ಕುಡಿಯುವ ನೀರಿನ ಟ್ಯಾಂಕ್ ಕಲುಷಿತಗೊಂಡಿದ್ದು, ಇದನ್ನು ಸೇವಿಸಿದ ಬಳಿಕ ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಡೆದಿದೆ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್ ನಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಅರಿಯದೆ ನೀರು ಸೇವಿಸಿದ್ದ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕರ್ಕಿ ಕಳ್ಳಿ ಮತ್ತು ಮಡಿಕಲ್ ಎನ್ನುವ ಪ್ರದೇಶದಲ್ಲಿನ ಗ್ರಾಮಸ್ಥರು ಸಂಪೂರ್ಣ ಅಸ್ವಸ್ಥರಾಗಿದ್ದಾರೆ. ಕಾಸಿನಾಡಿ ಎಂಬಲ್ಲಿರುವ ನೀರಿನ ಟ್ಯಾಂಕ್‌ನಿಂದ ಬಂದ ನೀರು ಕುಡಿದು ಅಸ್ವಸ್ಥರಾಗಿರುವುದಾಗಿ ತಿಳಿದುಬಂದಿದೆ.
ಕರ್ಕಿಕಳಿಯಲ್ಲಿ ಹಾಗೂ ಮಡಿಕಲ್ ಎಂಬಲ್ಲಿನ ಸುಮಾರು 150ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ವಾರ್ಡ್‌ನ ಪ್ರತಿ ಮನೆಯಲ್ಲೂ ಮೂರಕ್ಕೂ ಅಧಿಕ ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.
80 ವರ್ಷದ ವಯೋವೃದ್ಧರಿಗೆ ರಕ್ತಭೇದಿಯಾಗಿ, ಗಂಭೀರಗೊಂಡಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕಿದ್ದಾರೆ. “ಟ್ಯಾಂಕ್‌ನಲ್ಲಿದ್ದ ನೀರು ಅಶುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಜನರ ಅಸ್ವಸ್ಥರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಸಿನಾಡಿ ಓವರ್ ಹೆಡ್ ನೀರಿನ ಟ್ಯಾಂಕ್ ನೀರು ಸರಬರಾಜು ಬಂದ್ ಮಾಡಬೇಕು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆಯೂ ಸ್ಥಳೀಯರು ಆಗ್ರಹಿಸಿದ್ದಾರೆ.



