ಹಲವು ಧರ್ಮ, ಹಲವು ಜಾತಿ, ಹಲವು ಭಾಷೆ, ಹಲವು ಸಂಸ್ಕೃತಿಗಳನ್ನು ಕಾಪಾಡಿಕೊಂಡು ಈ ದೇಶದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಈ ಬಹುತ್ವವನ್ನು ನಾವು ಕಾಪಾಡಿಕೊಳ್ಳಬೇಕು. ಬಹುವಚನವನ್ನು ಉಳಿಸಿಕೊಳ್ಳಬೇಕು. ಈ ಬಹುವಚನ ಭಾರತವನ್ನು ಉಳಿಸಿಕೊಳ್ಳುವುದಕ್ಕೆ ಸಂವಿಧಾನ ನಮಗೆ ದಾರಿ ತೋರಿಸುತ್ತದೆ. ಹಾಗಾಗಿ ನಮ್ಮ ಸಂವಿಧಾನ ದೇಶದ ಆತ್ಮಚರಿತ್ರೆ ಎಂದು ಸಾಮಾಜಿಕ ಕಾರ್ಯಕರ್ತೆ, ಸಾಹಿತಿ ಆತ್ರಾಡಿ ಅಮೃತ ಶೆಟ್ಟಿ ಹೇಳಿದರು.
2017ನೇ ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸುವರ್ಣ ಸಂಭ್ರಮ ವರ್ಷದ ಫೆಬ್ರವರಿ ತಿಂಗಳ ಕಾರ್ಯಕ್ರಮವಾಗಿ ಉದ್ಯಾವರ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ಸಂವಿಧಾನ ತಿಳಿಯೋಣ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನುಡಿದರು.
“ಒಂದು ದೇಶಕ್ಕೆ ಆತ್ಮಚರಿತ್ರೆ ಇದೆಯಾದರೆ, ಅದರ ಒಂದು ತುಣುಕು ಪ್ರತಿಯೊಬ್ಬರ ಆತ್ಮ ಚರಿತ್ರೆ. ಹಾಗಾಗಿ ಅದು ನಮ್ಮೆಲ್ಲರ ಆತ್ಮಚರಿತ್ರೆ. ಈ ನಿಟ್ಟಿನಲ್ಲಿ ಭಾರತ ದೇಶದ ಸಂವಿಧಾನ ನಮ್ಮೆಲ್ಲರ ಆತ್ಮ ಚರಿತ್ರೆ ಎಂದರೆ ಸಾಕಾಗೋಲ್ಲ. ಅದು ಭಾರತ ದೇಶದ ಆತ್ಮ ಚರಿತ್ರೆ. ಸಂವಿಧಾನದ ಮೂಲ ಆಶಯ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವುದು. ದೇಶದ ಐಕ್ಯತೆ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಸಂವಿಧಾನ ನಮ್ಮೆಲ್ಲರಿಗೆ ಕೊಟ್ಟಿದೆ” ಎಂದರು.
“ಇಡೀ ಜಗತ್ತಿನಲ್ಲಿ ಭಾರತ ಮತ್ತು ಅಮೆರಿಕದಲ್ಲಿ ಲಿಖಿತ ಸಂವಿಧಾನವಿದೆ. ಅದರಲ್ಲಿ ಭಾರತದ ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದೆಂದು ಜಗತ್ತು ಒಪ್ಪಿಕೊಂಡಿದೆ. ಏಕೆಂದರೆ ನಮಗೆ ಈ ಸಂವಿಧಾನ ಬೇರೆಯವರಿಂದ ಹೇರಲ್ಪಟ್ಟದ್ದಲ್ಲ. ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವಂತೆ ಈ ಸಂವಿಧಾನವನ್ನು ವೀ ದ ಪಿಪಲ್ ಆಫ್ ಇಂಡಿಯಾ(ಭಾರತದ ಪ್ರಜೆಗಳಾದ ನಾವು) ಎಂಬುದನ್ನು ನಮಗೆ ನಾವು ಅರ್ಪಿಸಿಕೊಂಡಿದ್ದೇವೆ. ಅಲ್ಲದೆ ಅದು ದೇಶದ ಬಹುತ್ವವನ್ನು ಕಾಪಾಡಿಕೊಂಡು ಬಂದಿದೆ” ಎಂದು ಹೇಳಿದರು.
“ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದೇ ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತೆಯ ತಳಪಾಯದ ಮೇಲೆ. ಅವರೇ ಹೇಳುವಂತೆ ʼನಾನು 25 ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಭ್ಯಾಸಿದ್ದು ಸಂವಿಧಾನ ರಚನೆಗೆ ಸುಲಭವಾಯಿತುʼ ಎಂಬ ಅವರ ಆಶಯಕ್ಕೆ ಭಂಗ ಬರದಂತೆ ಸಂವಿಧಾನದ ಮೂಲ ತತ್ವಕ್ಕೆ ವ್ಯತ್ಯಯವಾಗದಂತೆ ನಾವು ಅದನ್ನು ಉಳಿಸಿಕೊಳ್ಳಬೇಕು. ನಾವು ಹಿರಿಯರು ಬೇಕಾದಷ್ಟು ತಪ್ಪುಗಳನ್ನು ಮಾಡಿ ಮಕ್ಕಳೇ ನಿಮ್ಮ ಹೆಗಲಿಗೆ ಅದನ್ನು ದಾಟಿಸಿದ್ದೇವೆ. ಆದರೆ ನೀವು ದಯಮಾಡಿ ಅಂತ ತಪ್ಪುಗಳನ್ನು ಮಾಡಿ ಮುಂದಿನ ಪೀಳಿಗೆಗೆ ದಾಟಿಸಬೇಡಿ. ಹಾಗಾಗಿ ಸಂವಿಧಾನದ ಚೌಕಟ್ಟಲ್ಲಿ ಬದುಕಲು ಪ್ರಯತ್ನ ಮಾಡಿ” ಎಂದು ತಿಳಿಸಿದರು.
“ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯ ಈ ದೇಶದ ಉಸಿರು. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ನಮ್ಮ ಅಭಿವೃದ್ಧಿಗಾಗಿ ಯಾವುದೇ ರಕ್ತ ಸುರಿಸದೆ ನಾವು ಪಡೆದುಕೊಳ್ಳಬಹುದಾದ ಆಯುಧವನ್ನು ಸಂವಿಧಾನ ನಮಗೆ ಕೊಟ್ಟಿರುತ್ತದೆ. ಸಂವಿಧಾನದ ಪೀಠಿಕೆಯನ್ನು ನಾವು ಪ್ರತಿಜ್ಞೆಯಾಗಿ ಸ್ವೀಕರಿಸಿದ್ದೇವೆ. ಅದನ್ನು ಉಲ್ಲಂಘಿಸಿದಾಗ ನಮ್ಮಲ್ಲಿ ಕೀಳರಿಮೆ ತಳಮಳವಾಗಬೇಕು. ಆಗ ಮಾತ್ರ ಸಂವಿಧಾನ ಉಳಿಯುತ್ತದೆ” ಎಂದು ಹೇಳಿದರು.
“ಸಂವಿಧಾನದಲ್ಲಿರುವ ಹಕ್ಕು ನಮಗೆ ಸಿಕ್ಕಿಲ್ಲವಾದರೆ ಕಾನೂನಾತ್ಮಕವಾಗಿ ಅದನ್ನು ಪಡೆದುಕೊಳ್ಳುವ ಅವಕಾಶವನ್ನು ಸಂವಿಧಾನ ನೀಡಿದೆ. ಸಮಾಜದಲ್ಲಿ ನಮ್ಮನ್ನು ನಾವು ಏನೆಂದು ನಿರೂಪಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ನೀಡಿದೆ. ಸಂವಿಧಾನ ಯಾವತ್ತೂ ಕೂಡ ಪಕ್ಷಪಾತಿಯಾಗಿ ವರ್ತಿಸಿಲ್ಲ. ಸಂವಿಧಾನ ರಚಿಸುವಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಪಕ್ಷಪಾತಿಯಾಗಿದ್ದರು ಅನ್ನುವ ಮಾತಿಗೆ ಯಾವುದೇ ಅರ್ಥವಿಲ್ಲ. ʼದೇಶದ ಪ್ರತಿಯೊಬ್ಬ ನಾಗರಿಕನ ಹಿತ ಕಾಯುವಲ್ಲಿ ಸಂವಿಧಾನ ಬದ್ಧವಾಗಿದೆ. ಈ ಸಂವಿಧಾನಕ್ಕೆ ಚ್ಯುತಿ ಬರದಂತೆ ಮುಂದಿನ ಪೀಳಿಗೆ ಇದನ್ನು ಉಳಿಸಬೇಕಾಗಿದೆ. ಸಂವಿಧಾನ ಒಳ್ಳೆಯವರ ಕೈಗೆ ಸಿಕ್ಕಿದರೆ ಅದು ಒಳ್ಳೆಯ ಸಂವಿಧಾನ. ಅದು ಕೆಟ್ಟವರ ಕೈಗೆ ಹೋದರೆ ಅದಕ್ಕಿಂತ ಕೆಟ್ಟ ಸಂವಿಧಾನ ಬೇರೆ ಇಲ್ಲʼವೆಂದು ಅಂಬೇಡ್ಕರ್ ಹೇಳಿದ್ದಾರೆ. ಹಾಗಾಗಿ ಮಕ್ಕಳೇ ಈ ಸಂವಿಧಾನ ಒಳ್ಳೆಯವರ ಕೈಗೆ ಸಿಗುವಂತೆ ತಾವು ಪ್ರಯತ್ನಿಸಬೇಕು” ಎಂದು ನುಡಿದರು.
ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, “ಸಂವಿಧಾನವನ್ನು ಎಲ್ಲರೂ ಕೂಡ ಮಾತನಾಡಬಹುದು. ಆದರೆ ತಾನು ಮಾತನಾಡುವ ಸಂವಿಧಾನಕ್ಕೆ ಬದ್ಧರಾಗಿ ಬದುಕಬೇಕಾದದ್ದು ಕೂಡ ಈ ಕಾಲದ ಅನಿವಾರ್ಯತೆ. ನಾನು ಎಷ್ಟೋ ಸಭೆಗಳನ್ನು ನೋಡಿದ್ದೇನೆ. ಸಂವಿಧಾನದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ವ್ಯಕ್ತಿಗಳು ವೈಯಕ್ತಿಕ ನೆಲೆಯಲ್ಲಿ ಸಂವಿಧಾನ ವಿರೋಧಿ ಸಂಘಟನೆಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಸಂವಿಧಾನದ ವಿರೋಧವಾಗಿ ಮಾತನಾಡುತ್ತಾರೆ ಇಂಥ ಆಭಾಸಗಳು ಆಗಬಾರದೆಂಬ ಒಂದೇ ನೆಲೆಯಲ್ಲಿ ಸಂವಿಧಾನದ ಬಗ್ಗೆ ಮಾತನಾಡುವ ಮತ್ತು ಆ ಸಂವಿಧಾನಕ್ಕೆ ಅಷ್ಟೇ ನಿಷ್ಠೆಯಿಂದ ಇರುವಂತಹ ಆತ್ರಾಡಿ ಅಮೃತ ಶೆಟ್ಟಿಯವರನ್ನು ನಾವು ಈ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದೇವೆ. ಅವರು ಬಹಳ ಸರಳವಾಗಿ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಾರೆ ಎನ್ನುವ ನಂಬಿಕೆ ನಮ್ಮದು. ವಿದ್ಯಾರ್ಥಿಗಳು ಅವರ ಈ ಮಾತುಗಳನ್ನು ನಿಮ್ಮ ಜೀವನದಲ್ಲಿ ಉಪಯೋಗಿಸಿಕೊಳ್ಳಿ” ಎಂದರು.
ಈ ಸುದ್ದಿ ಓದಿದ್ದೀರಾ? ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ: ಸಂಸದ ಹೆಗಡೆ
ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಆಶಾವಾಸು ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸದಸ್ಯೆ ಮೇರಿ ಡಿಸೋಜಾ ಧನ್ಯವಾದವಿತ್ತರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ವಾಣಿ ಪೆರಿಯೋಡಿಯವರ ‘ಮಕ್ಕಳಿಗಾಗಿ ಸಂವಿಧಾನ’ ಕೃತಿಯನ್ನು ನೀಡಿದರು.