ಉಡುಪಿ ನಗರದ ಪ್ರಸಿದ್ಧ ವಿಟ್ಲ ಪಿಂಡಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಉಡುಪಿ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮಹೋತ್ಸವದ ಭದ್ರತಾ ಕರ್ತವ್ಯಕ್ಕಾಗಿ 1 ಪೊಲೀಸ್ ಅಧೀಕ್ಷಕರು (SP), 1 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 2 ಡಿವೈಎಸ್ಪಿಗಳು, 6 ಪೊಲೀಸ್ ಇನ್ಸ್ಪೆಕ್ಟರ್ಗಳು, 25 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳು, 35 ಸಹಾಯಕ ಸಬ್ಇನ್ಸ್ಪೆಕ್ಟರ್ಗಳು, 186 ಹೆಡ್ ಕಾನ್ಸ್ಟೇಬಲ್ಗಳು, ಪೊಲೀಸ್ ಕಾನ್ಸ್ಟೇಬಲ್ಗಳು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು 50 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೆಚ್ಚುವರಿ ಭದ್ರತೆಗಾಗಿ 1 ಕೆಎಸ್ಆರ್ಪಿ ತುಕಡಿ, 9 ಡಿಎಆರ್ ತುಕಡಿಗಳು, 3 ಅಗ್ನಿಶಾಮಕ ದಳದ ತಂಡಗಳು, 2 ಆಂಬ್ಯುಲೆನ್ಸ್ಗಳು ಹಾಗೂ 3 ಡ್ರೋನ್ ತಂಡಗಳನ್ನು ನಿಯೋಜಿಸಲಾಗಿದೆ.

7 ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆ
ವಿಟ್ಲ ಪಿಂಡಿ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳ ಸುಗಮ ಪಾರ್ಕಿಂಗ್ಗಾಗಿ ನಗರದ ವಿವಿಧೆಡೆ 7 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.
ಎಂ.ಜಿ.ಎಂ. ಮೈದಾನ, ಶ್ರೀಕೃಷ್ಣ ಮಠ ರಾಜಾಂಗಣ ಪಾರ್ಕಿಂಗ್ ಸ್ಥಳ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಪಾರ್ಕಿಂಗ್ ಸ್ಥಳ, ಬೀಡಿನಗುಡ್ಡೆ ಮೈದಾನ, ಬೀಡಿನಗುಡ್ಡೆ ಕ್ರೀಡಾಂಗಣ, ವಿದ್ಯೋದಯ ಶಾಲೆ ಪಾರ್ಕಿಂಗ್ ಸ್ಥಳ, ಮಾಂಡವಿ ರಾಯಲ್ ಗಾರ್ಡನ್ ಪಾರ್ಕಿಂಗ್ ಸ್ಥಳ, 45 ಕಡೆ ಸಿಸಿಟಿವಿ, ಡ್ರೋನ್ ಮೂಲಕ ಕಣ್ಗಾವಲು
ಮಹೋತ್ಸವದ ಸಂದರ್ಭದಲ್ಲಿ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸುವುದರ ಜೊತೆಗೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ. ಇದಕ್ಕಾಗಿ ಅಕ್ಕಪಡೆ ಹಾಗೂ ಸ್ವಯಂಸೇವಕರ ಸಹಕಾರ ಪಡೆಯಲಾಗಿದೆ.
ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 45 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ಕಣ್ಗಾವಲು ನಡೆಸಲಾಗುತ್ತಿದೆ. ಅಲ್ಲದೆ 12 ಸಾರ್ವಜನಿಕ ಘೋಷಣಾ (Public Address) ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.
ಹಿಂದಿನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಿ ನಿಗಾವಹಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ಗಳನ್ನು ಬಳಸಲಾಗುತ್ತಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ಮಹೋತ್ಸವ ನಡೆಯುವ ಸಂಪೂರ್ಣ ಪ್ರದೇಶದ ಮೇಲೆ ನಿಗಾ ಇರಿಸಲಾಗುತ್ತದೆ.
ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದೆ.
ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಪೊಲೀಸರು ನೀಡುವ ಸೂಚನೆಗಳನ್ನು ಅನುಸರಿಸುವ ಮೂಲಕ ವಿಟ್ಲ ಪಿಂಡಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಶಾಂತಿಯುತ, ಸುರಕ್ಷಿತ ಹಾಗೂ ಯಶಸ್ವಿಯಾಗಿ ನಡೆಸಲು ಸಹಕರಿಸಬೇಕು ಎಂದು ಪೊಲೀಸ್ ಇಲಾಖೆ ವಿನಂತಿಸಿದೆ.






