪಠಾಣ್‌ಗೆ ಜಮೀನು ಒತ್ತುವರಿ ಆರೋಪದಡಿ ನೋಟಿಸ್ ನೀಡಿತ್ತು.
2026ರ ಜೂನ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಬಳಿಕ ಟಿಎಂಸಿಯ 20 ಸಂಸದರು ಪಕ್ಷ ತೊರೆದರು. ಪಠಾಣ್ ಸೇರಿದಂತೆ ಎಲ್ಲರೂ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರಿದರು.
ಟಿಎಂಸಿ ತೊರೆದ ಎರಡು ತಿಂಗಳ ಬಳಿಕ ಪಠಾಣ್‌ಗೆ ಜಮೀನು ನೀಡಲು ಗುಜರಾತ್ ಸರ್ಕಾರ ಒಪ್ಪಿದೆ.
2012ರಿಂದಲೂ ಜಮೀನಿಗಾಗಿ ಪ್ರಯತ್ನ
ವಿವಾದಿತ ಜಮೀನು ನಗರ ಯೋಜನಾ ಯೋಜನೆ ಸಂಖ್ಯೆ 22ರ ಅಂತಿಮ ನಿವೇಶನ ಸಂಖ್ಯೆ 90ರಲ್ಲಿದೆ. ಈ ವರ್ಷ ವಡೋದರಾ ಮಹಾನಗರ ಪಾಲಿಕೆ ಈ ನಿವೇಶನವನ್ನು ಸಾರ್ವಜನಿಕ ಹರಾಜಿಗೆ ಇಡಲು ಸಿದ್ಧತೆ ನಡೆಸಿತ್ತು. ಪ್ರತಿ ಚದರ ಮೀಟರ್‌ಗೆ 2.10 ಲಕ್ಷ ರೂಪಾಯಿ ದರ ನಿಗದಿಪಡಿಸಿತ್ತು. ಇದರ ಆಧಾರದಲ್ಲಿ ಜಮೀನಿನ ಒಟ್ಟು ಮೌಲ್ಯ ಸುಮಾರು 20.5 ಕೋಟಿ ರೂಪಾಯಿ ಆಗುತ್ತದೆ.
ಈ ಜಮೀನಿಗಾಗಿ ಯೂಸುಫ್ ಪಠಾಣ್ 2012ರಲ್ಲೇ ಮಹಾನಗರ ಪಾಲಿಕೆಗೆ ಪ್ರಸ್ತಾವ ಸಲ್ಲಿಸಿದ್ದರು. ಸಾರ್ವಜನಿಕ ಹರಾಜು ನಡೆಸದೆ 99 ವರ್ಷಗಳ ಗುತ್ತಿಗೆಗೆ ಜಮೀನು ನೀಡುವಂತೆ ಕೋರಿದ್ದರು.
ತಾವು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದು, ಭದ್ರತೆಯ ದೃಷ್ಟಿಯಿಂದ ಬಂಗಲೆಯ ಪಕ್ಕದಲ್ಲಿರುವ ಜಮೀನು ಅಗತ್ಯವಿದೆ ಎಂದು ಹೇಳಿದ್ದರು. ವಸತಿ ಉದ್ದೇಶಕ್ಕಾಗಿ ಈ ಜಮೀನನ್ನು ಹಂಚಿಕೆ ಮಾಡುವಂತೆ ಮನವಿ ಮಾಡಿದ್ದರು. ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಮತ್ತು ಸಾಮಾನ್ಯ ಸಭೆ ಜಮೀನು ನೀಡಲು ಸಿದ್ಧವಾಗಿದ್ದವು.
ಜಮೀನಿನ ಮೌಲ್ಯ ಸುಮಾರು 5.6 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಈ ಮೊತ್ತ ಪಾವತಿಸಲು ಪಠಾಣ್ ಕೂಡ ಒಪ್ಪಿದ್ದರು. ಆದರೆ ನಗರಾಭಿವೃದ್ಧಿ ಇಲಾಖೆ ಪ್ರಸ್ತಾವವನ್ನು ಒಪ್ಪಿರಲಿಲ್ಲ. ಸಾರ್ವಜನಿಕ ಹರಾಜು ನಡೆಸದೆ ನೇರವಾಗಿ ಜಮೀನು ಹಂಚಿಕೆ ಮಾಡಬಾರದು ಎಂಬ ನಿಲುವು ತಳೆದಿತ್ತು.




