ಎಪಿಎಂಸಿ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಲು ಉಡುಪಿಯ ಎಪಿಎಂಸಿ ರಕ್ಷಣಾ ಸಮಿತಿ ತೀರ್ಮಾನಿಸಿದೆ ಎಂದು ಅದರ ಅಧ್ಯಕ್ಷ ವಿಜಯ್ ಕೊಡವೂರು ಹೇಳಿದರು. ನ್ಯಾಯ ಸಿಗುವವರೆಗೂ ಎಪಿಎಂಸಿ ಮುಂಭಾಗದಲ್ಲಿ ಧರಣಿ ಮಾಡುವುದಾಗಿ ಅವರು ಎಚ್ಚರಿಸಿದರು.
ಉಡುಪಿಯಲ್ಲಿ ಸೋಮವಾರದಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ಐದು ಬೇಡಿಕೆಗಳನ್ನು ಇಟ್ಟುಕೊಂಡು ಈ ಅಹೋ ರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಒಂದು ನಿವೇಶನಕ್ಕೆ ₹8 ಲಕ್ಷ ಲಂಚ ಪಡೆದು ಅಂತಹ 11 ನಿವೇಶನಕ್ಕೆ ₹88 ಲಕ್ಷ ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು” ಎಂದು ಅವರು ಆಗ್ರಹಿಸಿದರು.
“ಕ್ಯಾನ್ಸರ್ ಪೀಡಿತ ವರ್ತಕನಿಂದ ₹250ರ ಪರವಾನಗಿಗಾಗಿ ₹40,000 ಲಂಚ ಪಡೆದ ಅಧಿಕಾರಿಗಳ ಅಮಾನತು ಮಾಡಬೇಕು. ಮರಣ ಹೊಂದಿ 3 ವರ್ಷವಾದರೂ ಆ ವ್ಯಕ್ತಿಯ ಹೆಸರಿನಲ್ಲಿಯೇ ಇಂದಿಗೂ ಗೋಡೌನ್‌ನ ಬಾಡಿಗೆ ಪಡೆಯುತ್ತಿರುವ ಅಧಿಕಾರಿಗಳ ಅಮಾನತು ಮಾಡಬೇಕು. ಕರ್ನಾಟಕದಲ್ಲಿಯೇ ಕೆಟ್ಟ ಎಪಿಎಂಸಿ ಪ್ರಾಂಗಣ ಎಂದು ಹೆಸರಾದ ಉಡುಪಿ ಎಪಿಎಂಸಿಯಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ವಿದ್ಯುತ್, ಶೌಚಾಲಯ, ನೀರು ಮತ್ತು ಸ್ವಚ್ಛತೆ ವ್ಯವಸ್ಥೆ ಮಾಡಿಕೊಡದ ಅಧಿಕಾರಿಗಳನ್ನು ಅಮಾನತು ಮಾಡಬೇಕು” ಎಂದು ಅವರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಎಷ್ಟೇ ಶಿಕ್ಷಣ ಪಡೆದರೂ ಸಂವಿಧಾನಾತ್ಮಕವಾಗಿ ಪ್ರಬುದ್ಧರಾಗುತ್ತಿಲ್ಲ; ಪ್ರೊ. ಚಿನ್ನಸ್ವಾಮಿ ಸೋಸಲೆ ಕಳವಳ
ಕೃಷಿ ಉತ್ಪನ್ನ ಮಾರಾಟಗಾರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ರಮಾಕಾಂತ್ ಕಾಮತ್, ರೈತ ಮೋರ್ಚ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಉಪ್ಪೂರು, ಫಯಾಜ್, ಪ್ರಭುಗೌಡ ಇದ್ದರು.