ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಪ್ರಯುಕ್ತ ಸಂಘದ ಸದಸ್ಯರಿಗೆ ಅನಾರೋಗ್ಯ, ಅಪಘಾತ ಸಹಿತ ಯಾವುದೇ ಅವಘಡ ಸಂಭವಿಸಿದಾಗ ನೆರವು ನೀಡಲು ಸ್ಥಾಪಿಸಲಾಗಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಸಂಸ್ಥೆ ₹5 ಲಕ್ಷ ದೇಣಿಗೆ ಹಸ್ತಾಂತರಿಸಿದೆ.
ಮಣಿಪಾಲ ಮಾಹೆಯ ಎಜ್ಯು ಬಿಲ್ಡಿಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹೆ ಸಹಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಹಾಗೂ ಉಪ ಕುಲಪತಿ ಎಂ ಡಿ ವೆಂಕಟೇಶ್ ಅವರು ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ₹5 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು. ಈ ವೇಳೆ ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ. ಶರತ್ ರಾವ್ ಇದ್ದರು.
ಈ ಸಂದರ್ಭದಲ್ಲಿ ಮಾಹೆ ಸಹಕುಲಾಧಿಪತಿ ಡಾ.ಎಚ್ ಎಸ್ ಬಲ್ಲಾಳ್ ಹಾಗೂ ಉಪ ಕುಲಪತಿ ಎಂ ಡಿ ವೆಂಕಟೇಶ್ ಅವರನ್ನು ಸಂಘದಿಂದ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರಿ ವಸತಿ ಶಾಲೆಯಲ್ಲಿ ರ್‍ಯಾಗಿಂಗ್; ವಿದ್ಯಾರ್ಥಿಗಳ ಮರ್ಮಾಂಗಕ್ಕೆ ಗಾಯ
ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಾಜ್ಯ ಸಂಘದ ಸದಸ್ಯ ಕಿರಣ್ ಮಂಜನಬೈಲು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಉಡುಪಿ ಪತ್ರಿಕಾ ಭವನ ಸಂಚಾಲಕ ಅಜಿತ್ ಅರಾಡಿ ಇದ್ದರು.