ಏಷಿಯನ್ ಫಿಷರೀಸ್ ಸೊಸೈಟಿ ಇಂಡಿಯನ್ ಬ್ರಾಂಚ್ ಪ್ರಾಯೋಜಿತ ಪ್ರೊಫೆಸರ್ ಡಾ ಎಂ ಸಿ ನಂದೀಶ-2024 ರಾಷ್ಟ್ರೀಯ ಪುರಸ್ಕಾರವು ಸಾಂಪ್ರದಾಯಿಕ ಮೀನುಗಾರ ಶಿವಶಂಕರ್ ಗುಜ್ಜರಬೆಟ್ಟು ಅವರಿಗೆ ಲಭಿಸಿದೆ.
ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ 13ನೇ ಇಂಡಿಯನ್ ಫಿಷರೀಸ್ ಅಂಡ್ ಅಕ್ವಾಕಲ್ಚರ್ ಪೋರಂನಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ, ಶಿವಶಂಕರ್ ಅವರಿಗೆ ರಾಷ್ಟ್ರೀಯ ಪುರಸ್ಕಾರವನ್ನು ಪ್ರದಾನ ಮಾಡಿ ಗೌರವಿಸಿದರು. ಈ ಪುರಸ್ಕಾರವು ₹25,000 ಸ್ಮರಣಿಕೆ ಹಾಗೂ ಉಲ್ಲೇಖ ಪತ್ರವನ್ನೊಳಗೊಂಡಿದೆ.
ಉಡುಪಿ ಜಿಲ್ಲೆಯ ಕೆಮ್ಮಣ್ಣು ಗುಜ್ಜರಬೆಟ್ಟು ನಿವಾಸಿಯಾಗಿರುವ ಶಿವಶಂಕರ್ ಸುಮಾರು 14 ವರ್ಷಗಳಿಂದ ಆಳಸಮುದ್ರ ಮೀನುಗಾರಿಕೆ ಹಾಗೂ ಉಡುಪಿ ಜಿಲ್ಲೆಯ ಅಳಿವೆ ಪ್ರದೇಶಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹವಾಮಾನ ವೈಪರೀತ್ಯಗಳು ಹಾಗೂ ಹೆಚ್ಚು ಸಂಖ್ಯೆಯ ಯಾಂತ್ರೀಕೃತ ದೋಣಿಗಳ ಕಾರ್ಯಾಚರಣೆಯಿಂದ ಮೀನಿನ ಕ್ಷಾಮ ಉಂಟಾದ ಕಾರಣ, ಸುಸ್ಥಿರ ಜೀವನೋಪಾಯಕ್ಕಾಗಿ ಬದಲಿ ಮಾರ್ಗಗಳನ್ನು ಯೋಚಿಸತೊಡಗಿದರು.
ಅದೇ ಸಮಯಕ್ಕೆ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಗ್ರಾಮದಲ್ಲಿ ಕೈಗೊಂಡ ಪಂಜರ ಮೀನುಕೃಷಿಯ ಪ್ರಾತ್ಯಕ್ಷಿಕೆ ಮತ್ತು ತರಬೇತಿಯ ಮೂಲಕ ಆತ್ಮವಿಶ್ವಾಸವನ್ನು ಪಡೆದ ಇವರು ಪಂಜರ ಮೀನುಕೃಷಿಯನ್ನು ಪ್ರಾರಂಭಿಸಿದರು. ಇವರು ಕರ್ನಾಟಕದಿಂದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮದಡಿ ಪಂಜರ ಮೀನುಕೃಷಿಗೆ ಆಯ್ಕೆಯಾದ 350 ರೈತರಲ್ಲಿ ಒಬ್ಬರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ
ಶಿವಶಂಕರ್ ಅವರ ಶ್ರಮ ಮತ್ತು ಶ್ರದ್ಧೆಯಿಂದ ಪಂಜರ ಮೀನುಕೃಷಿಯಲ್ಲಿ ಹಲವಾರು ಬದಲಾವಣೆ ಹಾಗೂ ಕೊಡುಗೆಗಳನ್ನು ನೀಡಿದ್ದಾರೆ. ಕರ್ನಾಟಕಲ್ಲಿ ಪ್ರಪ್ರಥಮ ಬಾರಿಗೆ ಪಂಜರ ಮೀನುಕೃಷಿಯಲ್ಲಿ ಇಂಡಿಯನ್ ಪೊಂಪಾನೊ ಮೀನಿನ ತಳಿಯ ನಿರ್ವಹಣೆಯನ್ನು ಯಶಸ್ವಿಯಾಗಿಸಿದ ಮೀನು ಕೃಷಿಕ ಎಂಬ ಹಿರಿಮೆಗೆ ಇವರು ಪಾತ್ರರಾಗಿದ್ದಾರೆ.
ಸಮಗ್ರ ಬಹುಸ್ಥರ ಜಲಕೃಷಿ ಮಾದರಿಯಂತೆ ಪಚ್ಚಿಲೆ ಕೃಷಿಯನ್ನು ಪಂಜರ ಮೀನುಕೃಷಿಯ ಜತೆಗೆ ಅಳವಡಿಸಿಕೊಂಡು ಅಧಿಕ ಇಳುವರಿಯೊಂದಿಗೆ ಅಧಿಕ ಲಾಭವನ್ನು ಗಳಿಸಿ ಇತರ ಮೀನುಕೃಷಿಕರಿಗೆ ಮಾದರಿಯಾಗಿದ್ದಾರೆ.
