ಕಳೆದ ನಾಲ್ಕು ವರ್ಷಗಳಿಂದ ದುರಸ್ಥಿಯಲ್ಲಿದ್ದ ಬೋಟೊಂದನ್ನು ಧ್ವಂಸಗೊಳಿಸಿದ್ದಲ್ಲದೇ, ಇದರ ಬಗ್ಗೆ ವಿಚಾರಿಸಿ ಬೋಟ್ ಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಾಜ್ (36) ಎಂಬುವವರು ಸಾಯಿ ಶ್ಯಾಮ್ ಹೆಸರಿನ ಬೋಟಿನ ಮಾಲೀಕರಾಗಿದ್ದು, ಜಗದೀಶ್ ಎಂಬುವವರೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರು. ಆರೋಪಿಗಳಾದ ಬಿ ಎನ್ ಅನ್ವರ್ ಮತ್ತು ಸಹಚರರು ಬೋಟನ್ನು ಧ್ವಂಸಗೊಳಿಸಿದ್ದು, ಅವರನ್ನು ವಿಚಾರಿಸಿದಾಗ ಜಗದೀಶ್ ಅವರ ನಿರ್ದೇಶನದ ಮೇರೆಗೆ ಕೃತ್ಯವೆಸಗಿದ್ದಾಗಿ, ನಾಗರಾಜ್ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ದೂರುದಾರರು ಜಗದೀಶ್ ಅವರನ್ನು ಸಂಪರ್ಕಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಬೋಟ್ ಮಾಲೀಕ ನಾಗರಾಜ್, “ಸಾಯಿ ಶ್ಯಾಮ್ ಫಿಶಿಂಗ್ ಬೋಟ್ನ್ನು ಉದ್ಯಾವರದ ನಿವಾಸಿ ಜಗದೀಶ್ ಕೆ ಅಮೀನ್ ರವರು ನನ್ನ ಜೊತೆ ಪಾಲುದಾರಿಕೆಯ ಮೂಲಕ ಪಿಶಿಂಗ್ ನಡೆಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಬೋಟಿನ ಮೂಲಕ ಮೀನುಗಾರಿಕೆ ನಡೆಸುತ್ತಿದ್ದೆವು. ಕಳೆದ 4 ವರ್ಷಗಳ ಹಿಂದೆ ಬೋಟ್ ದುರಸ್ತಿಗೆ ಬಂದಿತ್ತು. ಹಾಗಾಗಿ ಅದನ್ನು ಮಲ್ಪೆಯ ಬಾಪುತೋಟದ ದಕ್ಕೆಯಲ್ಲಿ ಇರಿಸಲಾಗಿತ್ತು” ಎಂದು ಹೇಳಿದರು.
“ಕಳೆದ ಜನವರಿ 11ರಂದು ಮಲ್ಪೆ ಬಾಪುತೋಟದಲ್ಲಿ ಸಂಜೆ ವೇಳೆಗೆ ಸ್ನೇಹಿತರೊಬ್ಬರು ನನಗೆ ದೂರವಾಣಿ ಕರೆ ಮಾಡಿ. ನಿಮ್ಮ ಬೋಟನ್ನು ಯಾರೋ 5 ಮಂದಿ ಧ್ವಂಸಗೊಳಿಸುತ್ತಿದ್ದಾರೆಂದು ತಿಳಿಸಿದ್ದರು. ಆ ಕೂಡಲೇ ಜಾಗಕ್ಕೆ ಪ್ರವೇಶಿಸಿದಾಗ ಬೋಟನ್ನು ಮಂಗಳೂರಿನ ಅನ್ವರ್ ಮತ್ತು ಇತರರು ಧ್ವಂಸಗೊಳಿಸುತ್ತಿರುವುದು ತಿಳಿದುಬಂತು. ಇದನ್ನು ನಾನು ವಿರೋಧಿಸಿದಾಗ ನಿಮ್ಮ ಬೋಟನ್ನು ನಿಮ್ಮ ಪಾಲುದಾರ ಜಗದೀಶ್ ಅಮೀನ್ ಒಡೆದು ಹಾಕಲು ಹೇಳಿದ್ದಾರೆಂದು ಅನ್ವರ್ ತಿಳಿಸಿದ್ದ. ಆ ಕೂಡಲೇ ನಾನು ಜಗದೀಶ್ ಅಮೀನ್ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದೆನು. ಅದಕ್ಕೆ ಅವರು ನಿನಗೆ ಈ ವಿಷಯ ಬೇಡ, ನೀನು ಬೋಟಿನ ಸುದ್ದಿಗೆ ಬಂದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದಾನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಜಿಂದಾಲ್ ಕಂಪನಿಗೆ ತುಂಗಭದ್ರಾ ಜಲಾಶಯದಿಂದ ನೀರು; ಸರ್ಕಾರದ ವಿರುದ್ಧ ರೈತ ಸಂಘ ಕಿಡಿ
“ಸದ್ಯ ನನ್ನ ಮೌಲ್ಯಯುತ ಬೋಟನ್ನು ಮಂಗಳೂರಿನ ಅನ್ವರ್ ಮತ್ತು ಇತರ ನಾಲ್ಕು ಮಂದಿ ಅಕ್ರಮವಾಗಿ ಧ್ವಂಸಗೊಳಿಸಿದ್ದು, ಗುಜಿರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಪಾಲುದಾರ ಜಗದೀಶ್ ಅಮೀನ್ ಕುಮ್ಮಕ್ಕು ನೀಡಿ ನಮಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರ ನೀಡಿದ್ದೇನೆ” ಎಂದು ತಿಳಿಸಿದರು.
