ಹಿಂದಿನ ಕಾಲದಿಂದಲೂ ಬೇರು ಬಿಟ್ಟಿರುವ ಮೂಢನಂಬಿಕೆಗಳನ್ನು ಹಾಗೂ ಹಲವು ಕಟ್ಟುಪಾಡುಗಳನ್ನು ಹೋಗಲಾಡಿಸಬೇಕು ಎಂದು ಕಾರ್ಯದರ್ಶಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ರವೀಂದ್ರ ಅವರು ತಿಳಿಸಿದರು.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಾರನಾಗನಹಟ್ಟಿ ಗ್ರಾಮದಲ್ಲಿ ನಡೆದ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸೇರಿದಂತೆ ಹಲವು ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯವಾಗುವ ಸಾಮಾನ್ಯ ಕಾನೂನು ಕುರಿತು ಮಾಹಿತಿ, ಅರಿವು ಇರಲೇಬೇಕು. ಸರ್ಕಾರದ ಹಲವು ಸೌಲಭ್ಯ ಪಡೆಯಲು, ಆಸ್ತಿ ಮಾರಾಟ ಮತ್ತು ಖರೀದಿ, ಜನನ, ಮರಣ, ಕಂದಾಯ ಇಲಾಖೆ ಕೆಲಸ ಕಾರ್ಯಗಳ ಕುರಿತು ಕನಿಷ್ಠ ಕಾನೂನಿನ ತಿಳಿವಳಿಕೆ ಇರಬೇಕು. ಕಾನೂನು ತಿಳಿದವರು ತಿಳಿಯವದರಿಗೆ ತಿಳಿಸಿ ಹೇಳುವ ಕೆಲಸ ಮಾಡಬೇಕು” ಎಂದು ಹೇಳಿದರು.
“ಕಾನೂನಿನ ಅರಿವು ಇಲ್ಲವೆಂದು ಸಮಾಜದಲ್ಲಿ ಯಾರೂ ತಮಗೆ ಸಿಗಬೇಕಾದ ಹಕ್ಕು ಮತ್ತು ನ್ಯಾಯದಿಂದ ವಂಚಿತರಾಗಬಾರದು. ಅದಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸಲು ಜನರ ಮನೆ ಬಾಗಿಲಿಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಜನರು ಇದನ್ನು ಸದುಪಯೋಗ ಮಾಡಿಕೊಂಡು ಕಾನೂನಿನ ಅರಿವು ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
“ಪ್ರತಿ ಪ್ರಜೆ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಜ್ಞಾನ ವೃದ್ಧಿಸುತ್ತದೆ. ಜ್ಞಾನದಿಂದ ಕಾನೂನಿನ ತಿಳಿವಳಿಕೆ ಹೆಚ್ಚುತ್ತದೆ. ತಮಗೆ ಬೇಕಾದ ಹಕ್ಕು ಮತ್ತು ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ದೇಶ, ರಾಜ್ಯ, ಸ್ಥಳೀಯ ಪ್ರದೇಶ, ಸಮಾಜದ ಉದ್ಧಾರಕ್ಕೆ ಕಾನೂನು ಅರಿವು ಮಹತ್ವದ ಪಾತ್ರ ವಹಿಸುತ್ತದೆ. ಜನರಲ್ಲಿ ಕಾನೂನಿನ ಅರಿವು ಮೂಡಿಸಲೆಂದು ರೆಕಾರ್ಡ್ ಮಾಡಿರುವ ಧ್ವನಿಯುಳ್ಳ ಕಾನೂನಿನ ಮಾಹಿತಿ ನೀಡುವ ವಾಹನದ ಮೂಲಕ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ” ಎಂದು ಹೇಳಿದರು.
ತಹಶೀಲ್ದಾರ್ ವರದರಾಜು ಮಾತನಾಡಿ, “ನಾವು ಈಗ 21ನೇ ಶತಮಾನದಲ್ಲಿ ಇದ್ದರೂ ನಮ್ಮ ಗೊಲ್ಲರಹಟ್ಟಿಗಳಲ್ಲಿ ಈ ಒಂದು ಮೌಢ್ಯತೆ ಮೂಢನಂಬಿಕೆಗಳನ್ನು ಇನ್ನೂ ಆಚರಣೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಕಳೆದ ಕೆಲವು ದಿನಗಳ ಹಿಂದೆ ಚಂದ್ರನ ಮೇಲೆ ರಾಕೆಟ್ ಉಡಾವಣೆ ಮಾಡಿ ಈಗ ಸೂರ್ಯ ಗ್ರಹಕ್ಕೆ ರಾಕೆಟ್ ಹಾರಿಸಲು ಮುಂದಾಗಿದ್ದೇವೆ. ಇಷ್ಟೆಲ್ಲಾ ಜಾಗತಿಕವಾಗಿ ಮುಂದಿದ್ದರೂ ಮೂಢನಂಬಿಕೆಗಳಿಂದ ಹೊರಬಂದಿಲ್ಲ. ಸರ್ಕಾರದಿಂದ ಎಲ್ಲ ರೀತಿಯ ಕಾನೂನು ಹರಿವು ಕಾರ್ಯಕ್ರಮಗಳು ನಡೆದರೂ ಕೂಡ ಮೂಢನಂಬಿಕೆಗಳಿಗೆ ಜನ ಮಾರುಹೋಗಿದ್ದಾರೆ. ಈ ಮೂಢನಂಬಿಕೆಗಳನ್ನು ಬದಿಗಿಟ್ಟು ಮುಖ್ಯವಾಹಿನಿಗೆ ಬರಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹ
ಹಿರಿಯ ನ್ಯಾಯಾಧೀಶರಾದ ಎಮ್ ಎಸ್ ಹರಿಣಿ, ಶ್ರೀಕಾಂತ್, ವಿಸ್ಮಿತ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಶೇಷನಂದನ್, ವಕೀಲ ಪ್ರಭಾಕರ್ ರೆಡ್ಡಿ, ಬಿಇಒ ಅಶ್ವಥ್ ನಾರಾಯಣ್, ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್, ವೃತ್ತ ನಿರೀಕ್ಷಕ ಗಿರೀಶ್, ಸಿಡಿಪಿಒ ನಾರಾಯಣ್, ಪಿಡಿಒ ದಾದಲೂರಪ್ಪ, ರಂಗಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರಕ್ಕ, ಉಪಾಧ್ಯಕ್ಷ ಭವಾನಿ, ಟಿಎಚ್‌ಒ ತಿರುಪತಯ್ಯ, ಕಂದಾಯ ಅಧಿಕಾರಿ ಕಿರಣ್ ಹಾಗೂ ಅಮ್ಜದ್ ಖಾನ್ ಸೇರಿದಂತೆ ಇತರರು ಇದ್ದರು.