ಗಜಪಡೆಯ ಗಾಂಭೀರ್ಯ, ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ, ಭಕ್ತಿಯ ಪರವಶತೆಯಲ್ಲಿ ಮಿಂದೆದ್ದ ಜನಸ್ತೋಮ, ಹೆಜ್ಜೆ ಹಾಕಿದ ನೂರಾರು ಕಲಾತಂಡಗಳು… ನಗರದ ಬೀದಿಗಳಲ್ಲಿ ಸಂಭ್ರಮದ ಅಲೆ ಎಬ್ಬಿಸಿದ ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆ ನಾಡಹಬ್ಬದ ವೈಭವವನ್ನು ಅನಾವರಣಗೊಳಿಸಿತು.
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಬುಧವಾರ ನಗರದ ಬಿ.ಜಿ.ಎಸ್. ವೃತ್ತದಲ್ಲಿ ಸಾಂಪ್ರದಾಯಿಕವಾಗಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮೈಸೂರು ದಸರಾವನ್ನು ನೆನಪಿಸುವ ರೀತಿಯಲ್ಲಿ ನಡೆದ ಮೆರವಣಿಗೆಗೆ ಸಾವಿರಾರು ಜನರು ಸಾಕ್ಷಿಯಾದರು.

ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದು, ದುಬಾರೆಯಿಂದ ಆಗಮಿಸಿದ್ದ ಲಕ್ಷ್ಮಣ ಆನೆ ಹೊತ್ತಿದ್ದ ಅಂಬಾರಿ. ಬಣ್ಣಬಣ್ಣದ ವಸ್ತ್ರ ಹಾಗೂ ಹೂಗಳಿಂದ ಅಲಂಕರಿಸಿದ್ದ ಲಕ್ಷ್ಮಣನ ಮೇಲಿನ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಲಕ್ಷ್ಮಣನ ಎರಡೂ ಬದಿಗಳಲ್ಲಿ ಸಾಗಿದ ಎರಡು ಲಕ್ಷ್ಮೀ ಆನೆಗಳು ಮೆರವಣಿಗೆಯ ಸೊಬಗನ್ನು ಇಮ್ಮಡಿಗೊಳಿಸಿದವು.
ಗಜಪಡೆಯ ಗಾಂಭೀರ್ಯ, ಅಂಬಾರಿಯ ವೈಭವ ಹಾಗೂ ದೇವಿಯ ದರ್ಶನಕ್ಕಾಗಿ ಮುಗಿಬಿದ್ದ ಭಕ್ತರ ಉತ್ಸಾಹ ನಗರದ ವಾತಾವರಣಕ್ಕೆ ಹಬ್ಬದ ಕಳೆ ತುಂಬಿತು. ತುಮಕೂರಿನಲ್ಲಿ ಮೂರನೇ ಬಾರಿಗೆ ಆಯೋಜಿಸಿದ್ದ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ನಗರದ ಪ್ರಮುಖ ರಸ್ತೆಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
ಮೆರವಣಿಗೆಯ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಜನರು ಮುಗಿಬಿದ್ದರು. ರಸ್ತೆ ಬದಿಗಳಲ್ಲಿ ನಿರ್ಮಿಸಿದ್ದ ಗ್ಯಾಲರಿಗಳಿಂದಲೂ ಜನರು ಮೆರವಣಿಗೆಯನ್ನು ವೀಕ್ಷಿಸಿದರು. ಗಜಪಡೆಯ ವೈಭವವನ್ನು ಕಣ್ತುಂಬಿಕೊಂಡ ಜನರಲ್ಲಿ ಮೈಸೂರು ದಸರೆಯ ನೆನಪುಗಳು ಮರುಕಳಿಸಿದವು.

ಜಂಬೂಸವಾರಿಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು, ನಗರದ ವಿವಿಧ ಬಡಾವಣೆಗಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 33ಕ್ಕೂ ಹೆಚ್ಚು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ. ಹೂಗಳಿಂದ ಅಲಂಕರಿಸಿದ್ದ ಸಾರೋಟು ಹಾಗೂ ರಥಗಳಲ್ಲಿ ದೇವರ ಮೂರ್ತಿಗಳನ್ನು ಕೊಂಡೊಯ್ಯಲಾಯಿತು.
ತುಮಕೂರು ತಾಲ್ಲೂಕು ಕಚೇರಿಯ ಗಣಪತಿ, ಮಂಡಿಪೇಟೆಯ ಶ್ರೀ ಭದ್ರಕಾಳಿ, ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಚಿಕ್ಕಪೇಟೆಯ ಶ್ರೀ ಕೋಟೆ ಆಂಜನೇಯಸ್ವಾಮಿ, ಶ್ರೀ ಕನ್ನಿಕಾಪರಮೇಶ್ವರಿ ಸ್ವಾಮಿ, ವಿಶ್ವಕರ್ಮ ಕಾಳಿಕಾಂಬ, ಬ್ರಹ್ಮಕುಮಾರಿ ಈಶ್ವರಿ, ಅಂಕಾಲೇಶ್ವರಿ, ನಾಲ್ಕುಗಾಲಿ ಬಾವಿ ಗಣೇಶ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಮಾರಿಯಮ್ಮ ನಗರದ ಮಾರಿಯಮ್ಮ ದೇವಿ ಹಾಗೂ ಶ್ರೀ ವೀರಭದ್ರಸ್ವಾಮಿ ಸೇರಿದಂತೆ ವಿವಿಧ ದೇವತೆಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಿದವು.

ಸಾಲಾಗಿ ಸಾಗಿದ ದೇವರ ಉತ್ಸವ ಮೂರ್ತಿಗಳಿಗೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ದೇವತೆಗಳ ದರ್ಶನ ಪಡೆಯಲು ಜನರು ಮುಗಿಬಿದ್ದರೆ, ಭಕ್ತರು ಕೈಮುಗಿದು ಪ್ರಾರ್ಥಿಸಿದರು. ವಿವಿಧ ದೇವತೆಗಳ ಉತ್ಸವ ಮೂರ್ತಿಗಳ ಒಂದೇ ಮೆರವಣಿಗೆ ನಗರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸಿತು.
ಮೆರವಣಿಗೆಯುದ್ದಕ್ಕೂ ನಾಡಿನ ಜಾನಪದ ಕಲಾ ವೈಭವ ಅನಾವರಣಗೊಂಡಿತು. ಮಹಿಳೆಯರ ಪೂರ್ಣಕುಂಭ ಕಳಶ, ಪೊಲೀಸ್ ಅಶ್ವದಳ, ನಂದಿಧ್ವಜ, ಸೋಮನಕುಣಿತ, ಗೊರವರ ಕುಣಿತ, ತಮಟೆ, ಹಗಲು ವೇಷ, ಹುಲಿವೇಷ, ಯಕ್ಷಗಾನ, ವೀರಗಾಸೆ, ಅರೆವಾದ್ಯ, ಗಾರುಡಿಗೊಂಬೆ, ಕೀಲುಕುದುರೆ, ಡೊಳ್ಳು ಕುಣಿತ ಹಾಗೂ ತಾಳಮದ್ದಳೆ ಸೇರಿದಂತೆ ನೂರಾರು ಕಲಾತಂಡಗಳು ತಮ್ಮ ಕಲಾಪ್ರದರ್ಶನದ ಮೂಲಕ ಜನರನ್ನು ರಂಜಿಸಿದವು.
ವಿಶೇಷವಾಗಿ ಎತ್ತರದ ಗಾರುಡಿಗೊಂಬೆಗಳ ಪ್ರತಿರೂಪಗಳು ಮಕ್ಕಳ ಗಮನ ಸೆಳೆದವು. ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿದ ಕಲಾವಿದರು, ವೀರಗಾಸೆ ಕಲಾವಿದರ ಆಕರ್ಷಕ ಪ್ರದರ್ಶನ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಗೆ ಹೊಸ ಮೆರುಗು ನೀಡಿದವು.
ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕೆಲವರು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದರೆ, ಇನ್ನು ಕೆಲವರು ತಮ್ಮ ನೆಚ್ಚಿನ ಕಲಾಪ್ರದರ್ಶನಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದರು. ಗಜಪಡೆ, ದೇವರ ಉತ್ಸವ ಮೂರ್ತಿಗಳು ಹಾಗೂ ಜಾನಪದ ಕಲಾತಂಡಗಳ ಸಮ್ಮಿಲನ ತುಮಕೂರು ದಸರೆಯ ಸಂಭ್ರಮವನ್ನು ಉತ್ತುಂಗಕ್ಕೇರಿಸಿತು.

ಬಿ.ಜಿ.ಎಸ್. ವೃತ್ತದಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆ ಚರ್ಚ್ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ, ಅಮಾನಿಕೆರೆ ರಸ್ತೆ, ಕೋತಿತೋಪು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ತಲುಪಿತು.
ಬಳಿಕ ವಿವಿಧ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕದಳಿ ಛೇದನ ಮಾಡುವ ಮೂಲಕ ಸಾಂಪ್ರದಾಯಿಕ ಶಮೀ ಪೂಜೆಯನ್ನು ನೆರವೇರಿಸಿದರು. ಇದರೊಂದಿಗೆ ಜಂಬೂಸವಾರಿ ಮೆರವಣಿಗೆಯ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.
ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಹೇಶ್, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಟಿ.ಬಿ. ಜಯಚಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್ರಾಜ್ ಎಂ., ಉಪಮುಖ್ಯಮಂತ್ರಿಗಳ ಧರ್ಮಪತ್ನಿ ಕನ್ನಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಮಹಾನಗರ ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಗಜಪಡೆಯ ಗಾಂಭೀರ್ಯ, ದೇವತೆಗಳ ದರ್ಶನ, ಜಾನಪದ ಕಲೆಯ ವೈಭವ ಹಾಗೂ ಜನರ ಉತ್ಸಾಹದ ಸಮ್ಮಿಲನಕ್ಕೆ ಸಾಕ್ಷಿಯಾದ ತುಮಕೂರು ದಸರಾ ಜಂಬೂಸವಾರಿ, ನಗರದ ಸಾಂಸ್ಕೃತಿಕ ಸಂಭ್ರಮಕ್ಕೆ ಹೊಸ ಮೆರುಗು ನೀಡಿತು.





