ತುಮಕೂರು | ಕನ್ನಾಳೆ ಬಂಧನದ ಬಳಿಕವೂ ಮುಂದುವರೆದ ಸಿಂಡಿಕೇಟ್ ಸದಸ್ಯತ್ವ: ರಾಜಭವನದ ನಿರ್ಧಾರಕ್ಕೆ ಕುತೂಹಲ

Date:

ಕನ್ನಾಳೆ ಪ್ರಕರಣದ ತನಿಖೆ ಕೇವಲ ಒಬ್ಬ ವ್ಯಕ್ತಿಯ ಬಂಧನಕ್ಕೆ ಸೀಮಿತವಾಗುತ್ತದೆಯೇ? ಅಥವಾ ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ, ಟೆಂಡರ್ ಹಾಗೂ ಹಣಕಾಸು ವ್ಯವಹಾರಗಳ ಒಳಜಾಲವನ್ನೂ ಬಯಲಿಗೆಳೆಯುತ್ತದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಸಿಬಿಐ, ಸಿಐಡಿ ತನಿಖೆಯ ದಿಕ್ಕು ಮತ್ತು ರಾಜಭವನದ ನಿರ್ಧಾರದಿಂದ ಈ ಪ್ರಶ್ನೆಗಳಿಗೆ ಉತ್ತರ ದೊರೆಯುವ ಸಾಧ್ಯತೆ ಇದೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನಕ್ಕೊಳಗಾಗಿದ್ದಾರೆ. ಆದರೂ ಮೂರು ದಿನ ಕಳೆದರೂ ಅವರ ಸದಸ್ಯತ್ವದ ಕುರಿತು ರಾಜಭವನದಿಂದ ಯಾವುದೇ ಸ್ಪಷ್ಟ ಕ್ರಮ ಹೊರಬಾರದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -

2025ರ ಆಗಸ್ಟ್‌ನಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಬಸವರಾಜ ಕನ್ನಾಳೆ, ಬಂಧನಕ್ಕೊಳಗಾದ ಬಳಿಕವೂ ಅಧಿಕೃತವಾಗಿ ಸಿಂಡಿಕೇಟ್ ಸದಸ್ಯ ಸ್ಥಾನದಲ್ಲೇ ಮುಂದುವರಿದಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬಂಧನದ ಮಾಹಿತಿ ರಾಜಭವನದ ಗಮನಕ್ಕೆ ಬಂದಿದೆಯೇ? ಬಂದಿದ್ದರೆ ಮುಂದಿನ ಕ್ರಮವೇನು? ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಕನ್ನಾಳೆ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ನಂತರ ವಿಶ್ವವಿದ್ಯಾಲಯದ ಖರೀದಿ ಮತ್ತು ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಮುಖ ಉಪಸಮಿತಿಯಲ್ಲೂ ಸ್ಥಾನ ಪಡೆದಿದ್ದರು ಎನ್ನಲಾಗಿದೆ. ಇಂತಹ ಸಮಿತಿಗಳು ವಿಶ್ವವಿದ್ಯಾಲಯದ ಹಣಕಾಸು ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ, ಕನ್ನಾಳೆ ಸದಸ್ಯರಾಗಿದ್ದ ಅವಧಿಯಲ್ಲಿ ಕೈಗೊಂಡ ಖರೀದಿ, ಟೆಂಡರ್, ಕಾಮಗಾರಿ ಹಾಗೂ ಪಾವತಿ ಸಂಬಂಧಿತ ನಿರ್ಧಾರಗಳತ್ತ ತನಿಖಾ ಸಂಸ್ಥೆಗಳ ಗಮನ ಹರಿದಿದೆ ಎನ್ನಲಾಗಿದೆ. ಯಾವ ಟೆಂಡರ್‌ಗೆ ಯಾರಿಗೆ ಅನುಕೂಲ? ಯಾವ ಕಾಮಗಾರಿಗೆ ಎಷ್ಟು ಮೊತ್ತ? ಯಾರ ಶಿಫಾರಸಿನ ಮೇರೆಗೆ ನಿರ್ಧಾರ? ಎನ್ನುವಂತಹ ಪ್ರಶ್ನೆಗಳಿಗೆ ದಾಖಲೆಗಳೇ ಉತ್ತರ ನೀಡಬೇಕಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೆ ಸಿಐಡಿ, ಸಿಬಿಐ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ತುಮಕೂರು ವಿಶ್ವವಿದ್ಯಾಲಯದಲ್ಲಿನ ಕನ್ನಾಳೆಯ ಸಂಪರ್ಕ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. ವಿಶ್ವವಿದ್ಯಾಲಯದ ಆಡಳಿತದಲ್ಲಿ ಕುಲಪತಿ, ಕುಲಸಚಿವರು ಹಾಗೂ ಹಣಕಾಸು ಅಧಿಕಾರಿ ಹುದ್ದೆಗಳಲ್ಲಿ ಪ್ರಭಾರ ವ್ಯವಸ್ಥೆ ಜಾರಿಯಲ್ಲಿರುವುದರಿಂದ ತನಿಖಾಧಿಕಾರಿಗಳಿಗೆ ಮಾಹಿತಿ ಒದಗಿಸುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.

ಅಧಿಕಾರಿಗಳು, “ನಾವು ಪ್ರಭಾರ ಅಧಿಕಾರದಲ್ಲಿದ್ದೇವೆ, ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡಲು ಸಮಯ ಬೇಕು” ಎಂಬ ಕಾರಣವನ್ನು ಮುಂದಿಟ್ಟಿದ್ದರು ಎನ್ನಲಾಗಿದ್ದು, ತನಿಖಾಧಿಕಾರಿಗಳು ಅಗತ್ಯ ಮಾಹಿತಿಗಾಗಿ ಒತ್ತಡ ಹೇರಿದ ಬಳಿಕ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ ದಾಖಲೆಗಳನ್ನು ಪಡೆದುಕೊಂಡು ತೆರಳಿದ್ದಾರೆ ಎಂಬುದು ಮೂಲಗಳಿಂದ ಬಹಿರಂಗಗೊಂಡಿದೆ.

ತನಿಖೆಗೆ ಸಹಕಾರ ನೀಡುವಲ್ಲಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆಯೂ ವಿಶ್ವವಿದ್ಯಾಲಯದ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಹಲವು ಹಿರಿಯ ಪ್ರಾಧ್ಯಾಪಕರೊಂದಿಗೆ ಕನ್ನಾಳೆ ಸಂಪರ್ಕದಲ್ಲಿದ್ದ ಎನ್ನುವ ಚರ್ಚೆಯೂ ಇದೆ. ರಾಜಭವನ ಸೇರಿದಂತೆ ಪ್ರಭಾವಿ ವಲಯಗಳಲ್ಲಿ ತಮ್ಮ ಸಂಪರ್ಕವಿದೆ ಎಂದು ಹೇಳಿಕೊಂಡು ಕುಲಪತಿ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದರು ಎಂಬ ಆರೋಪಗಳು ಕೇಳಿಬರುತ್ತಿವೆ. ಅನಂತಪುರದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಯಲ್ಲೂ ಪ್ರಭಾವ ಬೀರುವುದಾಗಿ ಹೇಳಿ ಹಣಕಾಸಿನ ವ್ಯವಹಾರ ನಡೆಸಿದ್ದರು ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಈ ಆರೋಪಗಳು ಇನ್ನೂ ತನಿಖಾ ಹಂತದಲ್ಲಿದ್ದು, ಯಾವುದೇ ಆರೋಪವೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.

ತನಿಖಾಧಿಕಾರಿಗಳು ಕನ್ನಾಳೆಯ ಇತ್ತೀಚಿನ ದೂರವಾಣಿ ಸಂಪರ್ಕಗಳ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ಇತರ ವ್ಯಕ್ತಿಗಳ ಬಗ್ಗೆಯೂ ತನಿಖಾ ಸಂಸ್ಥೆಗಳು ಮಾಹಿತಿ ಸಂಗ್ರಹಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಯಾರೊಂದಿಗಾದರೂ ದೂರವಾಣಿ ಸಂಪರ್ಕ ಹೊಂದಿರುವುದನ್ನು ಮಾತ್ರ ಆಧರಿಸಿ ಅವರ ವಿರುದ್ಧ ಆರೋಪ ಮಾಡಲಾಗದು. ಆ ಸಂಪರ್ಕಕ್ಕೂ ಹಣಕಾಸು ವ್ಯವಹಾರ ಅಥವಾ ನೇಮಕಾತಿ ಪ್ರಕ್ರಿಯೆಯಲ್ಲಿನ ಪ್ರಭಾವಕ್ಕೂ ಸಂಬಂಧವಿದೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ತುಮಕೂರು ವಿಶ್ವವಿದ್ಯಾಲಯದ ಕಾಮಗಾರಿ ಮತ್ತು ಟೆಂಡರ್ ಪ್ರಕ್ರಿಯೆಗಳಲ್ಲಿ ಕನ್ನಾಳೆ ಪ್ರಭಾವ ಬೀರಿದ್ದರು ಎಂಬ ಆರೋಪಗಳೂ ಕೇಳಿಬರುತ್ತಿವೆ. ತಮಗೆ ಬೇಕಾದವರಿಗೆ ಟೆಂಡರ್‌ಗಳನ್ನು ಕೊಡಿಸುವಲ್ಲಿ ಮಧ್ಯಸ್ಥಿಕೆ ವಹಿಸಿದ್ದರು ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಕಾಮಗಾರಿಗಳನ್ನು ತುಂಡುಗುತ್ತಿಗೆ ಮೂಲಕ ಕೊಡಿಸುವ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದರು ಎಂಬ ದೂರುಗಳೂ ತನಿಖಾಧಿಕಾರಿಗಳ ಗಮನಕ್ಕೆ ಬಂದಿವೆ ಎನ್ನಲಾಗಿದೆ. ಇದರ ಸತ್ಯಾಸತ್ಯತೆ ತಿಳಿಯಲು ಟೆಂಡರ್ ದಾಖಲೆಗಳು, ತಾಂತ್ರಿಕ ಮತ್ತು ಹಣಕಾಸು ಬಿಡ್‌ಗಳು, ಕಾರ್ಯಾದೇಶಗಳು, ಪಾವತಿ ದಾಖಲೆಗಳು ಹಾಗೂ ಸಂಬಂಧಪಟ್ಟ ಸಮಿತಿಗಳ ಸಭಾ ನಡಾವಳಿಗಳನ್ನು ಪರಿಶೀಲಿಸುವುದು ನಿರ್ಣಾಯಕವಾಗಲಿದೆ.

ಬಸವರಾಜ ಕನ್ನಾಳೆಯ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಮುಖಂಡರೊಂದಿಗೆ ಇರುವ ಛಾಯಾಚಿತ್ರಗಳು ಕಾಣಿಸಿಕೊಂಡಿದ್ದವು ಎನ್ನಲಾಗುತ್ತಿದೆ. ಈ ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡು ಕೆಪಿಎಸ್‌ಸಿ, ರಾಜಭವನ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿಸಿಕೊಡಬಹುದು ಎಂದು ಕೆಲವರನ್ನು ನಂಬಿಸುತ್ತಿದ್ದರು ಎಂಬ ಆರೋಪಗಳಿವೆ. ಆದರೆ, ರಾಜಕೀಯ ನಾಯಕರೊಂದಿಗೆ ಫೋಟೋ ಹೊಂದಿರುವುದೇ ಅಕ್ರಮದ ಸಾಕ್ಷಿಯಾಗುವುದಿಲ್ಲ. ಆ ಸಂಪರ್ಕವನ್ನು ಬಳಸಿಕೊಂಡು ಯಾರಿಗಾದರೂ ಅಧಿಕಾರದ ದುರುಪಯೋಗವಾಗಿದೆಯೇ? ಹಣಕಾಸಿನ ವ್ಯವಹಾರ ನಡೆದಿದೆಯೇ? ನೇಮಕಾತಿ ಅಥವಾ ಟೆಂಡರ್ ಪ್ರಕ್ರಿಯೆ ಪ್ರಭಾವಿತವಾಗಿದೆಯೇ? ಎಂಬುದೇ ತನಿಖೆಯ ಪ್ರಮುಖ ಅಂಶವಾಗಬೇಕಿದೆ.

ಬಸವರಾಜ ಕನ್ನಾಳೆ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಆರಂಭಿಸಿರುವ ಬೆನ್ನಲ್ಲೇ, ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ಅವರ ಮುಂದುವರಿಕೆ ಕುರಿತು ರಾಜಭವನದ ನಿರ್ಧಾರವೂ ಕುತೂಹಲ ಮೂಡಿಸಿದೆ. ಬಂಧನದಂತಹ ಗಂಭೀರ ಬೆಳವಣಿಗೆಯ ನಂತರ ಸದಸ್ಯತ್ವದ ಬಗ್ಗೆ ಯಾವುದೇ ಮಧ್ಯಂತರ ಕ್ರಮ ಅಗತ್ಯವಿದೆಯೇ? ಸಿಂಡಿಕೇಟ್ ಸದಸ್ಯರಾಗಿ ಅವರು ಭಾಗವಹಿಸಿದ್ದ ನಿರ್ಧಾರಗಳನ್ನು ಮರುಪರಿಶೀಲಿಸುವ ಅಗತ್ಯವಿದೆಯೇ? ಅವರು ಸದಸ್ಯರಾಗಿದ್ದ ಸಮಿತಿಗಳ ನಿರ್ಧಾರಗಳ ಸ್ವತಂತ್ರ ಪರಿಶೀಲನೆ ನಡೆಯಲಿದೆಯೇ? ಎಂಬ ಪ್ರಶ್ನೆಗಳು ಎದುರಾಗಿವೆ.

ಈ ಸುದ್ದಿ ಓದಿದ್ದೀರಾ? ಕೆಪಿಎಸ್‌ಸಿ ಬಳಿಕ ಆರ್‌ಡಿಪಿಆರ್ ನೇಮಕಾತಿ ಅಕ್ರಮ ಆರೋಪ; ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಈ ಪ್ರಕರಣದ ಅಂತಿಮ ಸತ್ಯ ತನಿಖೆಯಿಂದಲೇ ಹೊರಬರಬೇಕು. ಆದರೆ ಪ್ರಕರಣವು ತುಮಕೂರು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಒಬ್ಬ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯನ ವಿರುದ್ಧ ನೇಮಕಾತಿ ಅಕ್ರಮದ ಗಂಭೀರ ಆರೋಪ ಕೇಳಿಬಂದಿರುವಾಗ, ಅವರು ವಿಶ್ವವಿದ್ಯಾಲಯದಲ್ಲಿ ಯಾವ್ಯಾವ ನಿರ್ಧಾರಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಅಗತ್ಯ. ಕನ್ನಾಳೆ ಪ್ರಕರಣದ ತನಿಖೆ ಕೇವಲ ಒಬ್ಬ ವ್ಯಕ್ತಿಯ ಬಂಧನಕ್ಕೆ ಸೀಮಿತವಾಗುತ್ತದೆಯೇ? ಅಥವಾ ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ, ಟೆಂಡರ್ ಹಾಗೂ ಹಣಕಾಸು ವ್ಯವಹಾರಗಳ ಒಳಜಾಲವನ್ನೂ ಬಯಲಿಗೆಳೆಯುತ್ತದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಸಿಬಿಐ, ಸಿಐಡಿ ತನಿಖೆಯ ದಿಕ್ಕು ಮತ್ತು ರಾಜಭವನದ ನಿರ್ಧಾರದಿಂದ ಈ ಪ್ರಶ್ನೆಗಳಿಗೆ ಉತ್ತರ ದೊರೆಯುವ ಸಾಧ್ಯತೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ, ನಿವೇಶನಕ್ಕಾಗಿ ಸಮತಾ ಸೈನಿಕ ದಳ ಆಗ್ರಹ

ಶಹಾಪುರ ತಾಲೂಕಿನ ವಿವಿಧ ಗ್ರಾಮಗಳ ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ, ನಿವೇಶನ...

ವಿಜಯಪುರ | 22ನೇ ಶರಣ ತತ್ವ ಕಮ್ಮಟಕ್ಕೆ ಸಚಿವ ಎಂ.ಬಿ ಪಾಟೀಲರಿಗೆ ಆಹ್ವಾನ

ವಿಜಯಪುರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ...

ಬೀಳಗಿ | ಛಾಯಾಗ್ರಾಹಕರಿಗಾಗಿ ಆಕಾಡೆಮಿ ಸ್ಥಾಪಿಸಲು ವಿಠ್ಠಲ ಹಿರೇಮಠ ಆಗ್ರಹ

ಛಾಯಾಗ್ರಾಹಕರ ವೃತ್ತಿ ಭದ್ರತೆ, ಕುಟುಂಬದ ಕಲ್ಯಾಣ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಲು...

ಅಂದು ಬೆಂಬಲ, ಇಂದು ಪಶ್ಚಾತಾಪ: 2023ರ ಚುನಾವಣಾ ಆಯುಕ್ತರ ಕಾಯ್ದೆಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆ ನಡೆದಿದೆ. ಮಾಜಿ...