ರಂಗಭೂಮಿ ಸದಾ ಚಲನಶೀಲ ಗುಣ ಹೊಂದಿರುತ್ತದೆ ಎಂದು ತುಮಕೂರಿನ ಕಸಾಪ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.
ತುಮಕೂರಿನ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಕನ್ನಡ ಕಲಾವಿದರ ಸಂಘ, ಶ್ರೀಗುರು ವಾದ್ಯವೃಂದ ದಾವಣಗೆರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಆಶ್ರಯದಲ್ಲಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ರಂಗಜ್ಯೋತಿ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ಧರ್ಮದೇವತೆ ನಾಟಕ ಉದ್ಘಾಟಿಸಿ ಮಾತನಾಡಿದರು.
“ಕೇವಲ ಮನರಂಜನೆಗಷ್ಟೇ ಅಲ್ಲದೇ ನಮ್ಮ ಬೌದ್ಧಿಕತೆಯನ್ನು ರಂಗಭೂಮಿ ವಿಕಾಸಗೊಳಿಸುತ್ತದೆ. ನಾಟಕ, ಬದುಕು ಎರಡೂ ಒಂದೆಯಾಗಿದೆ. ನಾಟಕಗಳು ಬದುಕಿನ ಪ್ರತಿಬಿಂಬವಾಗಿ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ವೃತ್ತಿ ರಂಗಭೂಮಿಯಂತೂ ಸಮಾಜದಲ್ಲಿ ನಡೆಯುವ ಹುಳುಕನ್ನು ತೋರಿಸುವ ಕನ್ನಡಿಯಾಗಿದೆ” ಎಂದು ತಿಳಿಸಿದರು.
“ಬದಲಾದ ಕಾಲಘಟ್ಟದಲ್ಲಿ ವೃತ್ತಿರಂಗಭೂಮಿ ನಾಟಕಗಳ ಸ್ವರೂಪ, ವೃತ್ತಿಪರತೆ ಬದಲಾಗಿದೆ. ಯಾವುದೇ ಕಲೆ ವಾಣಿಜ್ಯೀಕರಣಗೊಂಡಾಗ ಸೃಜನಶೀಲತೆ ಮಾಯವಾಗುತ್ತದೆ. ಕಂಪನಿ ನಾಟಕಗಳು ಬಹುಕಾಲ ರಸಿಕರನ್ನು ಆಕರ್ಷಿಸುತ್ತಾ ಇದ್ದದ್ದು ರಂಗೀತೆಗಳಿಂದಲೇ” ಎಂದು ವ್ಯಾಖ್ಯಾನಿಸಿದರು.
“ರಂಗಕಲೆ ಭಾಷೆ ಹಾಗೂ ಸಂಸ್ಕೃತಿಯನ್ನು ಮೀರಿದ ಕಲೆಯಾಗಿದೆ. ವೃತ್ತಿರಂಗಭೂಮಿಯಲ್ಲಿ ಈಗಲೂ ಜನರಿಗೆ ಮನರಂಜನೆ, ಶಿಕ್ಷಣ ಹಾಗೂ ಸ್ಪೂರ್ತಿ ನೀಡುತ್ತಿರುವುದು ಅಭಿನಂದನೀಯ. ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ವಿಶ್ವದ ಬಹಳಷ್ಟು ಕಡೆ ದಾರ್ಶನಿಕರು ಹಾಗೂ ಮುತ್ಸದಿಗಳು ರಂಗಭೂಮಿಯಿಂದ ಪ್ರಭಾವಿತರಾಗಿದ್ದಾರೆ” ಎಂದು ತಿಳಿಸಿದರು.
ಝೆನ್ ಟೀಮ್ ಮುಖ್ಯಸ್ಥ ಹಾಗೂ ರಂಗ ಸಂಘಟಕ ಉಗಮ ಶ್ರೀನಿವಾಸ್ ಮಾತನಾಡಿ, “ತತ್ವಪದ, ಪೌರಾಣಿಕ ನಾಟಕಗಳು ಹಾಗೂ ಬುಡುಕಟ್ಟು ಸಂಸ್ಕೃತಿಯನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ತುಮಕೂರಿನಲ್ಲಿ ಸಾಂಸ್ಕೃತಿಕ ಮನಸ್ಸುಗಳನ್ನು ಬೆಸೆಯಲು ಬಯಲುಸೀಮೆ ರಂಗಾಯಣ ಸ್ಥಾಪಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.
“ಕರಾವಳಿಯಲ್ಲಿ ಯಕ್ಷಗಾನ ಹೇಗೆ ಜನಪ್ರಿಯವೋ ತುಮಕೂರು ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳೂ ಜನಪ್ರಿಯ. ಈ ಹಿನ್ನೆಲೆಯಲ್ಲಿ ರಂಗಕೊಂಡಿಯನ್ನು ವಿಸ್ತರಿಸಲು ತುಮಕೂರಿನಲ್ಲಿ ರಂಗಾಯಣ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ಕರ್ನಾಟಕದಲ್ಲಿ ಈಗ ಬಹು ಚರ್ಚಿತವಾಗುತ್ತಿರುವ ಪರ್ಯಾಯ ನಾಟಕಗಳು ಅಥವಾ ಆಧುನಿಕ ನಾಟಕಗಳ ಮೂಲ ಕಾರಣವೇ ಗುಬ್ಬಿವೀರಣ್ಣ ಕಂಪನಿ” ಎಂದು ಬಣ್ಣಿಸಿದರು.
“ಗುಬ್ಬಿ ಕಂಪನಿ ಆಧುನಿಕ ಹಾಗೂ ಪರ್ಯಾಯ ನಾಟಕಕ್ಕೆ ನಾಂದಿ ಹಾಡಿತು. ರಂಗಭೂಮಿ ಮೂಲಕ ಮನುಷ್ಯ ಸಂಬಂಧಗಳನ್ನು ಕಟ್ಟಬೇಕು. ಯಾವುದೇ ಕಲೆ ಸಕ್ರಿಯವಾಗಿದ್ದರೆ ಅಲ್ಲೆಲ್ಲಾ ಚಲನಶೀಲ ಮನಸ್ಸು ಜಾಗೃತಿಯಾಗಿರುತ್ತದೆ. ತುಮಕೂರು ನಗರದಲ್ಲಿ ಎಲ್ಲ 35 ವಾರ್ಡ್‌ಗಳಲ್ಲಿ ತಲಾ ಒಂದೊಂದರಂತೆ ಬಯಲು ರಂಗಮಂದಿರವನ್ನು ನಿರ್ಮಾಣ ಮಾಡಬೇಕು. ಈ ಮೂಲಕ ಪ್ರತಿ ವಾರ್ಡ್‌ಗಳಲ್ಲೂ ರಂಗಭೂಮಿ ಸಕ್ರಿಯಗೊಳಿಸಬೇಕು” ಎಂದು ತಿಳಿಸಿದರು.
ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣದಾಸ್ ಮಾತನಾಡಿ, “ವೃತ್ತಿ ರಂಗಭೂಮಿ ಬಗ್ಗೆ ತಳಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ವಿರಳವಾಗಿದೆ. ಹೀಗಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರ ಬಳಿ ವೃತ್ತಿ ರಂಗಭೂಮಿ ಬೆಳವಣಿಗೆ ಬಗ್ಗೆ ಬೆಳಕುವ ಚೆಲ್ಲುವ ಸಂಶೋಧನಾ ಪುಸ್ತಕಗಳು ಹೊರಬರಬೇಕು. ಹೀಗೆ ಮಾಡಿದರೆ ವೃತ್ತಿ ರಂಗಭೂಮಿಯ ಬಗ್ಗೆ ಮಹತ್ವದ ಕಾಣಿಕೆ ನೀಡಿದಂತಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಲ್ಲ ಶಾಸನಗಳ ತಾಯಿಯೇ ನಮ್ಮ ಸಂವಿಧಾನ: ಹನುಮಂತ ಅನಂತರಾವ್ ಸಾತ್ವಿಕ
ಕನ್ನಡ ಕಲಾವಿದರ ಸಂಘದ ಗೌರವ ಅಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ ಮಾತನಾಡಿ, “ನಾಟಕಗಳನ್ನು ಪ್ರೇಕ್ಷಕರಿಗೆ ತೋರಿಸಿ ಅವರಿಗೆ ಮನರಂಜನೆ, ಬೋಧನೆ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ನಾಟಕಗಳನ್ನು ಆಯೋಜಿಸುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ” ಎಂದು ತಿಳಿಸಿದರು.
ಇದೇ ವೇಳೆ ವಸ್ತ್ರವಿನ್ಯಾಸಕಿ ಪುಷ್ಪಲತಾ ಹಾಗೂ ಶಿವಕುಮಾರ್ ಅವರನ್ನು ಸನ್ಮಾನಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ಚಿಂದೋಡಿ ಶಂಭುಲಿಂಗಪ್ಪ ನಿರ್ದೇಶಿಸಿರುವ ಧರ್ಮ ದೇವತೆ ನಾಟಕ ಪ್ರದರ್ಶನಗೊಂಡಿತು.