ಒಬ್ಬ ವ್ಯಕ್ತಿಗೆ ದೇವರು, ಸಂಪ್ರದಾಯಗಳ ಮೇಲೆ ನಂಬಿಕೆಯಿಲ್ಲದಿದ್ದರೆ, ಆತ ದೇವಸ್ಥಾನದ ಕುರಿತಾಗಲೀ, ಸಂಪ್ರದಾಯಗಳನ್ನಾಗಲೀ ಪ್ರಶ್ನಿಸುವಂತಿಲ್ಲವೇ? ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠದಲ್ಲಿ ವ್ಯಕ್ತವಾದ ನ್ಯಾ. ಬಿ ವಿ ನಾಗರತ್ನ ಅವರ ಈ ಮಾತುಗಳು ಈಗ ದೇಶಾದ್ಯಂತ ದೊಡ್ಡ ವೈಚಾರಿಕ ಮಂಥನಕ್ಕೆ ನಾಂದಿ ಹಾಡಿವೆ.
ಒಬ್ಬ ವ್ಯಕ್ತಿಗೆ ದೇವರು, ಸಂಪ್ರದಾಯಗಳ ಮೇಲೆ ನಂಬಿಕೆಯಿಲ್ಲದಿದ್ದರೆ, ಆತ ದೇವಸ್ಥಾನದ ಕುರಿತಾಗಲೀ, ಸಂಪ್ರದಾಯಗಳನ್ನಾಗಲೀ ಪ್ರಶ್ನಿಸುವಂತಿಲ್ಲವೇ? ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ವ್ಯಕ್ತವಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಈ ಮಾತುಗಳು ಈಗ ದೇಶಾದ್ಯಂತ ದೊಡ್ಡ ವೈಚಾರಿಕ ಮಂಥನಕ್ಕೆ ನಾಂದಿ ಹಾಡಿವೆ. ಧರ್ಮದ ಸ್ವಾಯತ್ತತೆ ಮತ್ತು ಸಾಂವಿಧಾನಿಕ ಸಮಾನತೆಯ ನಡುವಿನ ಈ ಜಟಾಪಟಿ, ಕಾಲಕ್ಕೆ ತಕ್ಕಂತೆ ಧಾರ್ಮಿಕ ನಿಯಮಗಳು ಸುಧಾರಣೆಯಾಗಬೇಕೇ ಅಥವಾ ಪುರಾತನ ಶ್ರದ್ಧೆಯೇ ಅಂತಿಮವೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಿಜೆಐ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ‘ಮೂಲಭೂತ ಹಕ್ಕುಗಳು ವರ್ಸಸ್ ನಂಬಿಕೆ’ ಕುರಿತ ವಿಚಾರಣೆ ವೇಳೆ, ಜಸ್ಟೀಸ್ ಬಿ.ವಿ. ನಾಗರತ್ನ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಧರ್ಮ ಮತ್ತು ಅದರ ಆಚರಣೆಗಳಲ್ಲಿ ನಂಬಿಕೆ ಇಲ್ಲದ ವ್ಯಕ್ತಿಗೆ ಆ ಸಂಪ್ರದಾಯಗಳ ಸಿಂಧುತ್ವವನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚಾರಿ’ ಸ್ವರೂಪದ ಕುರಿತ ವಾದದ ಸಂದರ್ಭದಲ್ಲಿ, “ದೇವಸ್ಥಾನ ಮತ್ತು ದೇವರಿಗೆ ಸಂಬಂಧಿಸಿದ ನಂಬಿಕೆಗಳನ್ನು ಪ್ರಶ್ನಿಸಲು ನಂಬಿಕೆಯಿಲ್ಲದವನಿಗೆ ಯಾವುದೇ ಹಕ್ಕಿಲ್ಲ” ಎಂದು ಅವರು ನುಡಿದಿದ್ದಾರೆ.

2018ರ ಶಬರಿಮಲೆ ತೀರ್ಪಿನ (2018ರ ತೀರ್ಪು ಶಬರಿಮಲೆ ದೇವಸ್ಥಾನಕ್ಕೆ 10-50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಪದ್ಧತಿಯನ್ನು ‘ಅಗತ್ಯ ಧಾರ್ಮಿಕ ಆಚರಣೆಯಲ್ಲ’ ಎಂದು ಹೇಳಿ ರದ್ದುಗೊಳಿಸಿತ್ತು) ಕುರಿತು ಅಸಮ್ಮತಿ ಸೂಚಿಸಿದ ನ್ಯಾಯಮೂರ್ತಿ ನಾಗರತ್ನ, ಒಂದು ಪದ್ಧತಿಯು ಧಾರ್ಮಿಕ ಎಂದು ಗುರುತಿಸಲ್ಪಟ್ಟ ಮೇಲೆ ಅದು ಧರ್ಮದ ಅಗತ್ಯ ಭಾಗವೋ ಅಲ್ಲವೋ ಎಂದು ನ್ಯಾಯಾಲಯಗಳು ಪರಿಶೀಲಿಸುವ ಅಗತ್ಯವಿಲ್ಲ ಎಂದರು.
ಇದಕ್ಕೆ ಪೂರಕವಾಗಿ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ, “ಧಾರ್ಮಿಕ ಸಂಸ್ಥೆಯ ಜಾತ್ಯತೀತ ಆಚರಣೆಗಳು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತವೆ. ಆದರೆ ಧಾರ್ಮಿಕ ಆಚರಣೆಗಳು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಅಥವಾ ಆರೋಗ್ಯಕ್ಕೆ ಭಂಗ ತರದ ಹೊರತು ಸಾಂವಿಧಾನಿಕ ರಕ್ಷಣೆಯನ್ನು ಹೊಂದಿರುತ್ತವೆ” ಎಂದರು.
ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮಾತನಾಡಿ, “ಒಂದು ಪದ್ಧತಿಯು ಜಾತ್ಯತೀತವೋ ಅಥವಾ ಧಾರ್ಮಿಕವೋ ಎಂಬುದನ್ನು ನ್ಯಾಯಾಲಯವು ಪ್ರಕರಣದ ಆಧಾರದ ಮೇಲೆ ನಿರ್ಧರಿಸಬೇಕಾಗುತ್ತದೆ” ಎಂದರು. ನ್ಯಾಯಮೂರ್ತಿ ಪಿ.ಬಿ. ವರಾಲೆ, “ತಂತ್ರಜ್ಞಾನದ ಪ್ರಗತಿ ಮತ್ತು ಶಿಕ್ಷಣದ ಪ್ರಸಾರದಿಂದಾಗಿ, ಸಮುದಾಯವು ಸಾಮೂಹಿಕವಾಗಿ ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಬದಲಾಯಿಸಲು ಅಥವಾ ಸುಧಾರಿಸಲು ಸಾಧ್ಯವಿಲ್ಲವೇ?” ಎಂದು ಕೇಳಿದರು.
ಈ ಪ್ರಶ್ನೆಗೆ ಪೂರಕವಾಗಿ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು, “ಯಾವುದೇ ಧಾರ್ಮಿಕ ಆಚರಣೆಯು ಒಂದು ಪಂಗಡಕ್ಕೆ ವಿಶಿಷ್ಟವಾಗಿದ್ದರೆ ಮತ್ತು ಪವಿತ್ರವೆಂದು ಪರಿಗಣಿಸಲ್ಪಟ್ಟಿದ್ದರೆ, ಆ ಪದ್ಧತಿಯಲ್ಲಿ ಬದಲಾವಣೆ ತರಲು ಸಮುದಾಯದ ಒಳಗಿನ ಚರ್ಚೆಯನ್ನು ಅದು ನಿಷೇಧಿಸುತ್ತದೆಯೇ?” ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಗಿರಿ, “ಒಬ್ಬ ವ್ಯಕ್ತಿಯು ದೇವಸ್ಥಾನಕ್ಕೆ ಹೋಗುವುದು ಆ ದೇವರ ಮೇಲೆ ನಂಬಿಕೆ ಮತ್ತು ವಿಶ್ವಾಸವಿದ್ದಾಗ ಮಾತ್ರ…” ಎಂದರು. ಒಂದು ಆಚರಣೆಯು ಪವಿತ್ರ ಎಂದ ಮಾತ್ರಕ್ಕೆ ಅದು ಬದಲಾವಣೆಯ ಚರ್ಚೆಯನ್ನೇ ನಿಷೇಧಿಸುತ್ತದೆಯೇ ಎಂಬ ಜಿಜ್ಞಾಸೆ ಕೂಡ ಈ ಹೊತ್ತಿನಲ್ಲಿ ವ್ಯಕ್ತವಾಯಿತು.
‘ಧರ್ಮ’ ಎನ್ನುವುದು ಒಂದು ಸಮುದಾಯದ ಆಂತರಿಕ ವಿಚಾರ ಎಂಬುದು ನಿಜವಾದರೂ, ಆ ಆಚರಣೆಗಳು ಸಮಾಜದ ಒಂದು ವರ್ಗವನ್ನು (ಉದಾಹರಣೆಗೆ ಮಹಿಳೆಯರನ್ನು ಅಥವಾ ಒಂದು ನಿರ್ದಿಷ್ಟ ಗುಂಪನ್ನು) ಹೊರಗಿಡಲು ಅಥವಾ ಕೀಳಾಗಿ ಕಾಣಲು ಬಳಸಲ್ಪಟ್ಟಾಗ, ಅದು ಕೇವಲ ಆಂತರಿಕ ವಿಚಾರವಾಗಿ ಅಥವಾ ಅದೊಂದು ನಂಬಿಕೆಯಾಗಿ ಉಳಿಯುವುದಿಲ್ಲ. ಅಲ್ಲಿ ಅದು ಸಾರ್ವಜನಿಕ ತಾರತಮ್ಯವಾಗಿ ರೂಪಾಂತರಗೊಳ್ಳುತ್ತದೆ. ನ್ಯಾಯಮೂರ್ತಿಗಳು ಪ್ರತಿಪಾದಿಸುವ ‘ಲೋಕಸ್ ಸ್ಟ್ಯಾಂಡಿ’ ಅಥವಾ ‘ಪ್ರಶ್ನಿಸುವ ಅರ್ಹತೆ’ಯ ತರ್ಕ ಇಲ್ಲಿ ಮತ್ತಷ್ಟು ಚರ್ಚೆಗೆ ಆಸ್ಪದ ಮಾಡಿಕೊಡುತ್ತದೆ. ಅಂದರೆ, ಒಬ್ಬ ವ್ಯಕ್ತಿ ಸಮಾಜದಲ್ಲಿ ನಡೆಯುವ ಅಸಮಾನತೆಯನ್ನು ಕಂಡು ಮರುಗಿದರೂ, ಆತ ಆ ನಿರ್ದಿಷ್ಟ ಧರ್ಮದ ಚೌಕಟ್ಟಿನೊಳಗೆ ಇಲ್ಲದಿದ್ದರೆ ಆತನ ಧ್ವನಿಗೆ ಬೆಲೆ ಇಲ್ಲವೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ.
ಯಾವುದೇ ಒಂದು ಆಚರಣೆಯು ಮಾನವ ಘನತೆಗೆ ವಿರುದ್ಧವಾಗಿದ್ದಾಗ, ಅದನ್ನು ಪ್ರಶ್ನಿಸಲು ಆ ಧರ್ಮದ ಗುರುತಿನ ಚೀಟಿ ಅಥವಾ ಸದಸ್ಯತ್ವದ ಅಗತ್ಯವಿರಬಾರದು. ಸಂವಿಧಾನವು ನಮಗೆ ನೀಡಿರುವುದು ಪ್ರಜೆಯ ಸ್ಥಾನಮಾನವನ್ನೇ ಹೊರತು ಕೇವಲ ಭಕ್ತನ ಸ್ಥಾನಮಾನವನ್ನಲ್ಲ. ಒಬ್ಬ ಜಾಗೃತ ಪ್ರಜೆಯಾಗಿ, ದೇಶದ ಯಾವುದೇ ಮೂಲೆಯಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದ್ದರೆ ಅದನ್ನು ಪ್ರಶ್ನಿಸುವ ಹಕ್ಕು ಖಂಡಿತ ನಮಗಿರುತ್ತದೆ. ಒಂದು ಕಾಲದಲ್ಲಿ ಸತಿ ಪದ್ಧತಿಯನ್ನು ಪ್ರಶ್ನಿಸಿದವರು ಕೇವಲ ಧಾರ್ಮಿಕ ಚೌಕಟ್ಟಿನಿಂದ ಅದನ್ನು ನೋಡಲಿಲ್ಲ, ಬದಲಿಗೆ ಮಾನವ ಹಕ್ಕುಗಳ ದೃಷ್ಟಿಕೋನದಿಂದ ನೋಡಿದ್ದರು. ಇಂದು ನಾವು ‘ನಂಬಿಕೆ ಇಲ್ಲದವರು ದೂರವಿರಿ’ ಎಂದರೆ, ಅಂದು ನಡೆದ ಅಂತಹ ಕ್ರಾಂತಿಕಾರಿ ಸುಧಾರಣೆಗಳಿಗೆ ಜಾಗವೇ ಇರುತ್ತಿರಲಿಲ್ಲ.

ಇದನ್ನೂ ಓದಿ: ‘ಪಹಲ್ಗಾಮ್’ ಪೈಶಾಚಿಕ ಕೃತ್ಯಕ್ಕೆ ವರ್ಷ: ‘ಆಪರೇಷನ್ ಸಿಂಧೂರ’ದ ಮರೆಯಲ್ಲಿ ಅವಿತ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?
ನ್ಯಾಯಪೀಠದಲ್ಲಿ ಜಸ್ಟೀಸ್ ವರಾಲೆ ಮತ್ತು ಬಾಗ್ಚಿ ಅವರು ಎತ್ತಿದ ಪ್ರಶ್ನೆಗಳು ಅತ್ಯಂತ ಪ್ರಸ್ತುತವಾಗುತ್ತವೆ. ಸಮಾಜ ಮತ್ತು ಶಿಕ್ಷಣ ಬೆಳೆದಂತೆ ಆಚರಣೆಗಳು ಮರುಪರಿಶೀಲನೆಗೆ ಒಳಪಡಬೇಕು. ಧರ್ಮವು ಒಂದು ಹರಿಯುವ ನದಿಯಂತಿರಬೇಕು, ನಿಂತ ನೀರಾಗಬಾರದು. ಒಂದು ಆಚರಣೆಯು ‘ಪವಿತ್ರ’ ಎಂಬ ಕಾರಣಕ್ಕೆ ಅದು ವಿಮರ್ಶಾತೀತ ಎನ್ನುವುದು ವೈಚಾರಿಕ ಪ್ರಗತಿಗೆ ಮಾರಕವಾಗಬಹುದು. ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸುವುದು ಎಷ್ಟು ಮುಖ್ಯವೋ, ಆ ಸ್ವಾಯತ್ತತೆಯ ಹೆಸರಿನಲ್ಲಿ ಸಂವಿಧಾನದ ‘ಸಮಬಾಳು-ಸಮಪಾಲು’ ತತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ.
ನ್ಯಾಯಾಲಯದ ಮುಂದಿರುವ ಸವಾಲು, ಸಂವಿಧಾನದ ಆಶಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದು. ಧರ್ಮ ಮತ್ತು ಶ್ರದ್ಧೆಗಳು ವ್ಯಕ್ತಿಯ ಆಂತರಿಕ ಶಕ್ತಿಯಾಗಬೇಕೇ ಹೊರತು, ಅವು ಯಾರನ್ನೂ ತಾರತಮ್ಯದ ದೃಷ್ಟಿಯಿಂದ ನೋಡುವ ಆಯುಧಗಳಾಗಬಾರದು. ನಂಬಿಕೆ ಇರುವವನು ಭಕ್ತಿಯಿಂದ ಆಚರಿಸಲಿ, ನಂಬಿಕೆ ಇಲ್ಲದವನು ತರ್ಕದಿಂದ ವಿಮರ್ಶಿಸಲಿ. ಇವೆರಡಕ್ಕೂ ಅವಕಾಶವಿರುವುದೇ ಭಾರತೀಯ ಪ್ರಜಾಪ್ರಭುತ್ವದ ಹಿರಿಮೆ. ಈ ಹಿರಿಮೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಇಂದು ದೇಶದ ಅತ್ಯುನ್ನತ ನ್ಯಾಯಾಲಯದ ಮೇಲಿದೆ. ನಮ್ಮ ಮೇಲೂ!





