ತಾಯಿಯ ಅಂತಃಕರಣ ಮತ್ತು ಬುದ್ಧನ ಕಾರುಣ್ಯ ಇದ್ದಾಗ ಮಾತ್ರ ವ್ಯಕ್ತಿ ಬೆಳೆಯಲು ಸಾಧ್ಯ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ವ್ಯಾಖ್ಯಾನಿಸಿದರು.
ತುಮಕೂರು ತಾಲೂಕು ಪೆರಮನಹಳ್ಳಿಯಲ್ಲಿ ಮಾನಸ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಎರಡು ಗುಣ ಇದ್ದವನು ಮಾತ್ರ ಏನನ್ನೂ ಬೇಕಾದರೂ ಕಟ್ಟಲು ಸಾಧ್ಯ ಎಂದ ಅವರು ಲೋಕಕ್ಕೆ ಕಾಣಿಸಿಕೊಳ್ಳುವ ತರ ನಾವು ಕೆಲಸ ಮಾಡುವ ಅಗತ್ಯವಿಲ್ಲ. ನಮ್ಮ ಪಾಡಿಗೆ ಕೆಲಸ ಮಾಡುತ್ತಾ ಹೋದರೆ ಅದು ಲೋಕಕ್ಕೆ ಗೊತ್ತಾಗುತ್ತದೆ. ಬಹಳ ಸದ್ದು ಮಾಡಿಕೊಂಡು ಏನನ್ನೂ ಮಾಡಬಾರದು. ಆ ಸದ್ದು ಗದ್ದಲದಲ್ಲಿ ಕಳೆದು ಹೋಗುತ್ತದೆ. ನಾವು ತಣ್ಣಗೆ ನದಿ ತರ ಕೆಲಸ ಮಾಡುತ್ತಾ ಹೋಗಬೇಕು ಎಂದರು
ಇಂತಹ ಪುಟ್ಟ ಹಳ್ಳಿಯಲ್ಲಿ ಇಂತದ್ದೊಂದು ಕಾರ್ಯಕ್ರಮ ಆಯೋಜನೆಗೊಂಡಿರುವುದು ಬಹಳ ವಿಶೇಷ ಎಂದ ಅವರು ಒಳ್ಳೆಯ ಅಭಿರುಚಿ, ಸಂಸ್ಕೃತಿ ಇರುವವರು ಮಾತ್ರ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯ ಎಂದರು. ತುಂಬಾ ಎತ್ತರಕ್ಕೆ ಬೆಳೆದ ಲೋ ಪ್ರೊಫೈಲ್ ಮೈಟೇಂನ್ ಮಾಡಬೇಕು. ಇಲ್ಲಿರುವ ಆಯೋಜಕರೆಲ್ಲಾ ಆ ರೀತಿ ಇರುವುದರಿಂದಲೇ ಇಂತಹ ಕಾರ್ಯಕ್ರಮ ಆಯೋಜನೆಗೆ ಸಾಧ್ಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯಿಂದ ತುಮಕೂರು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮ ಮಾಡಿದ್ದೇವೆ. ಮೊರಾರ್ಜಿ ಶಾಲೆಯ ಮಕ್ಕಳಿಗೆ ಶಿಬಿರ ಮಾಡಿದ್ದೇವೆ. ನರಸಿಂಹರಾಜು ನೆನಪಿನ ನಾಟಕೋತ್ಸವ, ಶರಣರ ನಾಟಕೋತ್ಸವ ಮಾ ಡಿದ್ದೇವೆ. ಶೀಘ್ರ ವಿಭಾಗೀಯ ನಾಟಕವನ್ನು ಮಾಡುವ ಇರಾದೆ ಇರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ನೌಕರರಾದ ನಾರಾಯಣಸ್ವಾಮಿ ಮಾತನಾಡಿ ಬಸವಣ್ಣ ಕಾಯಕವೇ ಕೈಲಾಸ ಅಂದಿದ್ದರು. ಮಾತಿನಲ್ಲಿ ಸತ್ಯವಿರಬೇಕು. ಹೃದಯದಲ್ಲಿ ದೆಯೆ ಇರಬೇಕು. ಇದನ್ನೆಲ್ಲಾ ಕಲಿಸಿಕೊಟ್ಟಿದ್ದು ಬಸವಣ್ಣ. ಈ ಕಾರ್ಯಕ್ರಮದ ಯಶಸ್ಸಿಗೆ ಮಕ್ಕಳೇ ಕಾರಣ ಎಂದರು.
ಮಕ್ಕಳಿಗೆ ಹಾಗೂ ಅವರ ಪೋಷಕರ ಸಹಕಾರದಿಂದ ಇಂತಹೊಂದು ಕಾರ್ಯಕ್ರಮ ಸಂಪನ್ನವಾಗಿದೆ.. ಮಾನಸ ಮಂದಿರದ ಹೊನ್ನಪ್ಪ, ನವೀನ್, ಶಿವಕುಮಾರ್ ಇವರೆಲ್ಲಾ ತೆರೆ ಮರೆಯಲ್ಲಿ ನಿಂತು ಅಚ್ಚು ಕಟ್ಟಾಗಿ ಕೆಲಸ ಮಾಡಿದ್ದಾರೆ. ಈ ಮೂರು ದಿಗ್ಗಜರು. ಇವರ ಕಾರ್ಯಕ್ಷಮತೆ ವರ್ಣಿಸಲು ಅಸಾಧ್ಯ ಎಂದರು.
ಮಾನಸ ಮಂದಿರದ ಅಧ್ಯಕ್ಷ ಪ್ರಸನ್ನ ಕಾವೇರಪ್ಪ ಮಾತನಾಡಿ ಕಲೆ ಅನ್ನುವುದುಎಷ್ಟು ಮುಖ್ಯ ಎಂಬ ಡಿವಿಜಿ ಅವರ ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ ನೀನು ನಕ್ಕು ನಿನ್ನ ಸುತ್ತ ಮುತ್ತಲಿನ ನಾಲ್ಕು ಜನರ ನಗಿಸಿ ಕಲೆಯ ಮೂಲಕ ಅನಂತ ದರ್ಶನ ಮಾಡಿಸಬೇಕು ಎಂದರು.
ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಗಸು ಎನ್ನುವ ಹಾಗೆ ಇಲ್ಲಿ ಹೊಸ ಚಿಗುರು, ಹಳೆ ಬೇರು ಇದೆ. ಬೇರು ಭದ್ರವಾಗಿರಬೇಕು, ಚಿಗುರು ಹೊಸದಾಗಿರಬೇಕು ಎಂದರು.
ಪ್ರಾಸ್ತಾವಿಕವಾಗಿ ಸಿಐಡಿ ಇನ್ಸ್ ಪೆಕ್ಟರ್ ಶಿವಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಹೊನ್ನಪ್ಪ, ಪ್ರಭುರಾಜ್ ಮತ್ತಿತರರು ಇದ್ದರು. ಬಳಿಕ ಮಕ್ಕಳೇ ಅಭಿನಯಿಸಿದ ಕತ್ತಲೆ ರಾಜ್ಯದಲ್ಲಿ ರಾಜ ನಾಟಕ ಪ್ರದರ್ಶನಗೊಂಡಿತು.
- Advertisement -





