ಉಡುಪಿ ಜಿಲ್ಲೆಯ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಿಲುಗಡೆ ಪಡೆದ ರೈಲಿನ ಬೋಗಿಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಯಾಣಿಕನೋರ್ವ ಜಿಲ್ಲಾಸ್ಪತ್ರೆಗೆ ಸಾಗಿಸಿದ ಬಳಿಕ, ಸಾವನ್ನಪ್ಪಿರುವುದು ವೈದ್ಯರ ಪರೀಕ್ಷೆಯಿಂದ ದೃಢಪಟ್ಟಿದೆ.
ಈ ಘಟನೆಯು ಶುಕ್ರವಾರ ನಡೆದಿದ್ದು, ಮೃತದೇಹವನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಕೇಂದ್ರದಲ್ಲಿ ಇಡಲಾಗಿದೆ. ಮೃತ ವ್ಯಕ್ತಿಯ ವಾರಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಪೊಲೀಸರು ಸೂಚನೆ ನೀಡಿದ್ದಾರೆ.
ಬೆಂಗಳೂರಿನಿಂದ ಕಾರವಾರ ತೆರಳುವ ರೈಲು ಫ್ಲಾಟ್ ಫಾರ್ಮ್ ಸಂಖ್ಯೆ ಒಂದರಲ್ಲಿ ನಿಲುಗಡೆ ಪಡೆದಿತ್ತು. ಸ್ಥಳ ಸಂಖ್ಯೆ 23 ರಲ್ಲಿದ್ದ ಬೋಗಿಯೊಳಗೆ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಗಮನಿಸಿದ ಡಾ. ಸ್ಟಿವನ್ ಜಾರ್ಜ್ ಎಂಬುವವರು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡುವರ ನೆರವು ಪಡೆದಿದ್ದರು.

ರೈಲ್ವೆ ಇನ್ಸ್ಪೆಕ್ಟರ್ ಮಧುಸೂಧನ್ ಸಮಕ್ಷಮದಲ್ಲಿ ಸಮಾಜ ಸೇವಕ ನಿತ್ಯಾನಂದ ಅವರು, ಯೋಗಿಶ್, ಗಣೇಶ್, ಮಂಜುನಾಥ, ಶ್ರೀಲತಾ ಅವರ ಸಹಕಾರದಿಂದ ಬೋಗಿಯೊಳಗಿನಿಂದ ವ್ಯಕ್ತಿಯನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದು ದೃಢೀಕರಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಮರಕುಂಬಿ ಪ್ರಕರಣ; ಜೀವಾವಧಿ ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಓರ್ವ ಅಪರಾಧಿ ಸಾವು
ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ. ಸಾವಿಗೆ ಕಾರಣ ತಿಳಿದುಬಂದಿಲ್ಲ. ವೈದ್ಯಕೀಯ ಮರಣೋತ್ತರ ಪರೀಕ್ಷೆಯಿಂದ ಇನ್ನಷ್ಟೆ ತಿಳಿಯಬೇಕಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
