ಕರಾವಳಿಯಲ್ಲಿ ಮಳೆ ಸ್ವಲ್ಪಮಟ್ಟಿಗೆ ನಿಂತಿದೆ. ಆದರೆ ಕೆಸರುಮಯವಾದ ರಸ್ತೆ, ಹೊಂಡ ಗುಂಡಿಗಳು ತುಂಬಿಕೊಂಡಿರುವ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಪ್ರತಿನಿತ್ಯದ ಗೋಳು ತಪ್ಪಿದ್ದಲ್ಲ. ಅಂತಹದ್ದೇ ಗೋಳು ಉಡುಪಿ ನಗರದ ಮಣಿಪಾಲದ ಶಾಂತಿನಗರದ ಮುಖ್ಯ ರಸ್ತೆಯಲ್ಲಿಯೂ ಇದೆ.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಶಾಂತಿನಗರದ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಶೀಘ್ರವೇ ದುರಸ್ತಿ ಮಾಡುವಂತೆ ಸ್ಥಳೀಯರಿಂದ ಆಗ್ರಹ ಕೇಳಿಬಂದಿದೆ.
ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ರಸ್ತೆಯನ್ನು ದುರಸ್ತಿ ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, “ರಸ್ತೆಯ ಅವ್ಯವಸ್ಥೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕದ ಮನೆಗಳಿಂದ ಬಟ್ಟೆ ತೊಳೆದ ನೀರು, ಸ್ನಾನ ಮಾಡಿದ ಕಲ್ಮಷ ನೀರು ರಸ್ತೆಗಳಿಗೆ ಹರಿದು ಬರುತ್ತಿರುವುದು ಕಂಡುಬಂದಿದೆ. ಇದರಿಂದ ಪರಿಸರದಲ್ಲಿ ಗಬ್ಬುವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸ್ಥಿತಿ ಎದುರಾಗಿದೆ” ಎಂದು ತಿಳಿಸಿದರು.
“ಗಲೀಜು ನೀರಿನಿಂದಾಗಿ ಮಾರಕ ಸೊಳ್ಳೆಗಳು ಕೂಡ ಹುಟ್ಟುತ್ತಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಿಂದ ನಡೆದು ಸಾಗುವಾಗ, ಚಲಿಸುವ ವಾಹನಗಳ ಚಕ್ರದಿಂದ ಕೊಳಚೆ ನೀರನ್ನು ಮೈಮೇಲೆ ಎರಚಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಲ್ಲಿಯ ಸಮಸ್ಯೆಯನ್ನು ಜನಪ್ರತಿನಿಧಿಗಳ, ಅಧಿಕಾರಿ ವರ್ಗದವರ ಗಮನಕ್ಕೆ ತಂದರೂ ಯಾರೊಬ್ಬರು ಎಚ್ಚೆತ್ತುಕೊಳ್ಳದೆ ಮೌನರಾಗಿದ್ದಾರೆ” ಎಂದು ತಿಳಿಸಿದರು.
ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯು ಶಾಂತಿನಗರದ ಮುಖ್ಯರಸ್ತೆ ಸನಿಹ ಇದೆ. ಆದರೂ ಒಮ್ಮೆ ಕೂಡ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿ ಇಲ್ಲಿನ ರಸ್ತೆಯ ಅವ್ಯವಸ್ಥೆಯ ಬಗ್ಗೆ ಗಮನಹರಿಸಿದರೆ, ಸಮಸ್ಯೆಗೆ ಬೇಗನೆ ಮುಕ್ತಿ ದೊರೆಯುತ್ತಿತ್ತು ಎಂಬ ಭರವಸೆಯಲ್ಲಿದ್ದೇವೆ ಎಂದು ಸ್ಥಳೀಯರು ಈ ದಿನ.ಕಾಮ್ ಜೊತೆಗೆ ಹೇಳಿಕೊಂಡರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಅವಾಚ್ಯ ನಿಂದನೆ ಆರೋಪ: ಸರ್ಕಾರಿ ವೈದ್ಯರಿಗೆ ಹಲ್ಲೆ; ಒಪಿಡಿ ಬಂದ್, ಪ್ರತಿಭಟನೆ
ಒಟ್ಟಿನಲ್ಲಿ, ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರ ಗೋಳು ತಪ್ಪಿದ್ದಲ್ಲ. ಲಕ್ಷಾತಂರ ರುಪಾಯಿ ಟ್ಯಾಕ್ಸ್ ಕಟ್ಟಿ ಸಹ ನೆಟ್ಟಗಿನ ರಸ್ತೆ ವ್ಯವಸ್ಥೆ ಇಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ರಸ್ತೆಯ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು ಎಂದು ಶಾಂತಿನಗರದ ಮುಖ್ಯ ರಸ್ತೆಯ ನಿವಾಸಿಗಳು ಆಗ್ರಹಿಸಿದ್ದಾರೆ.
