ಉಡುಪಿ ನಗರದ ಮುಖ್ಯ ರಸ್ತೆಗಳ ಸರ್ಕಲ್ ಇರುವ ಸ್ಥಳಗಳಲ್ಲಿ ಸಿಗ್ನಲ್ ಕಂಬಗಳನ್ನು ಹತ್ತಾರು ವರ್ಷಗಳ ಹಿಂದೆ, ಜಿಲ್ಲಾಡಳಿತವು ಅಳವಡಿಸಿತ್ತು. ಕೆಲವು ತಿಂಗಳು ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಕಂಬಗಳು, ತಮ್ಮ ಕರ್ತವ್ಯಗಳನ್ನು ನಿಲ್ಲಿಸಿದವು. ಕಬ್ಬಿಣದ ಸಿಗ್ನಲ್ ಕಂಬಗಳು ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮಳೆ ಗಾಳಿಗೆ ಧರೆಗೆ ಉರುಳುವ ಸಾಧ್ಯತೆ ಇದೆ. ನಗರಸಭೆಯು ತಕ್ಷಣ, ನಗರದಲ್ಲಿರುವ ಅನುಪಯುಕ್ತ ಕಂಬಗಳನ್ನು ತೆರವುಗೊಳಿಸಿ ಸಂಭವನೀಯ ದುರಂತಗಳನ್ನು ತಪ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.
ಹಳೆ ತಾಲೂಕು ಕಛೇರಿ ಬಳಿ ಇರುವ, ಕೆನರಾ ಬ್ಯಾಂಕ್ ಎದುರಲ್ಲಿಯೂ ಸಿಗ್ನಲ್ ಕಂಬವೊಂದು ತುಂಡಾಗಿದ್ದು, ವಾಹನಗಳ, ಸಾರ್ವಜನಿಕರ ಮೇಲೆ ಬೀಳುವ ಸಾಧ್ಯತೆ ಕಂಡುಬಂದಿದೆ. ಹಳೆ ಡಯಾನಾ ಸರ್ಕಲ್ ಬಳಿಯ ಪಾದಚಾರಿ ರಸ್ತೆಯ ಮೇಲೆ ಕೆಲವು ವರ್ಷಗಳಿಂದ ಸಿಗ್ನಲ್ ಕಂಬಗಳು ಕೂಡಿಡಲಾಗಿದೆ. ಇವಾಗ ಕಂಬಗಳ ಸುತ್ತಲು ಗಿಡ ಗಂಟಿ ಬೆಳೆದುನಿಂತಿದ್ದು, ವಿಷ ಜಂತುಗಳಿಗೆ ಆಶ್ರಯವಾದಂತಾಗಿದೆ ಎಂದು ಹೇಳಿದ್ದಾರೆ.