ಕೆಲ ದಿನಗಳ ಹಿಂದೆ ಖಾಸಗಿ ಕಾಲೇಜೊಂದರ ವಾಶ್ ರೂಮಿನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್‌ಪಿ ಅಕ್ಷಯ್ ಮಚೀಂದ್ರ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, “ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವಿಡಿಯೋ ನಮಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು” ಎಂದು ತಿಳಿಸಿದ್ದಾರೆ.
“ಹಿಡನ್ ಕ್ಯಾಮೆರಾ ಅಥವಾ ಅಂತಹ ಯಾವುದೇ ಸಾಧನ ಬಳಸಿರುವ ಯಾವುದೇ ಕುರುಹು ಕಂಡುಬಂದಿಲ್ಲ. ಇಂತಹ ಫೋಟೊ, ವೀಡಿಯೋಗಳನ್ನು ಸೆರೆಹಿಡಿದು ಬ್ಲ್ಯಾಕ್ ಮೇಲ್‌ಗೆ ಬಳಸಿಕೊಳ್ಳುತ್ತಿದ್ದಾರೆಂಬ ವದಂತಿಗಳನ್ನೂ ಹಬ್ಬಿಸಲಾಗುತ್ತಿದೆ. ಆದರೆ ಇಲ್ಲಿಯ ತನಕ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೆ ನಾವೂ ನಿಗಾ ಇಟ್ಟಿದ್ದು, ನಮಗೂ ಯಾವುದೇ ವಿಡಿಯೋ ಲಭ್ಯವಾಗಿಲ್ಲ. ಕೆಲವರು ಬೇರೆ ಕಡೆ ಆದ ವಿಡಿಯೋಗಳಿಗೆ ಧ್ವನಿ ಎಡಿಟ್ ಮಾಡಿ ಉಡುಪಿ ಘಟನೆ ಎಂದು ಬಿಂಬಿಸುವ ಪ್ರಸಂಗ ನಡೆದಿದ್ದು, ಅದಕ್ಕೆ ನಾವು ಸ್ಪಷ್ಟನೆ ನೀಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶ ತಿಳಿಯದೆ ಸುಮ್ಮನೆ ಮಾಹಿತಿ ಹರಡುವುದರಿಂದ ಜನರಿಗೆ ಗೊಂದಲ ಸೃಷ್ಟಿಯಾಗುತ್ತಿದೆ” ಎಂದಿದ್ದಾರೆ.
“ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗಿಲ್ಲ. ವಿಡಿಯೋ ದೊರಕಿದರೆ ಯಾರಾದರೂ ಅದನ್ನು ನಮ್ಮ ಗಮನಕ್ಕೆ ತರಬಹುದು. ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಟ್ವಿಟ್ಟರ್ ಖಾತೆಯವರು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬಯಸಿದ್ದರು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ” ಎಂದು ಹೇಳಿದ್ದಾರೆ.
“ಯಾವುದೇ ಎಫ್ಐಆರ್ ಅಥವಾ ಯಾವುದೇ ದೂರು ದಾಖಲಾಗಿಲ್ಲ. ನಾವು ಸುಮೊಟೊ ಕೇಸು ದಾಖಲಿಸಲು ಸಾಮಾಜಿಕ ಜಾಲತಾಣದಿಂದ ಯಾವುದೇ ಸಾಕ್ಷಿ ದಾಖಲೆಗಳು ಸಿಕ್ಕಿಲ್ಲ. ಮೊಬೈಲ್ ಪರಿಶೀಲನೆ ಮಾಡಲಾಗಿದೆ. ಅದರಲ್ಲಿಯೂ ಏನೂ ಸಿಕ್ಕಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಆರು ಮಂದಿ ಹೈಕೋರ್ಟ್ ನ್ಯಾಯಾಧೀಶರಿಗೆ ಜೀವ ಬೆದರಿಕೆ; ₹50 ಲಕ್ಷಕ್ಕೆ ಡಿಮಾಂಡ್
“ಘಟನೆಗೆ ಸಂಬಂಧಪಟ್ಟಂತೆ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ. ಇದನ್ನು ಮೋಜಿಗಾಗಿ ಮಾಡಲಾಗಿದ್ದು ನಂತರ ವೀಡಿಯೊಗಳನ್ನು ಅಳಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಕಾಲೇಜು ಆಡಳಿತದೊಂದಿಗೆ ಹೇಳಿದ್ದಾರೆ” ಎಂದರು.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಪರಿಶೀಲಿಸದ ವಿಷಯಗಳನ್ನು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಎಸ್‌ಪಿ ಸಾರ್ವಜನಿಕರಿಗೆ ವಿನಂತಿಸಿದ್ದು, ಸಾರ್ವಜನಿಕರು ಈ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.