ಕನ್ನಡದ ಮೊದಲ ಖಾಸಗಿ ಉಪಗ್ರಹ ವಾಹಿನಿ ಉದಯ ಟಿವಿಯ ಅಧ್ಯಕ್ಷ, ಹಲವು ಕನ್ನಡ ಸಿನಿಮಾಗಳ ನಿರ್ಮಾಪಕರಾಗಿದ್ದ ಷಣ್ಮುಗ ಸುಂದರಂ ಸೆಲ್ವಂ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷವಾಗಿತ್ತು.
ಸೆಲ್ವಂ ಇಂದು ಬೆಳಗ್ಗೆ ಮನೆಯಲ್ಲಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೇ ಚಿಕಿತ್ಸೆ ಫಲಿಸದೇ ಸೆಲ್ವಂ ನಿಧನರಾಗಿರುವುದಾಗಿ ತಿಳಿದು ಬಂದಿದೆ.
1994ರ ಜೂನ್‌ನಲ್ಲಿ ಉದಯ ಟಿವಿ ಸ್ಥಾಪನೆಯಾಗಿತ್ತು. ತಮಿಳುನಾಡಿನ ಚೆನ್ನೈನಲ್ಲಿ ಇದು ಪ್ರಸಾರ ಆರಂಭಿಸಿತ್ತು. ಇದನ್ನು ಸನ್ ಟಿವಿಯ ಅಧ್ಯಕ್ಷರಾದ ಕಲಾನಿಧಿ ಮಾರನ್ ಪ್ರಾರಂಭಿಸಿದರು. ಇದು ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಮೊದಲ ಉಪಗ್ರಹ ವಾಹಿನಿ ಎಂಬ ಹೆಗ್ಗಳಿಕೆ ಹೊಂದಿದೆ. ವೇಗವಾಗಿ ಬೆಳೆದ ಉದಯ ಚಾನೆಲ್, 2000ರಲ್ಲಿ ಕರ್ನಾಟಕದ ಟಿವಿ ವಲಯದ 70% ಆದಾಯ ಹೊಂದಿತ್ತು. 2001ರಲ್ಲಿ ಅತ್ಯುತ್ತಮ ಕನ್ನಡ ಟಿವಿ ಚಾನೆಲ್ ಎಂದು ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಪ್ರಶಸ್ತಿ ಕೂಡ ಗೆದ್ದುಕೊಂಡಿತ್ತು. 2004ರವರೆಗೆ ಇದು ಉಚಿತ ಪ್ರಸಾರದ ಚಾನಲ್ ಆಗಿತ್ತು. ನಂತರ ಪಾವತಿ ಚಾನೆಲ್ ಆಗಿ ಮಾಡಲಾಯಿತು.
ಸೆಲ್ವಂ ಅವರ ನಿಧನಕ್ಕೆ ಸನ್ ನೆಟ್ವರ್ಕ್ ಸಮೂಹ, ಉದಯ ಟಿವಿಯ ಉದ್ಯೋಗಿಗಳು ಕಂಬನಿ ಮಿಡಿದ್ದಾರೆ. ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಕನ್ನಡದ ಜನಪ್ರಿಯ ʼಉದಯ ಟಿವಿʼ ವಾಹಿನಿಯ ಮುಖ್ಯಸ್ಥರಾಗಿದ್ದ ಎಸ್ ಸೆಲ್ವಂ ಅವರ ನಿಧನಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಂತಾಪ ಸಲ್ಲಿಸಿದ್ದಾರೆ.
ಉದಯ ಟಿವಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಕಟ್ಟಿದ ಖ್ಯಾತಿ ಎಸ್. ಸೆಲ್ವಂ ಅವರಿಗೆ ಸಲ್ಲಬೇಕು. ಇವರ ನಿಧನದಿಂದ ಮಾಧ್ಯಮ ಲೋಕದ ಪ್ರಬಲ ಹಾಗೂ ಪ್ರಭಾವಿ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ ಎಂದು ಡಿಸಿಎಂ ಅವರು ತಿಳಿಸಿದ್ದಾರೆ.
“ಉದಯ ಟಿವಿಯ ಬೆಂಗಳೂರು ಬ್ಯೂರೋದ ನಿರ್ದೇಶಕರಾಗಿ ಕರ್ನಾಟಕದ ಪ್ರತಿ ಹಳ್ಳಿ, ಹಳ್ಳಿಗೂ ಸುದ್ದಿ, ಮನರಂಜನೆ ಜತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ತಲುಪಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನ್ನಡದ ಮೊಟ್ಟ ಮೊದಲ ಖಾಸಗಿ ಉಪಗ್ರಹ ವಾಹಿನಿ ಉದಯ ಟಿವಿ ಅಧ್ಯಕ್ಷರಾಗಿದ್ದವರು ಸೆಲ್ವಂ. ಉದಯ ನ್ಯೂಸ್ ಮೂಲಕ ಮಾಧ್ಯಮದ ಘನತೆಯನ್ನು ಕಾಪಾಡಿದವರು. ತಳಮಟ್ಟದಿಂದ ಜನಪ್ರಿಯ ಮಾಧ್ಯಮ ಕಟ್ಟುವುದು ಸುಲಭದ ಮಾತಲ್ಲ. ಅದನ್ನು ಮಾಡಿ ತೋರಿಸಿದವರು ಸೆಲ್ವಂ ಎಂದು ಶ್ಲಾಘಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಶ್ವ ಮಾನಸಿಕ ಆರೋಗ್ಯ ದಿನ | ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ
ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಸನ್ ನೆಟ್ ವರ್ಕ್ ಸಮೂಹದವರಿಗೆ ಆ ಭಗವಂತ ನೀಡಲಿ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
