ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಮುಖಂಡ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಿತೇಶ್ ಮತ್ತು ನಿಝಾಮ್ ಯಾನೆ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಗುತ್ತಿಗೆದಾರನೊಂದಿಗೆ ಆಪ್ತ ಸಂಪರ್ಕ ಹೊಂದಿದ್ದ ಜಿತೇಶ್, ಅವರ ಖಾಸಗಿ ಕ್ಷಣಗಳ ವೀಡಿಯೊ ಮತ್ತು ಫೋಟೋಗಳನ್ನು ಗುಪ್ತವಾಗಿ ಚಿತ್ರೀಕರಿಸಿ 2024ರಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಬಳಿಕ ಗುತ್ತಿಗೆದಾರನಿಗೆ ನೆರವು ನೀಡುವ ನೆಪದಲ್ಲಿ ಬಂದಿದ್ದ ನಿಝಾಮ್ ಕೂಡ ಜಿತೇಶ್ ಜೊತೆ ಸೇರಿ ಹಣ ವಸೂಲಿಗೆ ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಡೆತ್‌ನೋಟ್‌ನಲ್ಲಿ ನಿಮ್ಮ ಹೆಸರು ಇದೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಗುತ್ತಿಗೆದಾರನಿಂದ ಒಟ್ಟು ಸುಮಾರು ₹2.57 ಕೋಟಿ ಹಣ ವಸೂಲಿ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ ಜಿತೇಶ್ ನಗರದಲ್ಲಿ ಜೀವಂತವಾಗಿರುವುದನ್ನು ಕಂಡ ಗುತ್ತಿಗೆದಾರ, ತಾನು ಮೋಸ ಹೋಗಿರುವುದನ್ನು ಅರಿತು ಉರ್ವ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ನಡುವೆ, ಆರೋಪ ಎದುರಿಸುತ್ತಿರುವ ನಿಝಾಮ್ ವಿರುದ್ಧ ಪಕ್ಷದ ಶಿಸ್ತು ಹಾಗೂ ಗೌರವಕ್ಕೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ನವಾಝ್ ತಿಳಿಸಿದ್ದಾರೆ.
ಇನ್ನೊಂದೆಡೆ, ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಬಿಜೆಪಿ ಯುವ ಮೋರ್ಚಾ ಆಗ್ರಹಿಸಿದೆ. ಪ್ರಕರಣದ ಹಿಂದೆ ಬೇರೆ ಪ್ರಭಾವಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವಿದೆಯೇ ಎಂಬುದನ್ನೂ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಒತ್ತಾಯಿಸಿದ್ದಾರೆ.







