ಸೋನಮ್ ವಾಂಗ್ಚುಕ್ ತಮ್ಮನ್ನು ತಾವು ‘ಗೌರವಾನ್ವಿತ ಜಿರಳೆ’ ಎಂದು ಕರೆಯುತ್ತಿದ್ದಂತೆ ಲಡಾಖ್ ಉಪರಾಜ್ಯಪಾಲ ವಿ ಕೆ ಸಕ್ಸೇನಾ, ಸೋನಮ್ಗೆ ಎಚ್ಚರಿಕೆ ನೀಡಲು ಆರಂಭಿಸಿದ್ದಾರೆ. ಸಕ್ಸೇನಾ ಮತ್ತು ಸೋನಮ್ ಸೌಹಾರ್ದಯುತ ಚಹಾ ಸಭೆ ನಡೆಸಿದ್ದಾರೆ. ಅದಾದ ಬಳಿಕ ಉಪರಾಜ್ಯಪಾಲರು ಸಾಮಾಜಿಕ ಜಾಲತಾಣ ‘X’ ನಲ್ಲಿ ವಾಂಗ್ಚುಕ್ ಅವರಿಗೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಈ ಚಳವಳಿಯು ಇಂದಿಗೂ ಹಲವು ಸಮಸ್ಯೆಗಳತ್ತ ಬೆರಳು ಮಾಡುತ್ತಿದೆ. ಈ ವಿನೂತನ ಹೋರಾಟಕ್ಕೆ ಬೆಂಬಲ ನೀಡಿದವರಲ್ಲಿ ಪರಿಸರವಾದಿ, ಲಡಾಖ್ ಜನರ ಹಕ್ಕುಗಳ ಹೋರಾಟಗಾರ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸೋನಮ್ ವಾಂಗ್ಚುಕ್ ಕೂಡಾ ಒಬ್ಬರು. ಇತ್ತೀಚೆಗೆ ವಾಂಗ್ಚುಕ್ ತಮ್ಮನ್ನು ತಾವು ‘ಗೌರವಾನ್ವಿತ ಜಿರಳೆ’ ಎಂದು ಕರೆದುಕೊಂಡಿದ್ದರು.
ಆದರೆ ಈಗಾಗಲೇ ಲಡಾಖ್ ಹೋರಾಟದ ವಿಚಾರದಲ್ಲಿ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಬಂಧನಕ್ಕೆ ಒಳಗಾಗಿ ಬಿಡುಗಡೆಗೊಂಡಿರುವ ಸೋನಮ್ ಕಡೆ ಮತ್ತೆ ಕೇಂದ್ರ ಸರ್ಕಾರದ ದೃಷ್ಟಿ ಹಾಯ್ದಿದೆ. ಕೇಂದ್ರದ ಭಾಗವಾಗಿ ಲಡಾಖ್ ಉಪರಾಜ್ಯಪಾಲ (LG) ವಿ ಕೆ ಸಕ್ಸೇನಾ ಸೋನಮ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ನಾನು ‘ಗೌರವಾನ್ವಿತ ಜಿರಳೆ’ ಎಂದ ಸೋನಮ್: ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವ್ಯವಸ್ಥೆಯನ್ನು ಪ್ರಶ್ನಿಸುವ ನಿರುದ್ಯೋಗಿ ಯುವಕರನ್ನು ಜಿರಳೆ ಎಂದು ಕರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ನಕಲಿ ಪದವಿ ಪಡೆಯುವವರನ್ನು ಉದ್ದೇಶಿಸಿ ಹೇಳಿದ್ದಾಗಿ ಸಿಜೆಐ ಹೇಳಿದ್ದಾರೆ. ಆದರೆ ನಿರುದ್ಯೋಗಿ ಯುವಕರು ಜಿರಳೆಗಳಂತೆ ಎಂಬ ಸಿಜೆಐ ಹೇಳಿಕೆ ಆನ್ಲೈನ್ನಲ್ಲಿ ಸಂಚಲನ ಮೂಡಿಸಿದೆ. ಸದ್ಯ ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿ ನಡೆಯುತ್ತಿದೆ.
ದೇಶದಲ್ಲಿ ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಾರ್ವಜನಿಕ ಉತ್ತರದಾಯಿತ್ವದ ಕೊರತೆಯನ್ನು ಖಂಡಿಸಿ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ಆನ್ಲೈನ್ ಆಂದೋಲನ ನಡೆಸುತ್ತಿದ್ದಾರೆ. ಸದಾ ಚೇತರಿಸಿಕೊಳ್ಳುವ ಮತ್ತು ಬದುಕುಳಿಯುವ ಸಾಮರ್ಥ್ಯ ಹೊಂದಿರುವ ‘ಜಿರಳೆ’ಯನ್ನು (Cockroach) ಪ್ರತಿಭಟನೆಯ ಸಂಕೇತವಾಗಿ ಯುವಕರು ಬಳಸುತ್ತಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಈ ಆಂದೋಲನವನ್ನು ಬೆಂಬಲಿಸಿದ್ದ ಸೋನಮ್ ವಾಂಗ್ಚುಕ್, “ನಾನೂ ಕಾಕ್ರೋಚ್ ಜನತಾ ಪಾರ್ಟಿ ಸದಸ್ಯನಾಗಬೇಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ನಾನು ನಿರುದ್ಯೋಗಿಯೂ ಅಲ್ಲ ಅಥವಾ ಸೋಮಾರಿಯೂ ಅಲ್ಲ. ಆದ್ದರಿಂದ ನಾನು ಸದಸ್ಯನಾಗಲು ಅರ್ಹನಲ್ಲ ಎಂಬುದು ದುಃಖಕರ. ಆದರೆ ನಾನು ನನ್ನನ್ನು ‘ಗೌರವಾನ್ವಿತ ಜಿರಳೆ’ (ಹಾನರರಿ ಕಾಕ್ರೋಚ್)” ಎಂದು ಹೇಳಿದ್ದರು. ಹಾಗೆಯೇ ಯುವಕರ ಈ ಸೃಜನಶೀಲ, ಅಹಿಂಸಾತ್ಮಕ ಡಿಜಿಟಲ್ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಬಾರದು ಎಂದು ಮನವಿ ಮಾಡಿದ್ದರು.
ಸೋನಮ್ ವಾಂಗ್ಚುಕ್ ತಮ್ಮನ್ನು ತಾವು ‘ಗೌರವಾನ್ವಿತ ಜಿರಳೆ’ ಎಂದು ಕರೆಯುತ್ತಿದ್ದಂತೆ ಲಡಾಖ್ ಉಪರಾಜ್ಯಪಾಲ ವಿ ಕೆ ಸಕ್ಸೇನಾ, ಸೋನಮ್ಗೆ ಎಚ್ಚರಿಕೆ ನೀಡಲು ಆರಂಭಿಸಿದ್ದಾರೆ. ಸಕ್ಸೇನಾ ಮತ್ತು ಸೋನಮ್ ಸೌಹಾರ್ದಯುತ ಚಹಾ ಸಭೆ ನಡೆಸಿದ್ದಾರೆ. ಅದಾದ ಬಳಿಕ ಉಪರಾಜ್ಯಪಾಲರು ಸಾಮಾಜಿಕ ಜಾಲತಾಣ ‘X’ ನಲ್ಲಿ ವಾಂಗ್ಚುಕ್ ಅವರಿಗೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
“ವಾಂಗ್ಚುಕ್ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಮತ್ತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದರಿಂದ ದೂರವಿರಬೇಕು. ‘ಕಾಕ್ರೋಚ್ ಜನತಾ ಪಾರ್ಟಿ’ಯ ಮೂಲದ ಬಗ್ಗೆ ವಾಂಗ್ಚುಕ್ ಅವರಿಗೇ ಸ್ಪಷ್ಟತೆ ಇಲ್ಲ. ಇದರ ಹಿಂದೆ ವಿದೇಶಿ ಶಕ್ತಿಗಳ ಪಿತೂರಿ ಮತ್ತು ಧನಸಹಾಯವಿರುವ ಶಂಕೆಯಿದೆ. ವಾಂಗ್ಚುಕ್ ಇದರ ಸಂಸ್ಥಾಪಕರ ಉದ್ದೇಶಗಳನ್ನು ಮರುಪರಿಶೀಲಿಸಿ, ತಮ್ಮ ಬೆಂಬಲವನ್ನು ವಾಪಸ್ ಪಡೆಯಲಿದ್ದಾರೆ” ಎಂದು ಎಲ್ಜಿ ಪ್ರತಿಪಾದಿಸಿದ್ದರು!
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್ಚುಕ್ ಮೇಲೆ ಕೇಂದ್ರದ ಕೆಂಗಣ್ಣೇಕೆ?
ಉಪರಾಜ್ಯಪಾಲರ ಈ ಸಾರ್ವಜನಿಕ ಹೇಳಿಕೆಯನ್ನು ಸೋನಮ್ ವಾಂಗ್ಚುಕ್ ಸಂಪೂರ್ಣವಾಗಿ ತಿರಸ್ಕರಿಸಿದ್ದು, ಸಿಜೆಪಿ ಆಂದೋಲನಕ್ಕೆ ತಮ್ಮ ಬೆಂಬಲವನ್ನು ಮತ್ತಷ್ಟು ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದಾರೆ. “ನಮ್ಮ ನಡುವಿನ ಭೇಟಿ ಅತ್ಯಂತ ಸೌಹಾರ್ದಯುತವಾಗಿತ್ತು. ಆದರೆ ಅದಾದ ಒಂದು ಗಂಟೆಯ ನಂತರ ಉಪರಾಜ್ಯಪಾಲರು ನಮ್ಮನ್ನು ಗದರಿಸಿದ ಅಥವಾ ಎಚ್ಚರಿಕೆ ನೀಡಿದ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಬಹುಶಃ ದಿಲ್ಲಿಯಲ್ಲಿರುವ ಅವರ ಬಾಸ್ಗಳನ್ನು (ಕೇಂದ್ರದ ಮೋದಿ ಸರ್ಕಾರ) ಮೆಚ್ಚಿಸಲು ಮಾಡಿದ ಪ್ರದರ್ಶನ ಇರಬಹುದು” ಎಂದು ವಾಂಗ್ಚುಕ್ ವ್ಯಂಗ್ಯವಾಡಿದ್ದಾರೆ.
“ಉಪರಾಜ್ಯಪಾಲರು ಇದಕ್ಕೆ ವಿದೇಶಿ ಲಿಂಕ್ ಇದೆ ಎಂದಾಗ ನನಗೆ ಒಳಗೊಳಗೇ ನಗು ಬಂತು. ಕೆಲವು ತಿಂಗಳುಗಳ ಹಿಂದೆ ಇದೇ ರೀತಿಯ ಕಟ್ಟುಕಥೆಗಳನ್ನು ಕಟ್ಟಿ ನನ್ನನ್ನು ಎನ್ಎಸ್ಎ ಅಡಿಯಲ್ಲಿ ಬಂಧಿಸಲಾಗಿತ್ತು. ಈಗ ಅದೇ ಕಥೆಯನ್ನು ನನಗೇ ಹೇಳುತ್ತಿದ್ದಾರೆ. ನಾನು ಕಾಕ್ರೋಚ್ ಪಾರ್ಟಿಯ ದೊಡ್ಡ ಅಭಿಮಾನಿ. ನಾನು ಎಂದಿಗೂ ‘ಗೌರವಾನ್ವಿತ ಜಿರಳೆ’ ಆಗಿಯೇ ಉಳಿಯುತ್ತೇನೆ” ಎಂದು ಪುನರುಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಗುರು ಹೇಳಿಕೆಗಳಿಗೂ ಪರೋಕ್ಷ ಟಾಂಗ್ ನೀಡಿದ್ದಾರೆ. “ಒಂದು ವೇಳೆ ಈ ಆಂದೋಲನದ ಶೇ.70ರಷ್ಟು ಬೆಂಬಲಿಗರು ಭಾರತದ ಯುವಕರಾಗಿದ್ದು, ಉಳಿದವರು ವಿದೇಶದಲ್ಲಿದ್ದರೆ, ಸೃಜನಶೀಲ ಪ್ರತಿಭಟನೆಯ ವಿಷಯದಲ್ಲಿ ಭಾರತ ನಿಜಕ್ಕೂ ‘ವಿಶ್ವಗುರು’ ಎಂದು ಹೆಮ್ಮೆಯಿಂದ ಹೇಳಬಹುದು” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಹಿಂದೆ ಮೊದಲ ಬಾರಿಗೆ ಸಿಜೆಪಿಯನ್ನು ಬೆಂಬಲಿಸಿದಾಗಲೂ ಸೋನಮ್ ವಿಶ್ವಗುರು ಹೇಳಿಕೆ ನೀಡಿದ್ದರು. “ದೇಶದ ಯುವಕರು ಬೀದಿಗಿಳಿಯುವ ಬದಲು ಡಿಜಿಟಲ್ ಸೃಜನಶೀಲತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಭಾರತವನ್ನು ‘ವಿಶ್ವ ಗುರು’ವನ್ನಾಗಿ ಮಾಡುವ ವಿಷಯವಾಗಿದೆ. ಇದನ್ನು ಸರ್ಕಾರ ಗೌರವಿಸಬೇಕು” ಎಂದಿದ್ದರು.
ಈ ಹಿಂದೆಯೂ ಲಡಾಖ್ಗೆ ವಿಶೇಷ ಸ್ಥಾನಮಾನ ಕೋರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾಗ ವಾಂಗ್ಚುಕ್ ಬಂಧನ ಮಾಡಲಾಗಿತ್ತು. ಈಗ ಮತ್ತೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅದೇ ಮಾದರಿಯಲ್ಲಿ ಬಂಧಿಸುವ ಎಚ್ಚರಿಕೆಯನ್ನು ಉಪರಾಜ್ಯಪಾಲರು ನೀಡಿರುವಂತಿದೆ. ಏನೇ ಆದರೂ ತಾವು ಮಾತ್ರ ‘ಗೌರವಾನ್ವಿತ ಜಿರಳೆ’ ಪಟ್ಟ ಬಿಟ್ಟುಕೊಡಲ್ಲ ಎಂದು ಸೋನಮ್ ವಾಂಗ್ಚುಕ್ ಸ್ಪಷ್ಟವಾಗಿ ಹೇಳಿದ್ದಾರೆ.




