ಭಾರತ ದೇಶವು ವಿವಿಧ ಧರ್ಮಗಳ, ಸಂಸ್ಕೃತಿಗಳ, ಭಾಷೆಗಳ, ಆಚಾರ ವಿಚಾರಗಳ ಒಂದು ಸುಂದರ ಹೂಗುಚ್ಛ ವಾಗಿದೆ. ನಾವು ಪರಸ್ಪರರನ್ನು ಅರಿಯುವ ಮತ್ತು ಪರಸ್ಪರರ ಆಚಾರ ವಿಚಾರಗಳನ್ನು ಗೌರವಿಸುವ ಪ್ರಯತ್ನ ಮಾಡಬೇಕು. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದಿಲ್ಲ, ಸಮಾಜದಲ್ಲಿ ಸದಾ ಶಾಂತಿ ಬಯಸುವ ಮೂಲಕ ನಾವು ಸಹಬಾಳ್ವೆಯನ್ನು ನಡೆಸುವಂತಾಗಬೇಕು. ಪವಿತ್ರ ರಮಝಾನ್ ತಿಂಗಳು ನಮ್ಮಲ್ಲಿ ತ್ಯಾಗ, ಬಲಿದಾನ, ಕ್ಷಮೆ ಮತ್ತು ಸಹಾನುಭೂತಿಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಸಮಾಜದ ಬಡ, ದರಿದ್ರ, ಸಂಕಷ್ಟ ಪೀಡಿತ ಅಗತ್ಯವುಳ್ಳ ಜನರ ತೊಂದರೆಗಳನ್ನು ಅರಿಯಲು ಮತ್ತು ಅವರಿಗೆ ನೆರವಾಗಲು ಪ್ರೇರೇಪಿಸುತ್ತದೆ ಎಂದು ಮುಸ್ಲಿಮ್ ಬಾಂಧವ್ಯ ವೇದಿಕೆ ಕರ್ನಾಟಕದ ವಕ್ತಾರರಾದ ಮುಷ್ತಾಕ್ ಹೆನ್ನಾಬೈಲ್ ಹೇಳಿದರು.
ಅವರು ಇಂದು ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಹಟ್ಟಿಯಂಗಡಿಯ ರಾಜ್ಯ ಸಂಪನ್ಮೂಲ ಕೇಂದ್ರ “ನಮ್ಮ ಭೂಮಿ”ಯಲ್ಲಿ ಖಿದ್ಮಾ ಫೌಂಡೇಶನ್ ವತಿಯಿಂದ ನಡೆದ ಈದ್ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ವಿದ್ಯಾರ್ಥಿಗಳ ಸದ್ಭಾವನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಮ್ಮ ಭೂಮಿಯ ಉಪ ಕಾರ್ಯಕಾರಿ ನಿರ್ದೇಶಕ ಶ್ರೀ ಶಿವಾನಂದ ಶೆಟ್ಟಿ ಸ್ವಾಗತಿಸಿದರು. ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಖಿದ್ಮಾ ಫೌಂಡೇಶನ್ ನ ಅಧ್ಯಕ್ಷರಾದ ಶೇಖ್ ಅಬು ಮುಹಮ್ಮದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಭೂಮಿಯ ನಿರ್ದೇಶಕರಾದ ಶ್ರೀನಿವಾಸ ಗಾಣಿಗ ವಂದಿಸಿದರು. ಖಿದ್ಮಾ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಖಿದ್ಮಾ ಫೌಂಡೇಶನ್ ನ ಪದಾಧಿಕಾರಿಗಳು, ಸದಸ್ಯರು, ನಮ್ಮ ಭೂಮಿಯ ಹೊಣಿಗಾರರು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.