ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಬೈಕ್, ಕಾರುಗಳನ್ನು ನಿಲುಗಡೆ ಮಾಡುತ್ತಿದ್ದು, ಸಂಚಾರಿ ಪೊಲೀಸರ ನಿಷ್ಕ್ರಿಯತೆ, ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ.
ಹೌದು. ನಗರದ ಬಿಬಿ ರಸ್ತೆ, ಎಂ.ಜಿ.ರಸ್ತೆ, ಬಜಾರ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ವಾಹನ ನಿಲುಗಡೆಗೆ ಸೂಕ್ತ ನಿಯಮಗಳನ್ನು ರೂಪಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ. ಕಾಟಾಚಾರಕ್ಕೆ ಅಲ್ಲಲ್ಲಿ ನಿಂತು ದಂಡ ವಿಧಿಸುತ್ತಿರುವುದು ಕೂಡ ಕಂಡುಬರುತ್ತಿದೆ.
ಅಡ್ಡಾದಿಡ್ಡಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯ ಕಾರಣ ಬಿ.ಬಿ.ರಸ್ತೆ, ಬಜಾರ್ ರಸ್ತೆ, ಎಂ.ಜಿ.ರಸ್ತೆಗಳಲ್ಲಿ ಅಂಗಡಿ ಮಾಲೀಕರು, ಸಾರ್ವಜನಿಕರು ಸದಾ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ.
ರಸ್ತೆ ಮಧ್ಯದವರೆಗೆ ಪಾರ್ಕಿಂಗ್

ನಗರದ ಬಿಬಿ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಹಿಡಿದು ಶನಿಮಹಾತ್ಮ ದೇವಸ್ಥಾನದವರೆಗೆ ನಿತ್ಯ ಎಲ್ಲಿ ನೋಡಿದರೂ ಅಡ್ಡಾದಿಡ್ಡಿಯಾಗಿ ವಾಹನಗಳು ನಿಲ್ಲುತ್ತವೆ. ರಸ್ತೆ ಮಧ್ಯದವರೆಗೆ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಹೇಳೋರು ಕೇಳೋರು ಇಲ್ಲವಾಗಿದ್ದಾರೆ. ಈ ನಿಟ್ಟಿನಲ್ಲಿ ನಗರ ಸಂಚಾರಿ ಪೊಲೀಸರು ಯಾವುದೇ ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ.
ಪೊಲೀಸರ ಮುಂದೆಯೇ ನಿಯಮ ಉಲ್ಲಂಘನೆ
ನಗರದ ಬಿಬಿ ರಸ್ತೆಯಲ್ಲಿ ಎರಡು ಕಡೆ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಆದಾಗ್ಯೂ, ಬಹುತೇಕ ಸಾರ್ವಜನಿಕರು ಟ್ರಾಫಿಕ್ ನಿಯಮಗಳಿಗೆ ಕಿಮ್ಮತ್ತು ಬೆಲೆ ಕೊಡುತ್ತಿಲ್ಲ. ರೆಡ್ ಲೈಟ್ ಇದ್ದರು ಸಿಗ್ನಲ್ ಜಂಪ್ ಮಾಡುತ್ತಿದ್ದಾರೆ. ಪೊಲೀಸರ ಎದುರಲ್ಲೇ ಹೆಲ್ಮೆಟ್ ಧರಿಸದೆ ಬೈಕ್ ಸವಾರರು ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ. ಆಗಾಗ ಕಾಣಿಸಿಕೊಳ್ಳುವ ಪೊಲೀಸರು ಕೆಲವೆಡೆ ನಿಂತು ವಾಹನಗಳನ್ನು ಹಿಡಿದು ದಂಡ ವಿಧಿಸುತ್ತಿರುವುದು ಪೊಲೀಸರ ಕಾಟಾಚಾರದ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಜಾಗದ ಕೊರತೆ
ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳಿಂದ ಪ್ರತಿನಿತ್ಯ ನಗರಕ್ಕೆ ಜನ ಬಂದು ಹೋಗುತ್ತಾರೆ. ಇದರಿಂದ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ವಾಹನ ನಿಲುಗಡೆಗೆ ಜಾಗದ ಕೊರತೆ ಇದೆ. ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ದೀಪಕ್.
ಈ ಕುರಿತು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಚಿಕ್ಕಬಳ್ಳಾಪುರ ಎಸ್‌ಪಿ ಡಿ.ಎಲ್.ನಾಗೇಶ್, “ವಾಹನಗಳ ನಿಲುಗಡೆಗೆ ಜಾಗದ ಸಮಸ್ಯೆ ಇದೆ. ನಗರಸಭೆಗೆ ಪಾರ್ಕಿಂಗ್ ವ್ಯವಸ್ಥೆಗೆ ಮನವಿ ಮಾಡಿದ್ದೇವೆ. ಪಾರ್ಕಿಂಗ್ ಸುವ್ಯವಸ್ಥೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು” ಎಂದು ತಿಳಿಸಿದರು.
“ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಪಾರ್ಕಿಂಗ್‌ಗೆ ಜಾಗದ ಸಮಸ್ಯೆ ಇರುವ ಕಾರಣ ಎಲ್ಲಿ ನಿಲ್ಲಿಸಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಹೆಲ್ಮೆಟ್ ಧರಿಸದೇ ಇರುವವರನ್ನು ಗುರಿಯಾಗಿಸಿಕೊಂಡು ನಿತ್ಯ 80 – 100 ಜನರಿಗೆ ದಂಡ ವಿಧಿಸುತ್ತಿದ್ದೇವೆ. ಇದೇ ರೀತಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ” ಎಂದು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿ ಎಸ್.ಆರ್.ಮಂಜುಳಾ ತಿಳಿಸಿದರು.
ಇದನ್ನು ಓದಿದ್ದೀರಾ? ಕೋಲಾರ | ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತ ವಿದ್ಯಾರ್ಥಿನಿ!
ಒಟ್ಟಾರೆಯಾಗಿ, ನಗರದಲ್ಲಿ ನಿಯಮ ಉಲ್ಲಂಘಿಸಿ ವಾಹನ ಸಂಚಾರ ಮಾಡುವವರಿಗೆ ಮತ್ತು ಎಲ್ಲೆಂದರಲ್ಲಿ ಬೈಕ್ ಪಾರ್ಕಿಂಗ್ ಮಾಡುವವರಿಗೆ ಇಲಾಖೆ ಶಿಸ್ತಿನ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಈಗಲಾದರೂ ಎಚ್ಚೆತ್ತು ಸೂಕ್ತ ಕ್ರಮಕ್ಕೆ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯ ಕುಮಾರ್ ಗಜ್ಜರಹಳ್ಳಿ
ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು