ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸುಸ್ತಿದಾರರು ಎಂದು ಪರಿಗಣಿಸಲ್ಪಟ್ಟವರು ನೀಡಿದ ದೂರಿನ ಮೇಲೆ ದಾಖಲಾಗಿರುವ ಎಫ್.ಐ.ಆರ್ ವಿರುದ್ಧದ ತನಿಖೆಗೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿಲ್ಲ ಎಂದಾದರೆ ಬ್ಯಾಂಕಿನ ಅಧ್ಯಕ್ಷರೇ ತಿಳಿಸಿರುವಂತೆ ನಿಷ್ಪಕ್ಷಪಾತವಾದ ತನಿಖೆಗೆ ಸಹಕರಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಮಲ್ಪೆ ಮಧ್ವರಾಜ್ ಅಂತಹ ಹಿರಿಯ ಚೇತನಗಳ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ಮೊಗವೀರ ಮೀನುಗಾರ ಮುಖಂಡರು ಒಗ್ಗೂಡಿ ಉತ್ತಮ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಅಂದು ಹುಟ್ಟು ಹಾಕಿದ ಮೀನುಗಾರರ ಸಮುದಾಯದ ಹೆಮ್ಮೆಯ ಬ್ಯಾಂಕ್ ಆಗಿದ್ದು, ಇದರ ವಿರುದ್ದ ಕೇಳಿ ಬಂದಿರುವ ಆರೋಪದಿಂದ ಸಮುದಾಯಕ್ಕೆ ನೋವು ತಂದಿದೆ. ಬ್ಯಾಂಕಿನ ವಿರುದ್ದ ಹಿಂದಿನಿಂದಲೂ ಹಲವಾರು ಆರೋಪಗಳು ಕೇಳಿಬಂದಿದ್ದು, ಇದರ ಕುರಿತು ಸ್ಪಷ್ಟನೆ ನೀಡುವಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಹಿಂದೆ ಬಿದ್ದಿರುವುದು ಸಾರ್ವಜನಿಕರಲ್ಲಿ ವಿವಿಧ ರೀತಿಯ ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರಾಗಿ, ಬ್ಯಾಂಕಿನ ಅಧ್ಯಕ್ಷರಾಗಿ ಗಂಭೀರ ಆರೋಪ ಬಂದಾಗ ಅದರ ವಿಚಾರದಲ್ಲಿ ಸೂಕ್ತ ರೀತಿಯ ಸ್ಪಷ್ಟನೆ ನೀಡದೇ ಕೇವಲ ಹಾರಿಕೆ ಉತ್ತರಗಳನ್ನೇ ನೀಡಿ ಕಾಲ ಹರಣ ಮಾಡುವ ಕೆಲಸವನ್ನು ಮಾಡಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕೂಡ ಇದನ್ನು ರಾಜಕೀಯಗೊಳಿಸಲು ಇಷ್ಟಪಡದೆ ಅನ್ಯಾಯವಾದವರಿಗೆ ಸೂಕ್ತ ನ್ಯಾಯ ಕೊಡಿಸುವಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸುತ್ತಿದೆ. ಬ್ಯಾಂಕಿನ ಅಧ್ಯಕ್ಷರು ಹೇಳುವಂತೆ ಬ್ಯಾಂಕಿನಿಂದ ಸಾಲ ಪಡೆದವರು ಸುಸ್ತಿದಾರರೇ ಹೊರತು ಸಂತ್ರಸ್ಥರಲ್ಲ ಹಾಗಿದ್ದಲ್ಲಿ ಇಲ್ಲಿ ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ? ಹಣದ ವಿಚಾರದಲ್ಲಿ ಸಾಲ ಪಡೆದವರು ಸುಳ್ಳು ಹೇಳಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಕಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಅಂಗಾಂಗ ಸ್ಪರ್ಷಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಾಲೆಯ ಕಾಮುಕ ಮಾಲೀಕನ ಬಂಧನ
ಮಲ್ಪೆ ಶಾಖೆಯ ಅಂದಿನ ವ್ಯವಸ್ಥಾಪಕರು ತಮ್ಮ ಅವಧಿಯಲ್ಲಿ ಯಾವ ರೀತಿಯಲ್ಲಿ ಸಾಲ ನೀಡಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿಯನ್ನು ಜನರಿಗೆ ನೀಡಬೇಕಾದ ಜವಾಬ್ದಾರಿ ಬ್ಯಾಂಕಿನ ಆಡಳಿತ ಮಂಡಳಿಯ ಮೇಲಿದೆ. ಒಂದು ವೇಳೆ ಸಾಲ ಪಡೆದುಕೊಂಡವರು ಸುಳ್ಳು ಹೇಳುತ್ತಿದ್ದರೆ ಅವರ ವಿರುದ್ಧವೂ ಕೂಡ ತನಿಖೆಯಾಗಲಿ ಇಲ್ಲವಾದರೆ ಬ್ಯಾಂಕಿನಿಂದ ಮೋಸವಾಗಿರುವುದು ಕೂಡ ಸತ್ಯವಾದರೇ ತಾವೂ ಕೂಡ ತನಿಖೆಗೆ ಸಿದ್ದವಿರುವುದಾಗಿ ಬ್ಯಾಂಕಿನ ಅಧ್ಯಕ್ಷರೇ ಘೋಷಿಸಿದ್ದು ಈ ಬಗ್ಗೆ ಸೂಕ್ತ ನಿರ್ಧಾರವನ್ನು ಸಮಾಜದ ಮುಖಂಡರೆನಿಸಿದವರು ಹಾಗೂ ಸರ್ಕಾರ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಯಾವುದೇ ಅಮಾಯಕರು ಕೂಡ ತೊಂದರೆ ಅನುಭವಿಸಬಾರದು ಈ ನಿಟ್ಟಿನಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ ಬ್ಯಾಂಕಿನ ಅಧ್ಯಕ್ಷರು ಹಾಗೂ ಉಡುಪಿ ಶಾಸಕರಾಗಿರುವ ಯಶ್ಪಾಲ್ ಸುವರ್ಣ ಅವರೂ ಕೂಡ ಸಹಕಾರ ನೀಡುವ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ ನೊಂದವರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿನ ವಿರುದ್ದ ಇರುವ ದೂರುಗಳಿಗೆ ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಆಡಳಿತ ಮಂಡಳಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಮತ್ತು ನಿಷ್ಪಕ್ಷಪಾತವಾದ ತನಿಖೆಗೆ ಸಹಕರಿಸುವ ಮೂಲಕ ದೇಶಕ್ಕೆ ಮಾದರಿಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ವ್ಯವಸ್ಥೆಯ ಮೇಲೆ ಜನರಿಟ್ಟಿರುವ ನಂಬಿಕೆಗೆ ಘಾಸಿಯಾಗದಂತೆ ಎಚ್ಚರ ವಹಿಸಬೇಕೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.
