ಕುಂದಾಪುರ ಗುರುಕುಲ ಶಾಲೆಯ ವಿದ್ಯಾರ್ಥಿನಿ ಕಾರವಾರ ಸಮೀಪದ ಕಾಜೂಬಾಗ್‌ನ ತನ್ವಿ ಪಾಲೇಕರ್(14) ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ವಿದ್ಯಾರ್ಥಿನಿಯ ತಂದೆ ರೋಶನ್ ನಾರಾಯಣ ಪಾಲೇಕರ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಮಗಳು, ಶಾಲೆಯ ಹಾಸ್ಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು. ಜೂ.5ರಂದು ಬೆಳಗಿನ ಜಾವ ಆಕೆ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ಶಾಲೆಯವರು ತಿಳಿಸಿದ್ದರು. ಆದರೆ ನಮಗೆ ಈ ಸಾವಿನ ಬಗ್ಗೆ ಸಂಶಯ ಇದೆ. ಅದರಂತೆ ಕುಂದಾಪುರ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂಬುದಾಗಿ ದೂರು ದಾಖಲಿಸಿದ್ದೇವೆ. ಈ ಕುರಿತು ಪೊಲೀಸರು ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
“ಆಕೆ ಕಟ್ಟಡದ ಮೇಲಿನಿಂದ ಕಾಲು ಜಾರಿ ಬೀಳಲು ಅಥವಾ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. 4.4 ಅಡಿ ಎತ್ತರ ಇರುವ ಆಕೆ ನೆಲದಿಂದ ಏಳು ಅಡಿ ಎತ್ತರದಲ್ಲಿರುವ ಜಾಗದಿಂದ ಹೇಗೆ ಕೆಳಗೆ ಬೀಳಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಆಕೆ ಮನೆಯಿಂದ ತುಂಬಾ ಖುಷಿಯಾಗಿಯೇ ಬಂದಿದ್ದಾಳೆ. ಕಲಿಯುವುದರಲ್ಲಿ ಪ್ರತಿಭಾನ್ವಿತೆ ಹಾಗೂ ಧೈರ್ಯವಂತೆ ಆಗಿದ್ದ ತನ್ವಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳು ಅಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಾಂತಿ-ಭೇದಿ ಪ್ರಕರಣ ಹೆಚ್ಚಳ; ಗಾರವಾಳ ಗ್ರಾಮದಲ್ಲಿ ತೆರೆದ ತಾತ್ಕಾಲಿಕ ಆರೋಗ್ಯ ಕೇಂದ್ರ
ಘಟನೆ ಹಿನ್ನೆಲೆ
ಉಡುಪಿ ಜಿಲ್ಲೆಯ ಕುಂದಾಪುರದ ಗುರುಕುಲ ಶಾಲೆಯ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದ ಘಟನೆ ಜೂನ್ 7ರಂದು ನಡೆದಿತ್ತು.
ಕಾರವಾರದ ರಂಜನ ಪಾಲೇಕರ್ ಎಂಬವರ ಪುತ್ರಿ ತನ್ವಿ(14) ಮೃತ ವಿದ್ಯಾರ್ಥಿನಿ. ತನ್ವಿ ವಕ್ವಾಡಿ ಗ್ರಾಮದ ಗುರುಕುಲ ವಸತಿಶಾಲೆಯ ವಿದ್ಯಾರ್ಥಿನಿಯಾಗಿದ್ದು, ಹಾಸ್ಟೆಲ್ ಕಟ್ಟಡದ 2ನೇ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆಂದು ತಿಳಿದುಬಂದಿತ್ತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿಯ ತಾಯಿ ರಂಜನ ಆರ್ ಪಾಲೇಕರ್, ರಾಘುನಾಕ್, ಜ್ಯೋತಿ, ಈಶ್ವರನಾಕ್, ದತ್ತರಾಮ ನಾಕ್, ಪ್ರಕಾಶ್ ಕಾಮತ್ ಇದ್ದರು.