ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಸೋಮವಾರ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನಾಲಯದ ಕಾಲೇಜು ಮೈದಾನದಲ್ಲಿ ನಡೆದ ಭವ್ಯ ಪವಿತ್ರ ಸಮಾರಂಭದಲ್ಲಿ ಅಭಿಷಿಕ್ತಗೊಳಿಸಿ ಪೀಠಾರೋಹಣಗೊಳಿಸಲಾಯಿತು.
ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಮುಖ್ಯ ಅಭಿಷೇಕಕರಾಗಿ ಧರ್ಮಾಧ್ಯಕ್ಷರ ಅಭಿಷೇಕ ವಿಧಿ ನೆರವೇರಿಸಿದರು. ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಮತ್ತು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕರಾಗಿ ಭಾಗವಹಿಸಿದರು. ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ ಸೇರಿದಂತೆ 30ಕ್ಕೂ ಹೆಚ್ಚು ಧರ್ಮಾಧ್ಯಕ್ಷರು, 300ಕ್ಕೂ ಅಧಿಕ ಧರ್ಮಗುರುಗಳು, ಅಷ್ಟೇ ಸಂಖ್ಯೆಯ ಧರ್ಮಭಗಿನಿಯರು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 6,000 ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅಭಿಷೇಕ ವಿಧಿಯ ಸಂದರ್ಭದಲ್ಲಿ ಪೋಪ್ ಅವರ ಅಧಿಕೃತ ನೇಮಕಾತಿ ಪತ್ರವನ್ನು ವಾಚಿಸಲಾಯಿತು. ಬಳಿಕ ಪವಿತ್ರ ತೈಲಾಭಿಷೇಕ, ಬೈಬಲ್ ಅನ್ನು ಶಿರ ಮೇಲಿರಿಸಿ ಪ್ರಾರ್ಥನೆ, ಅಧಿಕಾರದ ಉಂಗುರ ಧಾರಣೆ, ಶಿರವಸ್ತ್ರ ಮತ್ತು ದಂಡ ಹಸ್ತಾಂತರ ಸೇರಿದಂತೆ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ನೂತನ ಧರ್ಮಾಧ್ಯಕ್ಷರನ್ನು ಅಧಿಕೃತ ಪೀಠದಲ್ಲಿ ಕುಳ್ಳಿರಿಸಿ ಘೋಷಣೆ ಮಾಡಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಸ್ಟೀವನ್ ಡಿ’ಸೋಜಾ ಅವರು ಪೋಪ್ ಅವರ ಅಧಿಕೃತ ಪತ್ರವನ್ನು ವಾಚಿಸಿದರು. ನಂತರ ಮುಖ್ಯ ಮತ್ತು ಸಹ ಅಭಿಷೇಕಕರರು, ಇತರ ಧರ್ಮಾಧ್ಯಕ್ಷರು ಶಾಂತಿಯ ಸಂಕೇತವನ್ನು ವಿನಿಮಯ ಮಾಡಿಕೊಂಡರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾಲ್ ಸಲ್ಡಾನ್ಹಾ ತಮ್ಮ ಪ್ರವಚನದಲ್ಲಿ, “ಧರ್ಮಾಧ್ಯಕ್ಷರು ದೇವರ ವಾಕ್ಯವನ್ನು ಭಕ್ತರಲ್ಲಿ ಬಿತ್ತುವವರಾಗಿದ್ದು, ಪ್ರೀತಿ ಮತ್ತು ಸೇವೆಯಿಂದ ಜನರನ್ನು ಮುನ್ನಡೆಸಬೇಕು” ಎಂದು ಹೇಳಿದರು.
ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಪ್ರೇಷಿತ ಆಡಳಿತಾಧಿಕಾರಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ಧರ್ಮಾಧ್ಯಕ್ಷರನ್ನು ಗೌರವಿಸಿದರು. ಅಪೊಸ್ತೋಲಿಕ್ ನುನ್ಸಿಯೋ ಲಿಯೋಪೋಲ್ಡೊ ಗಿರೆಲ್ಲಿ ತಮ್ಮ ಆಶೀರ್ವಚನದಲ್ಲಿ ಚರ್ಚ್ ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿ, ನೂತನ ಧರ್ಮಾಧ್ಯಕ್ಷರು ಧರ್ಮಪ್ರಾಂತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಶುಭಹಾರೈಸಿದರು.
ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರು ತಮ್ಮ ಸಂದೇಶದಲ್ಲಿ ಅಪೋಸ್ತಲರ ಉತ್ತರಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿ, ವಂ. ಲೆಸ್ಲಿ ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ಪಾಸ್ಟರಲ್ ಅನುಭವ ಧರ್ಮಪ್ರಾಂತ್ಯದ ಆಧ್ಯಾತ್ಮಿಕ ಬೆಳವಣಿಗೆಗೆ ನೆರವಾಗಲಿದೆ ಎಂದರು.
ತಮ್ಮ ಭಾಷಣದಲ್ಲಿ ನೂತನ ಧರ್ಮಾಧ್ಯಕ್ಷ ವಂ. ಡಾ. ಲೆಸ್ಲಿ ಡಿಸೋಜಾ ಅವರು ದೇವರು, ಕುಟುಂಬ, ಗುರುಗಳು ಮತ್ತು ಭಕ್ತರಿಗೆ ಕೃತಜ್ಞತೆ ಸಲ್ಲಿಸಿ, “ನಾನು ನನ್ನ ಶಕ್ತಿಯಿಂದ ಅಲ್ಲ, ದೇವರ ಮೇಲಿನ ನಂಬಿಕೆಯಿಂದ ಬರುತ್ತಿದ್ದೇನೆ. ನಾವು ಎಲ್ಲರೂ ಸೇರಿ ಪ್ರೀತಿ, ಸೇವೆ ಮತ್ತು ಸತ್ಯದ ಮೇಲೆ ನೆಲೆಗೊಂಡ ಚರ್ಚ್ ನಿರ್ಮಿಸೋಣ” ಎಂದು ಹೇಳಿದರು. ಜೊತೆಗೆ ಉಡುಪಿ ಜಿಲ್ಲೆಯಲ್ಲಿ ಸರ್ವಧರ್ಮ ಸಮನ್ವಯತೆಯನ್ನು ಕಾಪಾಡುವ ಅಗತ್ಯವನ್ನೂ ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ ಸುವರ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರು ರಘುಪತಿ ಭಟ್, ಜೆ.ಆರ್. ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ವಂ. ರೋಶನ್ ಡಿಸೋಜಾ ವಂದಿಸಿದರು. ಧಾರ್ಮಿಕ ವಿಧಿವಿಧಾನಗಳ ನಿರ್ವಹಣೆಯನ್ನು ವಂ. ವಿಲ್ಸನ್ ಡಿಸೋಜಾ ಮತ್ತು ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ವಂ. ಡೆನಿಸ್ ಡೆಸಾ ನೆರವೇರಿಸಿದರು.






