ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಶನಿವಾರ ತಡರಾತ್ರಿ ಒಬ್ಬ ವಿದ್ಯಾರ್ಥಿನಿ ನೀರು ಪಾಲಾಗಿದ್ದು, ಸಮುದ್ರದಲ್ಲಿ ಸಿಲುಕಿದ್ದ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ.
ಮೂರು ದಿನಗಳ ಹಿಂದೆ ಈ ವಿದ್ಯಾರ್ಥಿನಿಯರು ಮಡಿಕೇರಿಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಉಡುಪಿಗೆ ಹೇಗೆ ಬಂದರು, ಸಮುದ್ರಕ್ಕೆ ಹಾರಿದರೇ? ಆಟವಾಡುತ್ತಿದ್ದಾಗ ನೀರುಪಾಲಾದರೇ ಎಂಬ ವಿವರಗಳು ಲಭ್ಯವಾಗಿಲ್ಲ.
ಮಡಿಕೇರಿಯ ಖಾಸಗಿ ಕಾಲೇಜೊಂದರ ಪ್ರಥಮ ಪಿಯಸಿ ವಿದ್ಯಾರ್ಥಿನಿಯರಾದ ಮಾನ್ಯ ಮೃತಪಟ್ಟ ವಿದ್ಯಾರ್ಥಿನಿ. ಸಮುದ್ರದಲ್ಲಿ ಸಿಲುಕಿದ್ದ ಯಶಸ್ವಿನಿ ಎಂಬ ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ತಡರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ ಈಶ್ವರ ಮಲ್ಪೆ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ಮೇಲಕ್ಕೆತ್ತಿದರು. ಆದರೆ, ಅಷ್ಟು ಹೊತ್ತಿಗೆ ಮಾನ್ಯ ಉಸಿರು ಚೆಲ್ಲಿದ್ದಳು. ಮತ್ತೊಬ್ಬಳು ವಿದ್ಯಾರ್ಥಿನಿ ಯಶಸ್ವಿನಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯಾರ್ಥಿನಿ ಯಶಸ್ವಿನಿ ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು. ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಜೊತೆಯಲ್ಲಿ ಬಂದಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿ. ಅವರು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿತ್ತು. ಅದರ ನಡುವೆಯೇ ಇದೀಗ ದುರಂತ ಸಂಭವಿಸಿದೆ.
ಮಡಿಕೇರಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಮುಂದಿನ ದಾರಿ ಕಾಣದೆ ಮಲ್ಪೆ ತೀರಕ್ಕೆ ಬಂದಿದ್ದಾರೆ. ಅಲ್ಲಿ ಕುಳಿತಿದ್ದಾಗ ಕಡಲ ಅಲೆಗಳಿಗೆ ಸಿಲುಕಿದ್ದಾರೆ. ಒಂದು ಮಾಹಿತಿ ಪ್ರಕಾರ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿದೆ.
ಇವರಿಬ್ಬರೂ ಅಪ್ರಾಪ್ತರಾಗಿದ್ದು, ಯಾವ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮಡಿಕೇರಿ ಭಾಗದಲ್ಲಿ ಮಕ್ಕಳು ಮನೆ ಬಿಟ್ಟು ಹೋಗಿ ಕಣ್ಮರೆಯಾಗುವ ಹಲವಾರು ಘಟನೆಗಳು ನಡೆದಿದ್ದು, ಹೆಚ್ಚಿನವರು ಮರಳಿ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಜುಲೈ 23ರಂದು ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು
ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ಜುಲೈ 23ರಂದು ಕೂಲಿ ಕಾರ್ಮಿಕ ಕುಟುಂಬದ ನಾಲ್ವರು ಬಾಲಕಿಯರು ನಾಪತ್ತೆಯಾದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇವರಲ್ಲಿ ಇಬ್ಬರನ್ನು ಅವರ ಪೋಷಕರು ಶಾಲೆಗೆ ಹೋಗಲೆಂದು ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ಅವರು ಮರಳಿ ಮನೆಗೆ ಬಂದಿರಲಿಲ್ಲ. ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆಂದು ಹೋದವರು ಅಲ್ಲಿಗೂ ಹೋಗದೆ ಕಾಣೆಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯ
ಈ ನಿರ್ದಿಷ್ಟ ಪ್ರಕರಣದಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಯಾಕೆ ಮನೆ ಬಿಟ್ಟು ಬಂದು ಮಲ್ಪೆಗೆ ಹೋದರು ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ.