ಕಳೆದ ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಶಾಸಕ, ಸಂಸದರುಗಳು ಮತೀಯ ಧರ್ಮರಾಜಕಾರಣಕ್ಕೆ ಅಬ್ಬರಿಸುತ್ತಿರುತ್ತಾರೆಯೇ ಹೊರತು ಬ್ರಹ್ಮಾವರ, ಪಾಂಗಳ, ಮಲ್ಪೆ, ಕಟ್ ಬೆಳ್ತೂರು, ಗುಲ್ವಾಡಿ ನದಿ ತಟದಲ್ಲಿ ಬದುಕ್ಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು, ಮಹಿಳೆಯರ ಮೇಲಿನ ದೈಹಿಕ ಹಲ್ಲೆಗಳಿಗೆ ಕನಿಷ್ಟ ಸ್ಪಂದಿಸುವುದಿಲ್ಲ ಎಂದು ಡಿವೈಎಫ್ಐ ರಾಜ್ಯ ಮುಖಂಡ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಗೌರವ ಸಲಹೆಗಾರ ಸಂತೋಷ್ ಬಜಾಲ್ ಆರೋಪಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ಮನೆ ನಿವೇಶನ ಸಹಿತ ಹಲವು ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿದರು.
“ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೆಕ್ಯಾತ ಸಮುದಾಯಗಳು ಅಲೆಮಾರಿಯಾಗಿ ಬದುಕುತ್ತಿರುವ ಕಾರಣಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯಗಳ ಮೇಲಕ್ಕೆತ್ತಲು ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮಗಳು ಹೆಸರಿಗಷ್ಟೇ ಇವೆಯೇ ಹೊರತು ಆದ್ಯತೆಯಲ್ಲಿ ಇವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ” ಎಂದು ಆರೋಪಿಸಿದರು.
“ಶಿಳ್ಳೆಕ್ಯಾತ ಸಮುದಾಯಗಳು ಬದುಕುತ್ತಿರುವ ಗುಡಿಸಲಿಗೊಮ್ಮೆ ಶಾಸಕರು, ಸಂಸದರು ಮತ್ತು ಜಿಲ್ಲಾಡಳಿದ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕು. ಸ್ಥಳೀಯವಾಗಿ ಪ್ರತಿ ಬಾರಿ ದೌರ್ಜನ್ಯಕ್ಕೊಳಗಾಗುವ ಈ ಸಮುದಾಯಗಳ ಗುಡಿಸಲಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಪೋಲೀಸ್ ಇಲಾಖೆ ಮಾತ್ರ ತಪ್ಪಿತಸ್ಥ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಬಂಧಿಸದೆ ತಾರತಮ್ಯ ಎಸಗಿರುವುದು ಕುಂದಾಪುರ ಪೊಲೀಸರ ನಡೆ ಖಂಡನೀಯ” ಎಂದು ದೂರಿದರು.
“ಜಿಲ್ಲಾಡಳಿತ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯ ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಲವು ಹಂತದ ಹೋರಾಟ ನಡೆಸಲಿದ್ದೇವೆ” ಎಂದು ಎಚ್ಚರಿಸಿದರು.
ಗೌರವಾಧ್ಯಕ್ಷ ಕವಿರಾಜ್ ಎಸ್ ಕಾಂಚನ್ ಮಾತನಾಡಿ, “ಗಂಗೊಳ್ಳಿ ಕಡೆಯಿಂದ ಬಂದು ಹಲ್ಲೆ ನಡೆಸಿರುವ ಆರೋಪಿಗಳನ್ನು ಪೊಲೀಸರ ಬಂಧನದಿಂದ ರಕ್ಷಿಸಲು ಮತ್ತು ನಿರೀಕ್ಷಣಾ ಜಾಮೀನು ಪಡೆಯಲು ಸಹಾಯ ಮಾಡಿದವರಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಲಾಢ್ಯರೂ ಇದ್ದಾರೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ” ಎಂದರು.
ಸಿಐಟಿಯು ಕಾರ್ಮಿಕ ಸಂಘಟನೆ ಜಿಲ್ಲಾ ಮುಖಂಡ ಶಶಿಧರ್ ಗೊಲ್ಲ, ಅಲೆಮಾರಿ ಸಮುದಾಯದ ಮುಖಂಡರಾದ ಶಂಕರ ಗುಲ್ವಾಡಿ, ಹಲ್ಲೆಗೊಳಗಾದ ಮಹಿಳೆ ಜಯಮಾಲ, ದೀಪು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರದಲ್ಲಿ ಸಂಚಾರಿ ಪೊಲೀಸ್ ನಿಷ್ಕ್ರಿಯ: ರಸ್ತೆ ಮಧ್ಯೆಯೇ ವಾಹನ ನಿಲುಗಡೆ; ಹೇಳೋರಿಲ್ಲ, ಕೇಳೋರಿಲ್ಲ!
ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುದೆಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ವೋಹನ್, ನಳಿನಿ ಎಸ್, ಕರಾವಳಿ ವೃತ್ತಿನಿರತ ಅಲೆಮಾರಿ ಸಮುದಾಯದ ರಾಜ್ಯ ಮುಖಂಡರುಗಳಾದ ವೆಂಕಟೇಶ, ಲೋಕೇಶ್ ಇದ್ದರು.
