ಷರತ್ತುಗಳನ್ನು ಉಲ್ಲಂಘಿಸಿದ ಕೋಟ ಅವಳಿ ಕೊಲೆ ಪ್ರಕರಣದ ಆರೋಪಿ, ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಜಾಮೀನು ಆದೇಶವನ್ನು ರದ್ದುಗೊಳಿಸುವಂತೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ನ್ಯಾಯಾಲಯವು ವರದಿಯನ್ನು ಅಂಗೀಕರಿಸಿ ಆರೋಪಿಯ ಜಾಮೀನು ರದ್ದುಗೊಳಿಸಿ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶ ನೀಡಿದೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರ ಜ.26ರಂದು ಅವಳಿ ಕೊಲೆ ಪ್ರಕರಣದಲ್ಲಿ ಕೋಟತಟ್ಟು ಗ್ರಾಮದ ಬಾರಿಕೇರಿ ನಿವಾಸಿ ರಾಘವೇಂದ್ರ ಕಾಂಚನ್ ಯಾನೆ ಬಾರಿಕೇರಿ ರಾಘು, ಕೃತ್ಯದ ಪ್ರಮುಖ ಆರೋಪಿಗಳ ಜೊತೆ ಒಳ ಸಂಚು ನಡೆಸಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಅದರಂತೆ ಆರೋಪಿಯನ್ನು ಪೊಲೀಸರು ಫೆ.7ರಂದು ಬಂಧಿಸಲಾಗಿತ್ತು.
ಬಳಿಕ ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಈನ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಸ್ತುತ ಕಲಂ 313 ದಂಡ ಪ್ರಕ್ರಿಯಾ ಸಂಹಿತೆಯಡಿ ಯಲ್ಲಿ ಆರೋಪಿ ಹೇಳಿಕೆಯ ಹಂತದಲ್ಲಿದೆ. ಪ್ರಕರಣದ 9ನೇ ಆರೋಪಿಯಾಗಿ ರುವ ರಾಘವೇಂದ್ರ ಕಾಂಚನ್‌ಗೆ 2023ರ ಜೂ.28ರಂದು ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿ ಬಿಡುಗಡೆ ಮಾಡಿತ್ತು.
ಮತ್ತೊಂದು ಪ್ರಕರಣ ದಾಖಲು: ಈ ಮಧ್ಯೆ ರಾಘವೇಂದ್ರ ಕಾಂಚನ್, 2025ರ ಮೇ 31ರಂದು ಹಿಂದು ಜಾಗರಣಾ ವೇದಿಕೆ ಕೋಟ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಹಳೆಯ ವಿಡಿಯೋಗಳನ್ನು ಹಂಚಿಕೊಂಡು, ಜಾತಿ ಮತ್ತು ಧರ್ಮಗಳ ನಡುವೆ ವೈರುತ್ವ ಮತ್ತು ಕೋಮು ಗಲಾಭೆ ಉಂಟು ಮಾಡಲು ಪ್ರೇರೆಪಿಸಿ ಪರಸ್ಪರ ಧರ್ಮಗಳ ನಡುವೆ ಕೋಮು ಗಲಭೆಗೆ ದುಷ್ಟೇರಣೆ ನೀಡಿದ್ದನು.
ಈತನ ಈ ಅಪರಾಧಿಕ ಕೃತ್ಯದಿಂದ ಉಡುಪಿ ಜಿಲ್ಲೆಯಲ್ಲಿಯೂ ಕೂಡಾ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವುದರಿಂದ ಹಾಗೂ ಆತನ ಕೃತ್ಯವನ್ನು ನಿಯಂತ್ರಿಸುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಆತನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.
ರಾಘವೇಂದ್ರ ಕಾಂಚನ್ ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಪಡೆಯದೆ ಉಡುಪಿ ಜಿಲ್ಲೆಯನ್ನು ಬಿಟ್ಟು ಹೊರ ಹೋಗದಂತೆ ಹಾಗೂ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದಂತೆ ಜಾಮೀನು ಆದೇಶ ದಲ್ಲಿ ಷರತ್ತುಗಳನ್ನು ವಿಧಿಸಲಾಗಿತ್ತು. ಈತನು ಹೈಕೋರ್ಟಿನ ಜಾಮೀನು ಆದೇಶದಲ್ಲಿ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈತನಿಗೆ ಮಂಜೂರಾದ ಜಾಮೀನು ಆದೇಶವನ್ನು ರದ್ದುಗೊಳಿ ಸುವಂತೆ ಉಡುಪಿ ಡಿವೈಎಸ್ಪಿ ವರದಿಯನ್ನು ಸಿದ್ಧಪಡಿಸಿದ್ದು, ಅದರಂತೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ನ್ಯಾಯಾಲಯಕ್ಕೆ ಜಾಮೀನು ರದ್ದತಿ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.
ನ್ಯಾಯಾಧೀಶ ಕಿರಣ್ ಗಂಗಣ್ಣನವರ್ ಈ ಅರ್ಜಿಯನ್ನು ಪರಿಶೀಲಿಸಿ, ಆರೋಪಿಗೆ ನೀಡಿದ ಜಾಮೀನು ರದ್ದುಗೊಳಿಸಿ ನ್ಯಾಯಾಲಯಕ್ಕೆ ಶರಣಾ ಗುವಂತೆ ಆದೇಶ ನೀಡಿದರು.
‘ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿ ಜಾಮೀನಿನ ಮೇಲೆ ಇರುವ ರೌಡಿ ಶೀಟರ್ ಹಾಗೂ ಇತರೆ ಆರೋಪಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಲ್ಲಿ ಜಾಮೀನು ರದ್ದತಿಗಾಗಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.