ಕೊಪ್ಪಳದ ಗಂಗಾವತಿ ನಗರದಲ್ಲಿ ಇತ್ತೀಚೆಗೆ ಮಧ್ಯರಾತ್ರಿ ಅಂಧ ಮುಸ್ಲಿಂ ವೃದ್ಧನೋರ್ವನ ಗಡ್ಡಕ್ಕೆ ಬೆಂಕಿ ಹಚ್ಚಿ, ಜೈಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಕೊನೆಗೂ ಪತ್ತೆ ಹಚ್ಚಿರುವ ಪೊಲೀಸರು, ಸಾಫ್ಟ್‌ವೇರ್ ಎಂಜಿನಿಯರ್ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.
ಗಂಗಾವತಿಯ ಕುವೆಂಪು ಬಡಾವಣೆಯ ಸಾಫ್ಟ್‌ವೇರ್ ಎಂಜಿನಿಯರ್ ಸಾಗರ ಶೆಟ್ಟಿ ಕಲ್ಕಿ(24) ಹಾಗೂ ಕಲ್ಲಪ್ಪನ ಕ್ಯಾಂಪ್‌ನ ನಿವಾಸಿ ನರಸಪ್ಪ(25) ಎಂಬುವವರು ಬಂಧಿತ ಆರೋಪಿಗಳು.

‘ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಮೆಹಬೂಬ್ ನಗರದ ಅಂಧ ವ್ಯಕ್ತಿಯಾಗಿರುವ ಹುಸೇನ್ ಸಾಬ್(65) ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ಸಂಬಂಧ ಪೊಲೀಸರು ಅಪರಿಚಿತರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ವೃದ್ಧನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಕೊನೆಗೂ ಪತ್ತೆ ಹಚ್ಚಿ, ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ‘ಇದುವರೆಗೆ ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗಿದೆ. ವೃದ್ದನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹೇರಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಆಧಾರ ಲಭಿಸಿಲ್ಲ. ಹುಸೇನ್‌ಸಾಬ್ ಗಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು ಎನ್ನುವುದಕ್ಕೂ ದಾಖಲೆ ಲಭಿಸಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ‘ಜೈ ಶ್ರೀರಾಮ್’ ಕೂಗುವಂತೆ ಒತ್ತಾಯಿಸಿ ಅಂಧ ಮುಸ್ಲಿಂ ವೃದ್ಧನ ಗಡ್ಡಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು
‘ಪಾನಮತ್ತರಾಗಿದ್ದ ಆರೋಪಿಗಳಿಗೆ ವೃದ್ದ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದ. ಅವರು ಬೈಕ್ ಮೇಲೆ ಕೂಡಿಸಿಕೊಂಡು ಹೋಗುವಾಗ ಮಧ್ಯದಲ್ಲಿ ಕುಳಿತಿದ್ದ ನರಸಪ್ಪ ವೃದ್ದನ ಟೋಪಿ ಜಗ್ಗಿದ್ದಾನೆ. ಇದಕ್ಕೆ ವೃದ್ದ ಕೋಪಗೊಂಡಿದ್ದರಿಂದ ಬುದ್ದಿ ಕಲಿಸಬೇಕು ಎಂದು ಯುವಕರು ರೈಲ್ವೆ ಸೇತುವೆ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಅದನ್ನು ವಿಚಾರಣೆಯ ವೇಳೆ ಆರೋಪಿಗಳು ಮಾಹಿತಿ ನೀಡಿದ್ದಾರೆ’ ಎಂದು ಎಸ್‌ಪಿ ತಿಳಿಸಿದ್ದಾರೆ.
‘ಆರೋಪಿಗಳ ಪೈಕಿ ಸಾಗರ ಶೆಟ್ಟಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಇನ್ನೋರ್ವ ಆರೋಪಿ ಕೃಷಿ ಕಾಯಕ ಮಾಡಿಕೊಂಡಿದ್ದಾನೆ. ಟೋಪಿ ಜಗ್ಗಿದ್ದಕ್ಕೆ ವೃದ್ಧ ಕೋಪಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಸೇರಿಕೊಂಡು ರೈಲ್ವೆ ಬ್ರಿಡ್ಜ್ ಕೆಳಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಲ್ಲದೆ, ಹುಸೇನ್ ಸಾಬ್ ಬಳಿಯಲ್ಲಿದ್ದ 250 ರೂ.ಗಳನ್ನು ಕಸಿದುಕೊಂಡು, ಅಲ್ಲಿಂದ ತೆರಳಿದ್ದಾಗಿ ಒಪ್ಪಿಕೊಂಡಿರುತ್ತಾರೆ’ ಎಂದು ತಿಳಿಸಿದ್ದಾರೆ.
Software engineer Sagar Shetty Kalki Resident & Narasappa Dana arrested. https://t.co/B3w3ntdqmW pic.twitter.com/gw87eDLtrw
— Mohammed Zubair (@zoo_bear) December 6, 2023
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಬಂಧಿಸಿದ ತನಿಖಾ ವಿಶೇಷ ತಂಡಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದು, ಬಹುಮಾನ ಘೋಷಣೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ:
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಅಂಧ ಮುಸ್ಲಿಂ ವೃದ್ಧರೊಬ್ಬರ ಮೇಲೆ ನ. 25ರಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.
‘ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೆಹಬೂಬ್ ನಗರದ ಅಂಧ ವ್ಯಕ್ತಿಯಾಗಿರುವ ಹುಸೇನ್ ಸಾಬ್(65) ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
‘ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿ ನ. 25ರಂದು ಮಧ್ಯರಾತ್ರಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದೆ. ಆಗ ಬೈಕ್ ಮೇಲೆ ಬಂದ ಕೆಲವು ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿದರು. ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಪಂಪಾನಗರ ಬಳಿ ಕರೆದುಕೊಂಡು ಹೋದರು’ ಎಂದು ದೂರಿನಲ್ಲಿ ತಿಳಿಸಿದ್ದರು.
‘ಬಳಿಕ ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ನೆಲದ ಮೇಲೆ ಬೀಳಿಸಿ ಹಲ್ಲೆ ಮಾಡಿದ ಯುವಕರ ಗುಂಪು, ನನ್ನ ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
‘ನನಗೆ ಕಣ್ಣು ಕೂಡ ಕಾಣುವುದಿಲ್ಲ. ನನ್ನ ಬಳಿಯಿದ್ದ ಹಣ ದೋಚಿಕೊಂಡು ಹೋಗಿದ್ದಾರೆ. ಬಳಿಕ ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನ ಮನೆಯ ವಿಳಾಸ ಕೇಳಿ ರಕ್ಷಣೆ ಮಾಡಿ, ಮನೆಗೆ ತಲುಪಿಸಿದ್ದಾರೆ’ ಎಂದು ಗಂಗಾವತಿ ನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಹುಸೇನ್ ಸಾಬ್ ಮಾಹಿತಿ ನೀಡಿದ್ದರು.