ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ | ಜಯಪ್ರಕಾಶ್ ಹೆಗ್ಡೆಗೆ ಕೈ ತಪ್ಪುತ್ತಾ ಕಾಂಗ್ರೆಸ್ ಟಿಕೆಟ್?

Date:

Advertisements

ಲೋಕಸಭಾ ಚುನಾವಣೆ ಹತ್ತಿರಬರುತ್ತಿದ್ದಂತೆ ಪಕ್ಷಗಳಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಚಿವೆ ಶೋಭಾ ಕಾರಂದ್ಲಾಜೆಗೆ ಬಹುತೇಕ ಟಿಕೆಟ್ ಖಚಿತವಾಗಿದ್ದರೆ‌, ಕಾಂಗ್ರೆಸ್‌ ಪಕ್ಷದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.

ಇದರ ನಡುವೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸದ್ಯ ಬಿಜೆಪಿಯಲ್ಲಿರುವ ಕೆ. ಜಯಪ್ರಕಾಶ್ ಹೆಗ್ಡೆ ಮರಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರುವ ಬಗ್ಗೆ ಈಗಾಗಲೇ ತಿಳಿಸಿದ್ದಾರೆ ಮತ್ತು ಮುಂದಿನ ಚುನಾವಣೆಯಲ್ಲಿ ಸೀಟು ಸಿಕ್ಕಿದರೆ ಉಡುಪಿ-ಚಿಕ್ಕಮಗಳೂರು ಲೋಕಸಭೆಯಲ್ಲಿ ಸ್ಫರ್ಧಿಸುವ ಕುರಿತು ಕೂಡ ತಮ್ಮ ಒಲವನ್ನು ತೋರ್ಪಡಿಸಿಕೊಂಡಿದ್ದಾರೆ.

ಜಯಪ್ರಕಾಶ ಹೆಗ್ಡೆಯವರು ತಮ್ಮ ಬೆಂಬಲಿಗರಿಗೆ ಮನವಿ ಮಾಡುವ ಮೂಲಕ ತಾನು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಸಹಕಾರ ನೀಡುವಂತೆ ಕೇಳಿಕೊಂಡಿರು ಮೆಸೇಜ್‌ ಗಳು ಹರಿದಾಡುತ್ತಲಿದ್ದು ಮಾರ್ಚ್‌ 12ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಆಗಲಿದ್ದಾರೆ.

Advertisements

ಸುರ್ಜೆವಾಲಾರವರನ್ನು ಭೇಟಿ ಮಾಡಿ ಮಾತುಕತೆ ನಡಿಸಿದ ಹೆಗ್ಡೆಯವರು ಪಕ್ಷ ಸೇರ್ಪಡೆಯಾಗ ಬೇಕಾದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್ ನೀಡಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇವರ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬ ಮಾತು ಕೂಡ ಕೇಳಿ ಬಂದಿತ್ತು.

ಈ ಮಧ್ಯೆ ಉಡುಪಿ-ಚಿಕ್ಕಮಗಳೂರು ಲೋಕ ಸಭೆಯ ಇನ್ನೋರ್ವ ಟಿಕೆಟ್‌ ಆಕಾಂಕ್ಷಿ ಸುಧೀರ್ ಕುಮಾರ್ ಮುರೊಳ್ಳಿ, ಸೋಮವಾರ ನಡೆದ ಸಿಇಸಿ ಸಭೆಗೂ ಮೊದಲು ಸುರ್ಜೇವಾಲಾ ಅವರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅವರ ಜೊತೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ತೆರಳಿ ಭೇಟಿ ಮಾಡಿದ್ದರು, ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಇದ್ದರು.

ಯಾರು ಕೆ.ಜಯಪ್ರಕಾಶ್ಹೆಗ್ಡೆ?

ಕುಂದಾಪುರ ತಾಲೂಕಿನ ಕೊರ್ಗಿ ಮೂಲದ ಜಯಪ್ರಕಾಶ್ ಹೆಗ್ಡೆ ನಿರಂತರ 14ವರ್ಷಗಳ ಕಾಲ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸತತವಾಗಿ ಜಯಗಳಿಸಿದ್ದರು. ಕ್ಷೇತ್ರ ಪುನರ್ವಿಂಗಡನೆಯ ಕಾರಣಕ್ಕೆ ಬ್ರಹ್ಮಾವರ ಕ್ಷೇತ್ರ ಮಾಯವಾದಾಗ, 2008ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಹೆಗ್ಡೆ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಡಿ.ವಿ.ಸದಾನಂದ ಗೌಡರ ವಿರುದ್ಧವಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಆದರೆ 2012ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಆ ನಂತರ ನಡೆದ ಪರಿಷತ್‌ ಚುನಾವಣೆಯ ಸಮಯದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು 2017ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಗ್ಡೆಯವರನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯ ಹಿನ್ನಲೆಯಲ್ಲಿ ಪ್ರಸಕ್ತ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಹೆಗ್ಡೆಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರಿಕೆ ಮಾಡಿದ್ದರು. ಫೆಬ್ರವರಿ ಅಂತ್ಯದಲ್ಲಿ ಹೆಗ್ಡೆ ತಮ್ಮ ತಂಡದ ಜೊತೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು.

ಕೆ. ಜಯಪ್ರಕಾಶ್‌ ಹಿನ್ನೆಲೆ

  • 1972-78ರ ಅವಧಿಯಲ್ಲಿ ವಿಜಯ ಬ್ಯಾಂಕ್ ನೌಕರರ ಯೂನಿಯನ್ ನ ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ದುಡಿದರು.
  • ಅಖಿಲ ಭಾರತ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶಿಸಿದರು.
  • 1987ರಲ್ಲಿ ಸ್ಟೈನ್ ನ ವೆಲೆನ್ಸಿಯಾದಲ್ಲಿ ನಡೆದ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಸೋಷಿಯಲಿಸ್ಟ್ ಯೂತ್ ನ ‘ಯುವಜನೋತ್ಸವ’ದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.
  • ಯುವ ರಾಜಕೀಯ ನೇತಾರರ ಅಮೆರಿಕನ್ ಕೌನ್ಸಿಲ್ ಏರ್ಪಡಿಸಿದ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಹೆಗ್ಡೆ ಅವರು ಎರಡು ಬಾರಿ(1986, 1989) ಭಾರತವನ್ನು ಪ್ರತಿನಿಧಿಸಿದ್ದರು.
  • 1991ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮನ್ವೆಲ್ತ್ ಯುವ ಕಾರ್ಯಕ್ರಮದಲ್ಲೂ ಅವರು ಭಾರತದ ಪ್ರತಿನಿಧಿಯಾಗಿದ್ದರು.

ಸೋಲುಗಳೇ ಗೆಲುವಿನ ಮೆಟ್ಟಿಲು

ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ಜಯಪ್ರಕಾಶ್ ಹೆಗ್ಡೆ, 1985ರ ಮೊದಲ ಪ್ರಯತ್ನದಲ್ಲೇ ಸೋಲುಂಡಿದ್ದರು. 1994ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲೇ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ನಂತರ ಬ್ರಹ್ಮಾವರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವವರೆಗೆ ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

1994-99ರ ಅವಧಿಯಲ್ಲಿ ಅವರು ಜೆ.ಎಚ್‌. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿ ಜನ ಮೆಚ್ಚುಗೆ ಕಾರ್ಯಗಳನ್ನು ಮಾಡಿದರು. 1999ರಲ್ಲಿ ಅವರು ಮತ್ತೆ ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು. 2004ರಲ್ಲಿ ನಡೆದ 12ನೇ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಿದರು.

2008 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಸೋಲನುಭವಿಸಿದರು. 2009ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಅವರು ಡಿ.ವಿ.ಸದಾನಂದ ಗೌಡರಿಂದ ಕೇವಲ 27,018 ಮತಗಳಿಂದ ಸೋತರು. ಡಿವಿ ಸದಾನಂದ ಗೌಡ ಅವರ ರಾಜೀನಾಮೆಯಿಂದ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿ ಸುನಿಲ್ ಕುಮಾರ್ ಕಟೀಲ್ ಅವರನ್ನು 45,000 ಮತಗಳ ಅಂತರದಿಂದ ಸೋಲಿಸಿದರು.

2017 ರಲ್ಲಿ ಬಿಜೆಪಿ ಪಕ್ಷ ಸೇರಿದ ಇವರನ್ನು ಅಂದಿನ ಬೊಮ್ಮಾಯಿ ಸರ್ಕಾರ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದೀಗ ಪುನಃ ಕಾಂಗ್ರೇಸ್‌ ಪಕ್ಷಕ್ಕೆ ಸೇರುವ ಮೂಲಕ ಕಾಂಗ್ರೇಸ್‌ ಪಕ್ಷದ ಟಿಕೇಟ್‌ ಆಂಕಾಕ್ಷಿ ಆಗಿದ್ದು ಕಾಂಗ್ರೇಸ್‌ ಪಕ್ಷ ಟಿಕೇಟ್‌ ನೀಡುತ್ತದೆಯೇ ಎಂದು ಕಾದುನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X