ಕೇಂದ್ರ ಸರ್ಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ. ರೈತರನ್ನು ಸಂಕಷ್ಟಕ್ಕೆ ದೂಡಿದೆ, ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳ ತಡೆಗಟ್ಟುವಂತೆ ಆಗ್ರಹಿಸಿ ಜ.29 ರಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಎ.ಗೋವಿಂದರಾಜ್ ತಿಳಿಸಿದರು.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ಕೃಷಿ ಮಾಡುವ ರೈತರೂ ಇಂದಿಗೂ ಸಾಲದ ಸುಳಿಯಲ್ಲಿ ಸಿಲುಕಿ ಸಾಯುವಂತಹ ಪರಿಸ್ಥಿತಿ ಇದೆ. ದೇಶದಲ್ಲಿ 36 ನಿಮಿಷಕೊಬ್ಬ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ 1 ಲಕ್ಷದ 46 ಸಾವಿರ ರೈತರು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ಇದೆ. ಈ ಹಿಂದೆ ಕೃಷಿ ಕ್ಷೇತ್ರವನ್ನು ಸಧೃಡಗೊಳಿಸುವ ದೃಷ್ಟಿಯಿಂದ ನಬಾರ್ಡ್ ಬ್ಯಾಂಕ್ ಸಾಲದ ಮೂಲಕ ಆರ್ಥಿಕ ನೆರವು ನೀಡುತ್ತಿತ್ತು. ಆದರೆ ನಬಾರ್ಡ್ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತ ಗೊಳಿಸಿದೆ. ಕೃಷಿ ಕ್ಷೇತ್ರದ ರೈತರಿಗೆ ನೀಡುತ್ತಿರುವ ಸಹಕಾರ ಬ್ಯಾಂಕ್ ಗಳು ನೀಡುವ ಸಾಲದ ಮೊತ್ತ ಕಡಿಮೆಯಾಗುತ್ತಿದೆ. ನಬಾರ್ಡ್ ಕಳೆದ ವರ್ಷ ರಾಜ್ಯಕ್ಕೆ 5600 ಕೋಟಿ ನೀಡಿತ್ತು, ಈ ವರ್ಷ ಕೇವಲ 2340 ಕೋಟಿ ನೀಡಿದೆ. ಸಹಕಾರಿ ಬ್ಯಾಂಕ್ ಗಳಲ್ಲಿ 5 ಲಕ್ಷದವರೆಗೂ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ಪಡೆಯುವ ರೈತರಿಗೆ ಅನ್ಯಾಯವಾಗಿದೆ. ಹೆಚ್ಚು ಬಡ್ಡಿ ತೆತ್ತು ವಾಣಿಜ್ಯ ಬ್ಯಾಂಕ್ ಗಳ ಮೊರೆ ಹೋಗಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ರಾಜ್ಯಕ್ಕೆ ನೀಡುತ್ತಿದ್ದ ಸಾಲದ ಮೊತ್ತ ಶೇ 58 ತಗ್ಗಿದೆ. ಕೃಷಿ ವ್ಯವಸ್ಥೆ ನಾಶವಾಗುವ ಆತಂಕ ಎದುರಾಗಿದೆ. ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳ ಹೆಚ್ಚಾಗಿದೆ. ಮಹಿಳೆಯರು ಮತ್ತು ದುಡಿಯುವ ಶ್ರಮಿಕ ವರ್ಗದ ಜನರು ಬಡ್ಡಿ ಕಟ್ಟಲಾರದೇ ಸಂಕಷ್ಟಗೀಡಾಗಿದ್ದಾರೆ. ಎಷ್ಟೋ ಮಹಿಳೆಯರು ಮೈಕ್ರೋ ಪೈನಾನ್ಸ್ನ ಸಿಬ್ಬಂದಿಗಳ ಕಿರುಕುಳದಿಂದ ಸಾಲದ ಕಂತು ಕಟ್ಟಲಿಕ್ಕೆ ಆಗದೆ ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಬೇಕು. ಜನರಿಗೆ ನೀಡುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ಗುಬ್ಬಿ ತಾಲೂಕು ರೈತ ಮುಖಂಡ ಲೋಕೇಶ್, ರೈತ ಸಂಘದ ಮುಖಂಡರಾದ ದೇವರಾಜು, ರಹಮತ್, ಕೊಟ್ಟೂರನಕೊಟ್ಟಿಗೆ ಶ್ರೀನಿವಾಸ್, ರವಿಕೀರ್ತಿ, ಶೇಖರ್, ಗೋವಿಂದರಾಜು, ಜಯರಾಮ್, ನಾಗಣ್ಣ, ಶಿವಣ್ಣ, ಲೋಕೇಶ್, ವಸಂತಪ್ಪ, ರಾಜಶೇಖರ್ ಸೇರಿದಂತೆ ಇತರರು ಇದ್ದರು.