ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ, ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಹೂಡೆ ಇವರ ಜಂಟಿ ಆಶ್ರಯದಲ್ಲಿ ಇಂದು ಹೂಡೆಯ ಸಾಲಿಹಾತ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಡೆಂಘೀ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಡಾ ಪ್ರಶಾಂತ್ ಭಟ್, “ಜಗತ್ತಿನಲ್ಲಿರುವ ಸೊಳ್ಳೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಪ್ರಭೇದಗಳಿವೆ. ಅದರಲ್ಲಿ ಎಲ್ಲ ಸೊಳ್ಳೆಗಳು ಕಡಿದರೆ ಡೆಂಘೀ ರೋಗ ಬರುವುದಿಲ್ಲ. ಅದರಲ್ಲಿ ಇರುವ ಒಂದು ಪ್ರಭೇದ ಈ ಡೆಂಘೀ ಸೊಳ್ಳೆ” ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
“ಡೆಂಘೀ ಸೊಳ್ಳೆ ಕಡಿದರೆ ಮಾತ್ರ ಡೆಂಘೀ ರೋಗ ಬರಲು ಸಾಧ್ಯವಿದೆ. ಈ ಸೊಳ್ಳೆಗಳು ನಿಂತ ನೀರಿನಲ್ಲಿ ವಾಸಿಸುತ್ತವೆ. ಹಾಗಾಗಿ, ನಮ್ಮ ಸುತ್ತಮುತ್ತಲೂ ನೀರು ನಿಲ್ಲದ ಹಾಗೇ ಶುಚಿತ್ವವನ್ನು ಕಾಪಾಡುವುದರಿಂದ ಈ ಡೆಂಘೀ ರೋಗದಿಂದ ದೂರವಾಗಬಹುದು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಶಿರೂರು ದುರಂತ | ಕಾಣೆಯಾದವರ ಪತ್ತೆ ಕಾರ್ಯಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ
ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹೆಚ್ ಆರ್ ಎಸ್ ಜಿಲ್ಲಾಧ್ಯಕ್ಷರಾದ ಬಿಲಾಲ್ ಮಲ್ಪೆ, ಸಾಲಿಹಾತ್ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ಉಪಸ್ಥಿತರಿದ್ದರು.