ತುಮಕೂರು ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 6ರಂದು ನಡೆಯಲಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇರ ನೇಮಕಾತಿ ಲಿಖಿತ ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ, ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಯು ಶಾಂತಿಯುತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತಾ ವ್ಯವಸ್ಥೆ, ಸಾರಿಗೆ ಸೌಲಭ್ಯ, ಆರೋಗ್ಯ ಇಲಾಖೆಯಿಂದ ಅಗತ್ಯ ವೈದ್ಯಕೀಯ ನೆರವು, ನಿರಂತರ ವಿದ್ಯುತ್ ಸರಬರಾಜು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪರೀಕ್ಷೆಯ ಪಾವಿತ್ರ್ಯವನ್ನು ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಕೈಗೊಂಡಿರುವ ಪೂರ್ವಸಿದ್ಧತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಪರೀಕ್ಷಾ ಕರ್ತವ್ಯದ ಗಂಭೀರತೆಯನ್ನು ಅರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಖಜಾನೆ, ಆರೋಗ್ಯ, ಪದವಿ ಪೂರ್ವ ಶಿಕ್ಷಣ, ಸಾರಿಗೆ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಾಧಿಕಾರಿಗಳು ಹಾಗೂ ವೀಕ್ಷಕರು ಉಪಸ್ಥಿತರಿದ್ದರು.





