ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಗಳಾಗಬೇಕೇ ಹೊರತು ದ್ವೇಷ, ತಾರತಮ್ಯ ಮತ್ತು ಅವಹೇಳನ ಹರಡುವ ಸಾಧನಗಳಾಗಬಾರದು. ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಟ್ರೋಲ್ ಕೇವಲ ಒಂದು ಸಮುದಾಯದ ವಿರುದ್ಧದ ದಾಳಿಯಲ್ಲ, ಸಮಾನತೆ, ಮಾನವೀಯತೆ ಮತ್ತು ಸಂವಿಧಾನದ ಮೌಲ್ಯಗಳ ಮೇಲಿನ ದಬ್ಬಾಳಿಕೆಯಾಗಿದೆ. ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಜತೆಗೆ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಹಕ್ಕುಗಳನ್ನು ಕಾಪಾಡುವುದು ಪ್ರಜಾಪ್ರಭುತ್ವದ ನಿಜವಾದ ಶಕ್ತಿ.
ನವದೆಹಲಿ ಜಂತರ್ ಮಂತರ್ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಪ್ರತಿಭಟನೆಯ ಉದ್ದೇಶಕ್ಕಿಂತಲೂ, ಅದರಲ್ಲಿ ಭಾಗವಹಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಅವಹೇಳನಕಾರಿ ಟ್ರೋಲ್ಗಳಾಗಿದ್ದವು. ಹಾಗಾದರೆ ಲಿಂಗತ್ವ ಅಲ್ಪಸಂಖ್ಯಾತರು ಅವರ ಹಕ್ಕುಗಳಿಗಾಗಿ ಪ್ರತಿಭಟಿಸಬಾರದೇ? ಎಂಬ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ನೀಟ್, ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ನಡೆದ ಈ ಪ್ರತಿಭಟನೆಯಲ್ಲಿ ಹಲವು ವರ್ಗಗಳ ಜನರು ಪಾಲ್ಗೊಂಡಿದ್ದರು. ಅವರಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಸದಸ್ಯರೂ ಇದ್ದರು. ಆದರೆ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಕೆಲವು ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಪುಟಗಳು ಹೋರಾಟದ ವಿಷಯವನ್ನು ಬಿಟ್ಟು ತೃತೀಯಲಿಂಗಿಗಳನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರು ಮನುಷ್ಯರಲ್ಲವೇ? ಅವರಿಗೆ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವ ಹಕ್ಕು ಇಲ್ಲವೇ? ಅವರು ನಾಗರಿಕರಲ್ಲವೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ಸಂವಿಧಾನ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿರುವಾಗ, ಲಿಂಗ ಗುರುತಿನ ಆಧಾರದ ಮೇಲೆ ಯಾರನ್ನಾದರೂ ಅವಮಾನಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಟ್ರೋಲ್ ಮಾಡಿದವರ ವಿರುದ್ಧ ಅನೇಕರು ಛೀಮಾರಿ ಹಾಕಿದ್ದಾರೆ. ಆದರೆ ಇವರಿಗೆ ಮಾನ ಮರ್ಯಾದೆ, ಕೊನೆಯ ಪಕ್ಷ ಮಾನವೀಯತೆಯೂ ಇಲ್ಲದಂತಾಗಿರುವುದು ವಿಪರ್ಯಾಸವಾಗಿದೆ.
ದೀಪು ಭಾರತೀಯ, Harish Hiremath, ಹುಬ್ಬಳ್ಳಿ ಹೈದಾ, ಕೇಶವ ರಾಮ, ಅವರ ಫೇಸ್ಬುಕ್ ಪೇಜ್ಗಳಲ್ಲಿ ಹಾಗೂ circleofbillions ಮತ್ತು meragaonmerabharat ಇನ್ಸ್ಟಾಗ್ರಾಮ್ ಪೇಜ್ಗಳಲ್ಲಿ ಇದೇ ರೀತಿಯ ಅನೇಕ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಜಂತರ್ ಮಂತರ್ ಹೋರಾಟದಲ್ಲಿ ಭಾಗಿಯಾಗಿದ್ದ ಅಲ್ಪಸಂಖ್ಯಾತರಿಗೆ ಅವಮಾನವಾಗುವ ರೀತಿಯಲ್ಲಿ ಟ್ರೋಲ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಹೋರಾಟ ಮಾಡುವುದು ಅವರ ಹಕ್ಕು ಎಂದು ಹಲವರು ಈ ಪೇಜ್ಗಳಿಗೆ ಛೀಮಾರಿ ಹಾಕಿದ್ದಾರೆ.
ಜೈ ಶ್ರೀರಾಮ್ ಎನ್ನುವ ನಿಮಗೆ ಮಹಾಭಾರತದ ಶಿಖಂಡಿ ಬಗ್ಗೆ ಗೊತ್ತಿಲ್ಲವೇ? ಅರ್ಧನಾರೀಶ್ವರ ಯಾರು ಗೊತ್ತಿಲ್ಲವೇ? ಕೃಷ್ಣನ ಮಗ ಸಾಂಬ ಹೇಗೆ ಜನಿಸಿದ ಎನ್ನುವುದು ಗೊತ್ತಿಲ್ಲವೇ? ರಾಮನು ವನವಾಸ ಮುಗಿಸಿ ಬಂದ ಮೇಲೆ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಿದ ವರಗಳ ಬಗ್ಗೆ ಅರಿವಿಲ್ಲವೇ? ಅರ್ಜುನ ಬೃಹನ್ನಳೆಯ ವೇಷವನ್ನು ಧರಿಸಿದ್ದು ಗೊತ್ತಿಲ್ಲವೇ? ಎಂದು ಟ್ರೋಲ್ ಮಾಡಿದವರನ್ನು ಪ್ರಶ್ನೆ ಮಾಡಿದ್ದಾರೆ.
ಸಮುದಾಯವು ಹಲವು ದಶಕಗಳಿಂದ ಸಮಾಜದಲ್ಲಿ ಮಾನ್ಯತೆ ಮತ್ತು ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಮಹತ್ವದ ವಿಷಯವೊಂದರ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕೆ ಅವರನ್ನು ಹೀಯಾಳಿಸುವುದು ಅವರ ಮೇಲೆ ನಡೆಯುತ್ತಿರುವ ತಾರತಮ್ಯದ ಮತ್ತೊಂದು ಮುಖವಾಗಿದೆ ಎಂಬುದು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಾಗೂ ಹ್ಯುಮಾನಿಟಿ ಫೌಂಡೇಶನ್ನ ಡಾ.ಕಿರಣ ಬೇಡಿ ಮಾತನಾಡಿ, “ನಾವು ಭಾರತ ಪ್ರಜಾಪ್ರಭುತ್ವದ ಪ್ರಜೆಗಳಾಗಿದ್ದೇವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಪ್ರತಿಯೊಂದು ಹಕ್ಕು ನಮಗೂ ಅನ್ವಯಿಸುತ್ತದೆ. ಯಾವುದೇ ಹೋರಾಟದಲ್ಲಿ ಭಾಗವಹಿಸುವುದು ಯಾರಾದರೂ ಕೊಟ್ಟಿರುವ ಹಕ್ಕಲ್ಲ, ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕು. ದೇಶದ ಯಾವುದೇ ವಿಚಾರದ ಬಗ್ಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಂಪೂರ್ಣ ಹಕ್ಕು ನಮಗಿದೆ” ಎಂದು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಟ್ರೋಲ್ ಮಾಡುವವರನ್ನು ಖಂಡಿಸಿದರು.
“ನಮ್ಮ ಸಮುದಾಯದ ಜನರು ಯಾವುದೇ ಹೋರಾಟದಲ್ಲಿ ಭಾಗವಹಿಸಿದರೆ ಅದನ್ನು ಸ್ವಾಗತಿಸುವ ಬದಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದು ಬೇಸರದ ಸಂಗತಿ. ನಮ್ಮ ಬಗ್ಗೆ ಇರುವ ದೃಷ್ಟಿಕೋನ ಬದಲಾಗಬೇಕು. ನಮ್ಮನ್ನು ಸಮಾನ ನಾಗರಿಕರಾಗಿ ಕಾಣದಿರುವುದರಿಂದಲೇ ನಾವು ಇಂದಿಗೂ ತಾರತಮ್ಯ ಮತ್ತು ಸಾಮಾಜಿಕ ಕಳಂಕವನ್ನು ಎದುರಿಸುತ್ತಿದ್ದೇವೆ” ಎಂದು ಹೇಳಿದರು.

“ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮತ್ತು ಅವಮಾನಕಾರಿ ಮನೋಭಾವ ಹರಡುವ ಕೆಲ ಸಾಮಾಜಿಕ ಮಾಧ್ಯಮ ಖಾತೆಗಳು ಹಾಗೂ ಪುಟಗಳು ಸಮಾಜದಲ್ಲಿ ಮತ್ತಷ್ಟು ತಾರತಮ್ಯಕ್ಕೆ ಕಾರಣವಾಗುತ್ತಿವೆ. ಇಂತಹ ಕಳಂಕ ಮತ್ತು ಅಸಮಾನತೆ ಹುಟ್ಟಲು ಇದೇ ರೀತಿಯ ಮನಸ್ಥಿತಿಯ ಜನರೇ ಕಾರಣಕರ್ತರಾಗಿದ್ದಾರೆ. ಭಿನ್ನಾಭಿಪ್ರಾಯ ಇದ್ದರೆ ವಿಚಾರದ ಮಟ್ಟದಲ್ಲಿ ಚರ್ಚೆ ಮಾಡಲಿ, ಆದರೆ ವ್ಯಕ್ತಿಯ ಲಿಂಗ ಗುರುತನ್ನು ಆಧರಿಸಿ ಅವಮಾನಿಸುವುದು ಸರಿಯಲ್ಲ” ಎಂದು ಕಿರಣ ಆಕ್ರೋಶ ವ್ಯಕ್ತಪಡಿಸಿದರು.
“ಲಿಂಗತ್ವ ಅಲ್ಪಸಂಖ್ಯಾತರು ಈ ದೇಶದ ಸಮಾನ ಹಕ್ಕುಗಳನ್ನು ಹೊಂದಿರುವ ನಾಗರಿಕರು. ನಮ್ಮ ಹೋರಾಟವನ್ನು ಪ್ರಶ್ನಿಸುವ ಮುನ್ನ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದಲ್ಲಿ ಗೌರವ, ಸಮಾನತೆ ಮತ್ತು ಮಾನವೀಯತೆ ಬೆಳೆಯಬೇಕಾದರೆ ಇಂತಹ ಟ್ರೋಲ್ ಮನೋಭಾವ ಅಂತ್ಯಗೊಳ್ಳಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಹೋರಾಟದ ಉದ್ದೇಶ, ಬೇಡಿಕೆ ಅಥವಾ ರಾಜಕೀಯ ನಿಲುವನ್ನು ಟೀಕಿಸುವುದು ಸಹಜ. ಆದರೆ, ಪ್ರತಿಭಟನೆಯಲ್ಲಿ ಭಾಗವಹಿಸಿದವರ ಲಿಂಗ ಗುರುತನ್ನು ಆಧರಿಸಿ ಅವಮಾನಿಸುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರ ಅಭಿಪ್ರಾಯವಾಗಿದೆ.
ಇದನ್ನೂ ಓದಿದ್ದೀರಾ? ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ: ಅಹೋರಾತ್ರಿ ಧರಣಿ ಕೂತ ಕಾಂಗ್ರೆಸ್
ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಗಳಾಗಬೇಕೇ ಹೊರತು ದ್ವೇಷ, ತಾರತಮ್ಯ ಮತ್ತು ಅವಹೇಳನ ಹರಡುವ ಸಾಧನಗಳಾಗಬಾರದು. ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಟ್ರೋಲ್ ಕೇವಲ ಒಂದು ಸಮುದಾಯದ ವಿರುದ್ಧದ ದಾಳಿಯಲ್ಲ, ಸಮಾನತೆ, ಮಾನವೀಯತೆ ಮತ್ತು ಸಂವಿಧಾನದ ಮೌಲ್ಯಗಳ ಮೇಲಿನ ದಬ್ಬಾಳಿಕೆಯಾಗಿದೆ. ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಜತೆಗೆ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಹಕ್ಕುಗಳನ್ನು ಕಾಪಾಡುವುದು ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಎಂಬುದನ್ನು ಸಮಾಜ ಅರಿತುಕೊಳ್ಳಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




