ಹೇಮಾವತಿ ನದಿ ತುಂಬಿರುವ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕಿಗೆ ಹರಿಯುತ್ತಿರುವ ನೀರಿನ ದೆಸೆ ಹಾಗೂ ವರುಣನ ಕೃಪೆಯಿಂದಾಗಿ ಬಹುಪಾಲು ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ.
ತುರುವೇಕೆರೆ ತಾಲೂಕಿನ ಮೂಲಕ ತುಮಕೂರು ಶಾಖಾ ನಾಲೆ ಮತ್ತು ನಾಗಮಂಗಲ ಶಾಖಾ ನಾಲೆಗಳ ಮೂಲಕ ಹೇಮಾವತಿ ನೀರು ಹರಿಯುತ್ತಿವೆ. ನಾಲಾ ನೀರಿನ ವ್ಯಾಪ್ತಿಯ ಗ್ರಾಮಗಳಲ್ಲಿನ 21 ಕೆರೆಗಳ ಪೈಕಿ 20 ಕೆರೆಗಳು ಹೇಮಾವತಿ ನಾಲಾ ನೀರು ಮತ್ತು ಮಳೆ ನೀರಿಗೆ ತುಂಬಿ ಹರಿಯುತ್ತಿದೆ. ಹೆಚ್ಚುವರಿಯಾಗಿ ಹರಿಯುತ್ತಿರುವ ನೀರು ಶಿಂಷಾ ನದಿಗೆ ಸೇರುತ್ತಿವೆ.

ಕಳೆದ ವಾರ ತುರುವೇಕೆರೆ ಕೆರೆ, ಬೊಮ್ಮೇನಹಳ್ಳಿ, ಬಲಮಾದಿಹಳ್ಳಿ, ಕುಣಿಕೇನಹಳ್ಳಿ, ಪುರ ಚೆಂಡೂರು, ಕೊಂಡಜ್ಜಿ, ಹುಳಿಸಂದ್ರ, ಅಮ್ಮಸಂದ್ರ, ಅಕ್ಕಳಸಂದ್ರ, ಡಿ.ಶೆಟ್ಟಿಹಳ್ಳಿ, ಸಂಪಿಗೆ, ವೀರಸಾಗರ, ಸಂಪಿಗೆ ಹೊಸಹಳ್ಳಿ, ತಂಡಗ, ಕೋಳಾಲ, ಗೋಣಿತುಮಕೂರು, ಅರಿಶಿಣದಹಳ್ಳಿ ಅಣೆ, ಬಾಳೆಮಡು ಅಣೆ, ಮಲ್ಲಾಘಟ್ಟ ಕೆರೆ ಮತ್ತು ಸಾರಿಗೆಹಳ್ಳಿ ಕೆರೆಗಳು ತುಂಬಿವೆ. ಈಗ ಚಿಮ್ಮನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ ಎಂದು ಹೇಮಾವತಿ ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.
ಮಲ್ಲಾಘಟ್ಟ ಕೆರೆ ಮತ್ತು ಸಾರಿಗೆಹಳ್ಳಿ ಕೆರೆಗಳು ಕಳೆದ ಮೂರ್ನಾಲ್ಕು ದಿನಗಳಿಂದ ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಮಳೆ ಪ್ರಮಾಣ ಹೆಚ್ಚಾದರೆ ರಸ್ತೆ ಮೇಲೆ ಹರಿಯುವ ನೀರಿನ ಪ್ರಮಾಣವೂ ಹೆಚ್ಚಾಗಿ ಈ ಭಾಗದ ಗ್ರಾಮಗಳಿಗೆ ತೆರಳುವ ವಾಹನಗಳು, ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ರೈತರಿಗೆ, ಬಸ್ ಸಂಚಾರಕ್ಕೆ ಅಡಚಣೆಯಾಗಲಿದೆ. ಈ ಪರಿಸ್ಥಿತಿ ಪ್ರತಿ ವರ್ಷವೂ ಇರಲಿದೆ. ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳು ಕೆರೆ ಕೋಡಿ ಹರಿಯುವ ರಸ್ತೆಯ ಮೇಲೆ ಸೇತುವೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮಾಚೇನಹಳ್ಳಿ ಮಲ್ಲಿಕಾರ್ಜುನ್ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ-ಎಸ್. ನಾಗಭೂಷಣ್
