ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಕೀಯಾ ಶೋರೂಂ ಮುಂಭಾಗದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಾರಿನಲ್ಲಿ ಮಹಿಳೆಯರೂ ಸೇರಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಿಂದ ಗಾಯಗೊಂಡಿದ್ದರು. ಡಿವೈಡರ್ ಮೇಲೇರಿದ ಕಾರು ಕ್ರಾಶ್ ಗಾರ್ಡ್ ಗೆ ಢಿಕ್ಕಿ ಹೊಡೆದು ನಿಂತಿದ್ದು, ಕಾರು ಜಖಂ ಹೊಂದಿದೆ.
ಕಾಪು ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರು ಮಣಿಪಾಲದಿಂದ ಪಡುಬಿದ್ರೆಯತ್ತ ತೆರಳುತ್ತಿತ್ತು. ಗಾಯಗೊಂಡ ಪ್ರಯಾಣಿಕರನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ತನ್ನ ವಾಹನದಲ್ಲಿ ಪಡುಬಿದ್ರೆ ಆಸ್ಪತ್ರೆಯತ್ತ ಕರೆದೊಯ್ದರು.
ಅಪಘಾತದ ಸಂದರ್ಭದಲ್ಲಿ ಈ ರಸ್ತೆ ಮಾರ್ಗದಲ್ಲಿಯೇ ತೆರಳುತ್ತಿದ್ದ ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿಯವರು ಗಾಯಾಳುಗಳ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವಲ್ಲಿ ನೆರವಾದರು. ಅಪಘಾತಕ್ಕೀಡದವರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕಾರದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
