ರಾಜಧಾನಿ ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆ ಮತ್ತು ರಸ್ತೆಬದಿ ವಾಹನಗಳ ಅವ್ಯವಸ್ಥಿತ ನಿಲುಗಡೆಯನ್ನು ತಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ. ರಾಜ್ಯ ಸರ್ಕಾರವು 2021ರ ‘ಪಾರ್ಕಿಂಗ್ ನೀತಿ’ ಅಡಿಯಲ್ಲಿ ಕೆಲವು ನಿಮಯಗಳನ್ನು ಬದಲಿಸಿ ಹೊಸ ‘ಕರಡು ಪಾರ್ಕಿಂಗ್ ನಿಯಮ’ಗಳನ್ನು ಪ್ರಕಟಿಸಿದೆ. ಅಲ್ಲದೆ, ನಗರದಲ್ಲಿ ವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಹೊಸ ಕರಡು ಕುರಿತು ಪ್ರಕಟಣೆ ಹೊರಡಿಸಿರುವ ಜಿಬಿಎ, “ಬೆಂಗಳೂರಿನಲ್ಲಿ ಪ್ರಸ್ತುತ ನೋಂದಾಯಿತ ವಾಹನಗಳ ಸಂಖ್ಯೆ 1.28 ಕೋಟಿ ದಾಟಿದೆ. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬಂದು ಸಂಚರಿಸುವ 15 ರಿಂದ 20 ಲಕ್ಷ ವಾಹನಗಳೂ ಸೇರಿ ಒಟ್ಟು ವಾಹನಗಳ ಸಂಖ್ಯೆ ಸುಮಾರು 1.5 ಕೋಟಿಗೆ ತಲುಪಿದೆ. ಈ ಪೈಕಿ 95%ರಷ್ಟು ವಾಹನಗಳು ರಸ್ತೆಬದಿ, ಮನೆ ಅಥವಾ ಕಚೇರಿಗಳ ಮುಂದೆ ನಿಲುತ್ತಿವೆ” ಎಂದು ಹೇಳಿದೆ.
“ವಾಹನಗಳ ಈ ಅನಿಯಂತ್ರಿತ ಪಾರ್ಕಿಂಗ್ನಿಂದಾಗಿ ನಗರದ ರಸ್ತೆಗಳ ಸಂಚಾರ ಸಾಮರ್ಥ್ಯವು ಅರ್ಧದಷ್ಟು ಕುಸಿಯುತ್ತಿದೆ. ಪೀಕ್ ಅವರ್ಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 15 ಕಿ.ಮೀ. ಇದ್ದರೆ, ಬಿಎಂಟಿಸಿ ಬಸ್ಗಳ ವೇಗ ಗಂಟೆಗೆ 10 ಕಿ.ಮೀ.ಗೆ ಕುಸಿದಿದೆ. ರಸ್ತೆಗಳು ಸಾರ್ವಜನಿಕರ ಆಸ್ತಿಯಾಗಿದ್ದರೂ, ಖಾಸಗಿ ವಾಹನಗಳ ನಿಲುಗಡೆಯಿಂದಾಗಿ ಪಾದಚಾರಿಗಳು, ಮಕ್ಕಳು ಹಾಗೂ ಹಿರಿಯ ನಾಗರಿಕರು ಸುರಕ್ಷಿತವಾಗಿ ಓಡಾಡಲು ಜಾಗವಿಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳ ಮೇಲಿನ ಹಕ್ಕನ್ನು ಪುನರ್ ಸ್ಥಾಪಿಸಲು ಪಾರ್ಕಿಂಗ್ ನಿಯಂತ್ರಣ ಅನಿವಾರ್ಯವಾಗಿದೆ” ಎಂದು ಜಿಬಿಎ ಹೇಳಿಕೊಂಡಿದೆ.
ಖಾಲಿ ನಿವೇಶನ ಮಾಲೀಕರಿಗೆ ತೆರಿಗೆ ವಿನಾಯಿತಿ ಆಫರ್
ರಸ್ತೆಗಳ ಮೇಲಿನ ಪಾರ್ಕಿಂಗ್ ಒತ್ತಡ ತಗ್ಗಿಸಲು ಜಿಬಿಎ ಯೋಜನೆಯೊಂದನ್ನು ಮುಂದಿಟ್ಟಿದೆ. ನಗರದಲ್ಲಿರುವ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಜಾಗಗಳನ್ನಾಗಿ ಪರಿವರ್ತಿಸಲು ನಿವೇಶನ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ಭಾರೀ ವಿನಾಯಿತಿ ನೀಡುವುದಾಗಿ ಘೋಷಿಸಿದೆ.
“ಖಾಲಿ ನಿವೇಶನದಲ್ಲಿ ‘ಬಹುಹಂತದ ಕಾರ್ ಪಾರ್ಕಿಂಗ್’ (MLCP) ಅಥವಾ ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಒದಗಿಸಿದರೆ 100%ರಷ್ಟು ಸಂಪೂರ್ಣ ಆಸ್ತಿ ತೆರಿಗೆ ವಿನಾಯಿತಿ ಸಿಗಲಿದೆ. ಖಾಲಿ ಜಾಗವನ್ನು ಇರುವಂತೆಯೇ ಪಾರ್ಕಿಂಗ್ಗೆ ಬಳಸಲು ಅವಕಾಶ ನೀಡಿದರೆ 50%ರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ” ಎಂದು ಜಿಬಿಎ ತಿಳಿಸಿದೆ.
ರಸ್ತೆಬದಿ ಪಾರ್ಕಿಂಗ್ಗೆ ಕಡಿವಾಣ
ಪ್ರಸ್ತಾವಿತ ನಿಯಮಗಳ ಪ್ರಕಾರ, ಇನ್ಮುಂದೆ ರಸ್ತೆಬದಿ ಉಚಿತ ಅಥವಾ ಅನಿರ್ದಿಷ್ಟಾವಧಿ ಪಾರ್ಕಿಂಗ್ಗೆ ಅವಕಾಶವಿರುವುದಿಲ್ಲ. ನಿಗದಿಪಡಿಸಿದ ಶುಲ್ಕ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಖಾಸಗಿ ವಾಹನಗಳ ಪಾರ್ಕಿಂಗ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ನಿಯಮಿತವಾಗಿ ಸಂಚರಿಸುವವರಿಗಾಗಿ ಮಾಸಿಕ ಪಾರ್ಕಿಂಗ್ ಪಾಸ್ಗಳ ಸೌಲಭ್ಯವೂ ಇರಲಿದೆ ಎಂದು ಪ್ರಾಧಿಕಾರ ಹೇಳಿದೆ.
“ಹೆಚ್ಚಿನ ಸಂಚಾರವಿರುವ ಪ್ರಮುಖ ರಸ್ತೆಗಳು ಮತ್ತು ಪೀಕ್ ಅವರ್ಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧಗೊಳ್ಳಲಿದೆ. ಜೊತೆಗೆ, ಬಹುಹಂತದ ಪಾರ್ಕಿಂಗ್ (MLCP) ಕಟ್ಟಡಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನು ನಿರ್ಬಂಧಿಸಲಾಗುತ್ತದೆ. ರಸ್ತೆಯನ್ನು ಅತಿಕ್ರಮಿಸಿ ದೀರ್ಘಾವಧಿ ವಾಹನ ನಿಲ್ಲಿಸುವವರಿಂದ ಹೆಚ್ಚಿನ ದಂಡ ಮತ್ತು ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದೆ” ಎಂದು ಜಿಬಿಎ ಹೇಳಿದೆ.
ಈ ಲೇಖನ ಓದಿದ್ದೀರಾ?: ಶೇ.7.8 ಜಿಡಿಪಿ ಅಪ್ಪಟ ಕಣ್ಕಟ್ಟು ಎಂದರು ನಿವೃತ್ತ ಅಧಿಕಾರಿ ಸುಭಾಷ್ ಗರ್ಗ್!
ಕಳೆದ ಹಲವು ದಶಕಗಳಿಂದ ಬೆಂಗಳೂರಿನಲ್ಲಿ ನಿರ್ಮಿಸಲಾದ ಅನೇಕ ಕಟ್ಟಡಗಳಲ್ಲಿ ಪಾರ್ಕಿಂಗ್ ಜಾಗವೇ ಇಲ್ಲದಿರುವುದು ಅಥವಾ ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಸಮಸ್ಯೆಯ ಪ್ರಮುಖ ಕಾರಣವೆಂದು ಪ್ರಾಧಿಕಾರ ಹೇಳಿದೆ. ಇಂತಹ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕರಡು ನಿಯಮಗಳಲ್ಲಿ ಪೋಲಿಸ್ ಮತ್ತು ನಗರಪಾಲಿಕೆಗಳಿಗೆ ವಿಶೇಷ ಅಧಿಕಾರ ನೀಡಿದೆ.
ಸಾರ್ವಜನಿಕ ಸಲಹೆಗಳಿಗೆ ಆಹ್ವಾನ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರಡು ಪಾರ್ಕಿಂಗ್ ನಿಯಮಗಳನ್ನು ಈಗಾಗಲೇ ನಗರಾಭಿವೃದ್ಧಿ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಆ ಕರಡನ್ನು ಓದಿ ಸಾರ್ವಜನಿಕರು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು 2026ರ ಸೆಪ್ಟೆಂಬರ್ 10ರ ಒಳಗೆ ಇ-ಮೇಲ್ ([email protected]) ಅಥವಾ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಲ್ಲಿಸಲು ಅವಕಾಶವಿದೆ ಎಂದು ಜಿಬಿಎ ಹೇಳಿದೆ.
ಸಾರ್ವಜನಿಕರಿಂದ ಬರುವ ಸಲಹೆಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರವು ಈ ನಿಯಮಗಳನ್ನು ಅಂತಿಮಗೊಳಿಸಲಿದೆ. ನಗರದ ದೀರ್ಘಕಾಲದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಠಿಣ ಕ್ರಮಗಳು ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಮನವಿ ಮಾಡಿದೆ.





