ಪಶ್ಚಿಮ ಬಂಗಾಳದಲ್ಲಿ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ಬಹುದೊಡ್ಡ ಆಘಾತ ಎದುರಾಗಿದೆ. ಪಕ್ಷದ ಪ್ರಮುಖ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಸುಶ್ಮಿತಾ ದೇವ್ ಅವರು ಬುಧವಾರ ತಮ್ಮ ಸಂಸತ್ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ರಾಜ್ಯಸಭಾ ಸಭಾಪತಿಗೆ ಪತ್ರ ಬರೆದಿರುವ ಅವರು, ತಮ್ಮ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಕೇವಲ ಒಂದು ವಾರದ ಅಂತರದಲ್ಲಿ ಟಿಎಂಸಿ ತೊರೆಯುತ್ತಿರುವ ಎರಡನೇ ರಾಜ್ಯಸಭಾ ಸದಸ್ಯೆ ಇವರಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದೊಳಗಿನ ಆಂತರಿಕ ಭಿನ್ನಮತವನ್ನು ಇದು ಸಂಪೂರ್ಣವಾಗಿ ಬಹಿರಂಗಪಡಿಸಿದೆ.
ಇದನ್ನು ಓದಿದ್ದೀರಾ? ಡಿಎಂಕೆ ಹೊಸ ದಾಳ: ಎದ್ದು ನಿಲ್ಲುತ್ತಾ ತೃತೀಯ ರಂಗ?
ಕೆಲವೇ ದಿನಗಳ ಹಿಂದಷ್ಟೇ, ಜೂನ್ 8ರಂದು ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ರಾಜೀನಾಮೆ ನೀಡಿದ್ದರು. ಸತತ ಎರಡು ರಾಜೀನಾಮೆಗಳು ಪಕ್ಷದ ನಾಯಕತ್ವಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷದಲ್ಲಿ ಭಾರಿ ಬಂಡಾಯ ಭುಗಿಲೆದ್ದಿದೆ. ವರದಿಗಳ ಪ್ರಕಾರ, ಸುಮಾರು 20ಕ್ಕೂ ಹೆಚ್ಚು ಲೋಕಸಭಾ ಸಂಸದರು ಹಾಗೂ 58ಕ್ಕೂ ಹೆಚ್ಚು ಶಾಸಕರು ಪಕ್ಷದ ವಿರುದ್ಧ ಸಿಡಿದೆದ್ದಿದ್ದು, ಬಂಡಾಯ ನಾಯಕ ಋತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತಿದ್ದಾರೆ.
ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದೆಯಾಗಿದ್ದ ಸುಶ್ಮಿತಾ ದೇವ್, 2019ರ ಚುನಾವಣೆಯಲ್ಲಿ ಸೋತ ಬಳಿಕ 2021ರಲ್ಲಿ ಟಿಎಂಸಿ ಸೇರಿದ್ದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದ ಅವರು, ಟಿಎಂಸಿಯಲ್ಲಿ ರಾಷ್ಟ್ರೀಯ ವಕ್ತಾರೆಯಾಗಿ ಗುರುತಿಸಿಕೊಂಡು ರಾಜ್ಯಸಭೆ ಪ್ರವೇಶಿಸಿದ್ದರು. ಇದೀಗ ದಿಢೀರ್ ರಾಜೀನಾಮೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಜೀನಾಮೆ ಬೆನ್ನಲ್ಲೇ ಇಂದು ಬೆಳಗ್ಗೆ ನವದೆಹಲಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿರುವ ಅವರು, ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.





