ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಇಂದು ಉಡುಪಿಯ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಗಣ್ಯರ ಸಮಾವೇಶ ಮತ್ತು ಒಕ್ಕೂಟದ 25ನೇ ವರ್ಷದ ವಿಶೇಷ ವಾರ್ತಾ ಸಂಚಯ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝೀ ಮೌಲಾನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಇವರು ವಾರ್ತಾ ಸಂಚಯ ಬಿಡುಗಡೆ ಮಾಡಿ, ಪ್ರಾರ್ಥನೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹ್ಮದ್ ಮಾತನಾಡಿ ಮುಸ್ಲಿಮ್ ಸಮುದಾಯ ಶಿಕ್ಷಣದಿಂದ ಬಹಳಷ್ಟು ವಂಚಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮಹತ್ವ ಅರಿತು, ಜಾಗೃತರಾಗಿದ್ದರೂ ಸಹ ಉತ್ತರ ಭಾರತದಂತಹ ರಾಜ್ಯಗಳಲ್ಲಿ ಇಂದು ಸಹ ಬಹಳಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಇಸ್ಲಾಮ್ ಧರ್ಮ, ಪ್ರವಾದಿ ವಚನಗಳು ಶಿಕ್ಷಣಕ್ಕೆ ಬಹಳ ಮಹತ್ವವನ್ನು ಕೊಟ್ಟಿದೆ ಆದರೆ ಅದನ್ನು ಅರಿಯುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಹಂತದಲ್ಲಿ ಪವಿತ್ರ ಕುರ್‌ಆನ್ ಸಂಪೂರ್ಣ ಕಂಠಪಾಠ ಮಾಡಿದ ಯುವ ಹಾಫೀಝ್ಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಮೊಹಮ್ಮದ್ ಮೌಲಾ ವಹಿಸಿದ್ದರು.
ಒಕ್ಕೂಟದ ಮಾಜಿ ಅಧ್ಯಕ್ಷರಾದ ಯಾಸೀನ್ ಮಲ್ಪೆ ಒಕ್ಕೂಟ ಇಪ್ಪತ್ತೈದು ವರ್ಷಗಳ ನಡೆದು ಬಂದ ಹಾದಿಯನ್ನು ತಿಳಿಸಿದರು. ವಾರ್ತಾ ಸಂಚಯದ ಸಂಪಾದಕರಾದ ಮೌಲಾನ ಝಮೀರ್ ಅಹ್ಮದ್ ರಶಾದಿಯವರು ಪುಸ್ತಕದ ಪರಿಚಯ ಮಾಡಿದರು. ಇದ್ರೀಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮೂಳುರಿನ ಅಲ್ ಇಹ್ಸಾನ್ ವಸತಿ ಶಾಲೆಯ ವ್ಯವಸ್ಥಾಪಕರಾದ ಮೌಲಾನ ಮುಸ್ತಫಾ ಸಆದಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಜಿಲ್ಲಾ ಉಪಾಧ್ಯಕ್ಷರಾದ ಮೊಹಮ್ಮದ್ ರಫೀಕ್ ಬಿ.ಎಸ್.ಎಫ್, ಉಡುಪಿ ತಾಲೂಕು ಅಧ್ಯಕ್ಷರಾದ ಎಸ್.ಎಮ್. ಇರ್ಶಾದ್ ನೇಜಾರು, ಕುಂದಾಪುರ ತಾಲ್ಲೂಕು ಅಧ್ಯಕ್ಷರಾದ ಎಸ್. ದಸ್ತಗೀರ್ ಕಂಡ್ಲರು, ಕಾರ್ಕಳ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ಗೌಸ್ ಮಿಯಾರು, ಕಾಪು ತಾಲೂಕು ಅಧ್ಯಕ್ಷರಾದ ನಸೀರ್ ಅಹ್ಮದ್, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ತಾಜುದ್ದೀನ್ ಇಬ್ರಾಹಿಮ್, ಒಕ್ಕೂಟದ ಮಾಜಿ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್, ಎಂ ಪಿ ಮೊಹಿದ್ದೀನ್, ಅಶ್ಫಾಕ್ ಕಾರ್ಕಳ, ಹಾಜಿ ಅಬುಬಕ್ಕರ್ ನೇಜಾರ್, ಹಾಜಿ ತೌಫೀಕ್ ಅಬ್ದುಲ್ಲಾ ನಾವುಂದ ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ಮುಸ್ಲೀಮ್ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ಸ್ವಾಗತಿಸಿದರು. ಜಫ್ರುಲ್ಲಾ ನೇಜಾರ್ ಧನ್ಯವಾದವಿತ್ತರು. ಯಾಸೀನ್ ಕೋಡಿಬೆಂಗ್ರೆ, ಜಿ ಎಂ ಶರೀಫ್ ಕಾರ್ಯಕ್ರಮ ನಿರೂಪಿಸಿದರು.