ಕಾಂಗ್ರೆಸ್ ಸರ್ಕಾರವು ದಲಿತರ ನಿಧಿ ದುರ್ಬಳಕೆ ಮಾಡಿಕೊಂಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ಉಡುಪಿ ಘಟಕ ಆರೋಪಿಸಿದೆ. ಈ ಬಗ್ಗೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗವು, ಕಾಂಗ್ರೆಸ್ ಸರಕಾರ ದಲಿತರಿಗೆ ವಂಚನೆ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ, ಹಾಗೂ ರಾಜ್ಯದಲ್ಲಿ ಬೌದ್ಧ ಧರ್ಮದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಬೇಕು. ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ನಮೂನೆ 1ರ ಸಂವಿಧಾನ ಪ್ರಕಾರ ಜಾತಿ ಪ್ರಮಾಣ ಪತ್ರದಲ್ಲಿ ಧಮ್ಮದ ಉಲ್ಲೇಖ ಇರುವಂತೆ ಈ ಕೂಡಲೇ ಮಾರ್ಪಡು ಮಾಡಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ್ಯ ಎಲ್ಲಾ ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ/ಎಸ್.ಟಿ ಸಮುದಾಯಗಳಿಗೆ ವಂಚಿಸುತ್ತಾ ಬಂದಿದೆ. ಕಳೆದ ಒಂದು ವರ್ಷದಿಂದ ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುಮಾರು 25 ಸಾವಿರ ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಇದರಿಂದ ಈ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ. ಇದೇ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಕೋಟ್ಯಾಂತರ ರೂಪಾಯಿಗಳ ಹಣವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದು ಸರ್ಕಾರದ ವೈಫಲ್ಯವಾಗಿದೆ. ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರು.
ಮುಡಾ ಹಗರಣದ ಬಗ್ಗೆ ರಾಜ್ಯ ಸರ್ಕಾರ ನಡೆಸುವ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಹಾಗೂ ಭ್ರಷ್ಟಾಚಾರದಿಂದ ಮುಖ್ಯಮಂತ್ರಿಗಳು ಮುಕ್ತರಾಗುವ ಸಂಭವ ಇಲ್ಲದಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕೊಪ್ಪಳ | ಮಹಾತ್ಮ ಗಾಂಧೀಜಿ ಅವರ ಆದರ್ಶಗಳು ಎಲ್ಲರೂ ಪಾಲಿಸಬೇಕು: ಮಕಂದರ್ ಖಾನ್
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ದಲಿತ ಸಂಘರ್ಷ ಸಮಿತಿ ಭೀಮವಾದದ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ್, ಪ್ರಭಾಕರ್ ಅಮ್ಮುಂಜೆ, ಬೌದ್ಧ ಧಮ್ಮಾಚಾರಿ, ಶಂಭು ಸುವರ್ಣ ಸದಸ್ಯರಾದ ಅನಿಲ್ ಫೆರ್ನಾಂಡಿಸ್, ಸುಜಾತ ಎಸ್ ಹಾವಂಜೆ, ಸುನೀತಾ ಒಳಗುಡ್ಡೆ, ನಾರಾಯಣ್ ಒಳಗುಡ್ಡೆ, ಶೇಖರ್ ಮೂಡುಕುಡೂರು, ಕ ದ ಸಂ ಸ ಭೀಮವಾದದ ಉಡುಪಿ ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
